ಅಪರೂಪದ ಎರಡು ಆಮೆಗಳನ್ನು ಬೈಕ್‌ನಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರು ಕ್ರಾಸ್ ಬಳಿ ನಡೆದಿದೆ.
ಗುಬ್ಬಿ ತಾಲೂಕಿನ ಕಡಬ ಹೋಬಳಿ ಹರಿದೇವನಹಳ್ಳಿ ಗ್ರಾಮದ ಹನುಮಂತರಾಜು ಹಾಗೂ ಸುರೇಶ ಬಂಧಿತ ಆರೋಪಿಗಳು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಬ್ಬಿ ತಾಲೂಕಿನ ಕಲ್ಲೂರು ಕ್ರಾಸ್ ಬಳಿ ಕರ್ತವ್ಯನಿರತ ಚುನಾವಣಾ ಸಿಬ್ಬಂದಿಗಳ ತಪಾಸಣಾ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಎರಡು ಆಮೆಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೈಕ್ ಸಹಿತ ಬಂಧಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿದ್ಯುತ್ ಸಂಪರ್ಕಕ್ಕೆ ವಿಧಿಸಿರುವ ಶುಲ್ಕವನ್ನು ಕೂಡಲೇ ಕೈ ಬಿಡಬೇಕು: ಬಡಗಲಪುರ ನಾಗೇಂದ್ರ
ಚೆಕ್ ಪೋಸ್ಟ್‌ನಲ್ಲಿದ್ದ ಸಿಬ್ಬಂದಿ ಯೋಗಾನಂದ ಅವರು ಆರೋಪಿಗಳ ಬಳಿ ಇದ್ದ ಚೀಲ ಪರಿಶೀಲಿಸಿದಾಗ ಆಮೆಗಳ ಸಾಗಾಣಿಕೆ ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ವಲಯ ಅರಣ್ಯಾಧಿಕಾರಿ ಸತೀಶಚಂದ್ರ, ಉಪ ವಲಯಾಧಿಕಾರಿ ಸಿದ್ದಲಿಂಗಮೂರ್ತಿ ಮುಂದಿನ ತನಿಖೆ ನಡೆಸಿದ್ದಾರೆ.
