ಭಾರೀ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ತುಮುಲ್) ನಿರ್ದೇಶಕರ ಸ್ಥಾನಗಳಿಗೆ ನಡೆಸಿದ್ದ ಚುನಾವಣಾ ಫಲಿತಾಂಶ ಜನವರಿ 9ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ ಒಟ್ಟು 10 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ತುಮಕೂರು ಗ್ರಾಮಾಂತರ, ತಿಪಟೂರು, ಮಧುಗಿರಿ, ಪಾವಗಡ ಹಾಗೂ ಗುಬ್ಬಿ ಸೇರಿದಂತೆ ಒಟ್ಟು 5 ತಾಲೂಕುಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಉಳಿದಂತೆ ಕುಣಿಗಲ್, ಸಿರಾ, ಕೊರಟಗೆರೆ ತಾಲೂಕುಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ತುರುವೇಕೆರೆ ಮತ್ತು ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ತುಮಕೂರು | ಆರ್‌ಟಿಒ ಬ್ರೋಕರ್ ಮನೆ ಮೇಲೆ ಲೋಕಾಯುಕ್ತ ದಾಳಿ
ತುಮಕೂರು ತಾಲೂಕಿನಿಂದ ಎಚ್ ಎಂ ನಂಜೇಗೌಡ, ಗುಬ್ಬಿಯಿಂದ ಭಾರತೀದೇವಿ ಕೆ ಪಿ, ಚಿಕ್ಕನಾಯಕನಹಳ್ಳಿಯಿಂದ ಬಿ ಎನ್ ಶಿವಪ್ರಕಾಶ್, ತಿಪಟೂರಿನಿಂದ ಎಂ ಕೆ ಪ್ರಕಾಶ್, ತುರುವೇಕೆರೆಯಿಂದ ಸಿ ವಿ ಮಹಲಿಂಗಯ್ಯ, ಕುಣಿಗಲ್ ಕ್ಷೇತ್ರದಿಂದ ಡಿ ಕೃಷ್ಣಕುಮಾರ್, ಮಧುಗಿರಿಯಿಂದ ಬಿ ನಾಗೇಶ್ ಬಾಬು, ಕೊರಟಗೆರೆಯಿಂದ ಸಿದ್ದಗಂಗಯ್ಯ ಪಿ, ಸಿರಾ ತಾಲೂಕಿನಿಂದ ಎಸ್ ಆರ್ ಗೌಡ ಹಾಗೂ ಪಾವಗಡದಿಂದ ಚಂದ್ರಶೇಖರ ರೆಡ್ಡಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
