ಪಾಕಿಸ್ತಾನದ ಮೇಲೆ ಯುದ್ದ ಸಾರುವ ಅಗತ್ಯವಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು, ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಮಾತನಾಡಬೇಕು. ದೇಶ ಇದ್ದರೆ ನಾವು, ನಾವ್ಯಾರೂ ದೇಶಕ್ಕಿಂತ ದೊಡ್ಡವರಲ್ಲ ಎಂದು ಹೇಳಿದರು.
ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿರುವ ತಮ್ಮ ಕಚೇರಿಯಲ್ಲಿಂದು ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಗ್ರರ ದಾಳಿ ನಡೆದ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಯಾವ ರೀತಿ ಮಾತನಾಡಿದ್ದಾರೆ ಎನ್ನುವುದನ್ನು ಸಿದ್ದರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ಭಾರತ ಮಾತೆಗೆ ಅಪಚಾರ ಮಾಡುವ ರೀತಿ ಮಾತನಾಡುವನ್ನು ಯಾರೂ ಸಹಿಸುವುದಿಲ್ಲ ಎಂದರು.
ಸಿದ್ದರಾಮಯ್ಯ, ಸಿದ್ದರಾಮಯ್ಯನವರಾಗಿದ್ದರೇ ಒಳ್ಳೆಯದು. ಅವರು ಸಿದ್ದರಾಮಯ್ಯನವರಾಗದೇ ಬೇರೊಂದು ಸಮುದಾಯದ ಓಲೈಕೆಯಲ್ಲೇ ಮಾತನಾಡಿದರೆ ಅದು ಅವರಿಗೆ ಶೋಭೆ ತರುವುದಿಲ್ಲ. ದೇಶದ ಅಭದ್ರತೆಗೆ ಕಾರಣವಾಗುವ ಈ ರೀತಿಯ ಹೇಳಿಕೆಗಳನ್ನು ಅವರು ಕೊಡಬಾರದು ಎಂದು ಅವರು ಹೇಳಿದರು.
ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರನ್ನು ಧರ್ಮ ಕೇಳಿ ಕೊಲೆ ಮಾಡುತ್ತಾರೆ ಎಂದರೆ ಏನರ್ಥ. ಉಗ್ರರ ದಾಳಿ ಬಗ್ಗೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೊಂಚ ಲೋಪವಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹೀಗಿದ್ದರೂ ಸಹ ಅವಶ್ಯಕತೆ ಇಲ್ಲದ ಹೇಳಿಕೆಗಳನ್ನು ನೀಡುವುದೆಲ್ಲ ಸರಿಯಲ್ಲ, ಕ್ಷುಲ್ಲಕ ಭಾಷೆ ಬಳಕೆ ಮಾಡಿ ಜನರಲ್ಲಿ ಕ್ರೋಧ ಉಂಟು ಮಾಡಬಾರದು ಎಂದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕಾಶ್ಮೀರದ ಮೇಲಿದ್ದ 370ನೇ ವಿಧಿಯನ್ನು ತೆಗೆದ ಮೇಲೆ ಪ್ರವಾಸೋದ್ಯಮದಿಂದ 9-10 ಸಾವಿರ ಕೋಟಿ ಬಂದಿದೆ. ಅದನ್ನೆಲ್ಲಾ ಕಾಶ್ಮೀರದ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ. ಅಲ್ಲಿನ ಜನ ಖುಷಿಯಾಗಿದ್ದಾರೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಪಾಕ್ ಪ್ರಜೆಗಳು ದೇಶ ತೊರೆಯುವಂತೆ ಆದೇಶಿಸಿದೆ. ಈ ದೇಶವನ್ನು ರಾಜ್ಯ ಸರ್ಕಾರಗಳು ಪಾಲನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ಗೃಹ ಸಚಿವರುಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ಅವರು ಹೇಳಿದರು.
ಏ. 30 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವಣ್ಣನ ಅನುಯಾಯಿಗಳು ಭಾಗಹಿಸಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕ ಜ್ಯೋತಿಗಣೇಶ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ ಮತ್ತಿತರರು ಉಪಸ್ಥಿತರಿದ್ದರು.