ಕಾನೂನು ಬದ್ದ ಎಂ.ಎಸ್.ಪಿ ಕಾಯ್ದೆಗಾಗಿ ಕಳೆದ 49 ದಿನಗಳಿಂದ ದೆಹಲಿಯಲ್ಲಿ ಅಮರಾಣಾಂತ ಉಪವಾಸ ಕೈಗೊಂಡಿರುವ ರೈತ ಮುಖಂಡರಾದ ಜಗದೀಶ್ ದಲೈವಾಲಾ ಅವರ ಆರೋಗ್ಯ ದಿನೇ ದಿನೇ ಹದಗೆಡುತ್ತಿದ್ದು, ಸರಕಾರ ಕೂಡಲೇ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಸಮಸ್ಯೆಯ ಇತ್ಯರ್ಥಕ್ಕೆ ಪ್ರಯತ್ನಿಸಬೇಕು ಎಂದು ಒತ್ತಾಯಿಸಿ ಇಂದು ಸಂಯುಕ್ತ ಹೋರಾಟ-ಕರ್ನಾಟಕದ ನೇತೃತ್ವದಲ್ಲಿ ರೈತ, ಪ್ರಗತಿಪರ, ಕಾರ್ಮಿಕ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಸಂಯುಕ್ತ ಹೋರಾಟ-ಕರ್ನಾಟಕದ ಜಿಲ್ಲಾ ಸಂಚಾಲಕ ಸಿ.ಯತಿರಾಜು, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು,ಎಐಕೆಕೆಎಸ್‌ನ ಎಸ್.ಎನ್.ಸ್ವಾಮಿ, ಪ್ರಾಂತ ರೈತ ಸಂಘದ ಬಿ.ಉಮೇಶ್,ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಅಧ್ಯಕ್ಷ ನಾಗರತ್ನಮ್ಮ,ರೈತ ಮುಖಂಡ ಚಿಕ್ಕ ಬೋರೇಗೌಡ, ಲೋಕೇಶ್,ಶಬ್ಬೀರ, ಎಐಟಿಯುಸಿಯ ಗಿರೀಶ್,ಅಲ್ ಇಂಡಿಯಾ ಕಿಸಾನ್ ಸಭಾದ ಕಂಬೇಗೌಡ ಸೇರಿದಂತೆ ನೂರಾರು ಜನ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ಕೇಂದ್ರ ಸರಕಾರದ ಹಠ ಮಾರಿ, ರೈತ ವಿರೋಧಿ ನೀತಿಯನ್ನು ಖಂಡಿಸಿದರು.

ಈ ವೇಳೆ ಮಾತನಾಡಿದ ಸಂಯುಕ್ತ ಹೋರಾಟ-ಕರ್ನಾಟಕದ ಸಂಚಾಲಕ ಸಿ.ಯತಿರಾಜು,ಕೇಂದ್ರ ಸರಕಾರ ಈ ಹಿಂದಿನ ವರ್ಷದಲ್ಲಿ ನಡೆದ ರೈತರು 385 ದಿನಗಳ ಹೋರಾಟಕ್ಕೆ ಮಣಿದು ರೈತರಿಗೆ ಅಪಾಯಕಾರಿಯಾಗಿದ್ದ ಮೂರು ಮಸೂದೆಗಳನ್ನು ವಾಪಸ್ ಪಡೆದಿದ್ದೇ ಅಲ್ಲದೆ,ಕಾನೂನು ಬದ್ದ ಎಂ.ಎಸ್.ಪಿ. ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಲಿಖಿತ ಭರವಸೆಯನ್ನು ನೀಡಿತ್ತು.ಆದರೆ ಭರವಸೆ ನೀಡಿ ಮೂರು ವರ್ಷ ಕಳೆದರೂ ನಿರ್ಲಕ್ಷ್ಯ ಮಾಡಿದೆ. ಇದನ್ನು ವಿರೋಧಿಸಿ,ಎಂ.ಎಸ್.ಪಿ.ಗೆ ಕಾಯ್ದೆಗಾಗಿ ಒತ್ತಾಯಿಸಿ,ಸರಕಾರ ರೈತರೊಂದಿಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿ, ನಮ್ಮ ನಾಯಕರಾದ ಜಗದೀಶ್ ದಲೈವಾಲಾ ಅವರು ನವದೆಹಲಿಯಲ್ಲಿ ಕಳೆದ 48 ದಿನಗಳಿಂದ ಅಮರಣಾಂತರ ಉಪವಾಸ ಕೈಗೊಂಡಿದ್ದಾರೆ. ಸರಕಾರ ಸೌಜನ್ಯಕ್ಕೂ ಅವರೊಂದಿಗೆ ಮಾತುಕತೆ ನಡೆಸಿಲ್ಲ.ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದ್ದು, ಒಂದು ವೇಳೆ ಏನಾದರೂ ಅನಾಹುತವಾದರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ. ಕೂಡಲೇ ಮಾತುಕತೆ ನಡೆಸಬೇಕೆಂದು ಅಗ್ರಹಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಕೇಂದ್ರ ಸರಕಾರದ ಉದ್ಯಮಿಗಳ ಮನೆಯ ಸಣ್ಣ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸುವ ಪ್ರಧಾನ ಮಂತ್ರಿಗೆ ಕಳೆದ 49 ದಿನಗಳಿಂದ ಜಗದೀಶ್ ದಲೈವಾಲಾ ಅವರು ಉಪವಾಸ ಕೈಗೊಂಡಿರುವುದು ತಿಳಿದಿಲ್ಲದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕಾರ್ಮಿಕರು ಸಾಯಲಿ ಎಂಬುದೇ ಇವರ ಧೋರಣೆಯಾಗಿದೆಯೇ ಎಂಬ ಅನುಮಾನ ಹುಟ್ಟುತ್ತಿದೆ. ಉಪವಾಸ ನಿರತ ದಲೈವಾಲಾ ಅವರ ದೇಹದಲ್ಲಿ ಬಹು ಅಂಗಾಂಗ ವೈಫಲ್ಯ ಕಾಣಿಸಿಕೊಂಡಿದೆ. ಅವರ ಪ್ರಾಣಕ್ಕೇನಾದರೂ ಕುತ್ತಾದರೆ, ಇಡೀ ರಾಷ್ಟ್ರ ದಲ್ಲಿ ರಕ್ತ ಕ್ರಾಂತಿಯಾಗಲಿದೆ.ಕೂಡಲೇ ರಾಷ್ಟçಪತಿಗಳು, ಪ್ರಧಾನಿ ಮದ್ಯ ಪ್ರವೇಶ ಮಾಡಿ, ಮಾತುಕತೆ ನಡೆಸಬೇಕು.ಹಾಗೆಯೇ ರಾಜ್ಯದ ಮುಖ್ಯಮಂತ್ರಿಗಳು ಉಪವಾಸ ನಿರತ ರೈತ ಮುಖಂಡರೊಂದಿಗೆ ಮಾತುಕತೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯಬೇಕೆಂದು ಅಗ್ರಹಿಸಿದರು.

ಎಐಕೆಕೆಎಸ್‌ನ ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ ಮಾತನಾಡಿ,ರೈತರ ಹೋರಾಟಕ್ಕೆ ಮಣಿದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಒಕ್ಕೂಟ ಸರಕಾರ, ಉದ್ಯಮೆದಾರರ ಒತ್ತಾಯಕ್ಕೆ ಮಣಿದು ಕೃಷಿ ಮಾರುಕಟ್ಟೆಯ ಹೊಸ ನೀತಿಯ ಮೂಲಕ ಅತ್ಯಂತ ಅಪಾಯಕಾರಿಯಾದ ರೈತ ವಿರೋಧಿ ನೀತಿಗಳನ್ನು ಜಾರಿಗೆ ತರಲು ಹೊರಟಿದೆ.ಸರಕಾರ ಮಂಡಿಸಲು ಮುಂದಾಗಿರುವ ಹೊಸ ಮಾರುಕಟ್ಟೆ ನೀತಿಯಲ್ಲಿ ಎಂ.ಎಸ್.ಪಿ.ಗೆ ಅವಕಾಶವೇ ಇಲ್ಲ. ವಿದ್ಯುತ್ ಖಾಸಗೀಕರಣ, ರೈತರ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಹಲವು ಆಘಾತಕಾರಿ ವಿಚಾರಗಳಿವೆ. ಹಾಗಾಗಿ ಇವುಗಳ ವಿರುದ್ದ ದೊಡ್ಡಮಟ್ಟದಲ್ಲಿ ಸಂಘಟಿತ ಹೋರಾಟ ಅನಿವಾರ್ಯ ಎಂದರು.
ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.