ತುಮಕೂರು : ಸಂವಿಧಾನ ರಚನೆಯಾದಾಗಿನಿಂದ ಯಾರು ಸಂವಿಧಾನ ವಿರೋಧ ಮಾಡುತ್ತಿದ್ದರೋ ಅಂತಹ ಸಂವಿಧಾನ ದ್ರೋಹಿ ಶಕ್ತಿಗಳಿಗೆ ಅಧಿಕಾರ ಸಿಕ್ಕಿದ್ದು, ಅಂತಹ ಶಕ್ತಿಗಳನ್ನು ಸೋಲಿಸಿ ಅಧಿಕಾರದಿಂದ ದೂರವಿಡಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ತಿಪಟೂರು ಜನಸ್ಪಂದನ ಟ್ರಸ್ಟ್ ಮತ್ತು ತುಮಕೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ತುಮಕೂರು ಜಿಲ್ಲೆಯ ಡಿಗ್ರಿ ಕಾಲೇಜು ವಿದ್ಯಾಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದ ಸಂವಿಧಾನ ಅರಿವು ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಈಗ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡಿ ಎಂದು ಕೇಳಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ, ಸಂವಿಧಾನದಲ್ಲಿ ಸಮಾನತೆ ಕೊಟ್ಟಿರುವುದರಿಂದ ಒಂದು ಧರ್ಮದಂತೆ ಸಮಾಜ ನಡೆಯಬೇಕು ಎಂದು ಮನುವಾದ ಪ್ರತಿಪಾದಿಸುತ್ತಿದ್ದವರು ಈ ಸಂವಿಧಾನವನ್ನು ವಿರೋಧ ಮಾಡಿದರು. ಮನುಸ್ಮೃತಿ ಆಶಯದವರು ಕೆಲವರು ಮಾತ್ರ ವಿದ್ಯೆ, ಸಂಪತ್ತು, ಅಧಿಕಾರ ಅನುಭವಿಸಬೇಕು ಎಂದು ಸಮಾನತೆ ನೀಡದೆ ಲಿಂಗ ತಾರತಮ್ಯ ಇರಬೇಕು ಎಂದುಕೊಂಡು ಸಂವಿಧಾನದ ಮೂಲ ಆಶಯಕ್ಕೆ ವಿರೋಧಿಗಳಾಗಿದ್ದಾರೆ ಎಂದರು.

ಸಂವಿಧಾನದಲ್ಲಿ ಜಾತ್ಯತೀತೆ ಹೇಳುತ್ತಿದ್ದು, ಸಮಾನವಾಗಿ ಬದುಕಬೇಕು ಎಂದು ಸಂವಿಧಾನ ಹೇಳಿದ್ದರೂ, ಒಂದು ಧರ್ಮ ಮಾತ್ರ ಬೇಕು ಎಂದು ಹೇಳಿದರೆ ಇತರೆ ಧರ್ಮದವರು ದ್ವಿತೀಯ ದರ್ಜೆ ಪ್ರಜೆಗಳಾಗಿ ಬದುಕಬೇಕಾಗುತ್ತದೆ, ಆದ್ದರಿಂದ ಸಂವಿಧಾನ ವಿರೋಧಿ ಶಕ್ತಿಗಳನ್ನು ವಿರೋಧಿಸಬೇಕು ಎಂದು ಹೇಳಿದರು.
ಒಂದು ದೇಶ ನಡಯಬೇಕೆಂದರೆ ಒಂದು ಚೌಕಟ್ಟಿರಬೇಕು, ಆ ಚೌಕಟ್ಟೇ ಸಂವಿಧಾನವಾಗಿದ್ದು, ಭಾರತ ದೇಶ ಹಲವು ಜಾತಿ, ಧರ್ಮಗಳನ್ನು ಹೊಂದಿರುವಂತಹ ದೇಶ, ಈ ಹಿನ್ನೆಲೆಯಲ್ಲಿ ಎಲ್ಲಾ ತಾರತಮ್ಯಗಳನ್ನು ಒಗ್ಗೂಡಿಸಿಕೊಂಡು ವಿಶ್ವಾಸದಿಂದ ಬದುಕಲು ಸಂವಿಧಾನದಿಂದ ಮಾತ್ರ ಸಾಧ್ಯ, ಸಂವಿಧಾನ ಒಂದು ದೇಶವನ್ನು ಸಮಾನತೆಯಿಂದ ನಡೆಸುವಂತಹವುದು, ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಸಂವಿಧಾನದ ಅರಿವು ಅಗತ್ಯವಿದೆ ಎಂದು ಹೇಳಿದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್(ಟೂಡಾ) ಪ್ರಾಸ್ತಾವಿಕ ಮಾತಗಳನ್ನಾಡಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಅಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ಧ್ವಾರಕನಾಥ್, ತುಮಕೂರು ವಿ.ವಿ.ಯ ಉಪಕುಲಪತಿ ಎಂ.ವೆಂಕಟೇಶ್ವರಲು, ಸಿ.ಜೆ.ಲಕ್ಷ್ಮೀಪತಿ, ಬೆಂಗಳೂರು ವಿ.ವಿ. ಕುಲಸಚಿವ ರಮೇಶ್, ಎಸ್.ನಾಗಣ್ಣ ಉಪಸ್ಥಿತರಿದ್ದರು.