ಫಲಾನುಭವಿಗಳಿಗೆ ವಿವಿಧ ಇಲಾಖೆ, ನಿಗಮಗಳಡಿ ಅನುಷ್ಠಾನವಾಗುವ ಸಾಲ ಸೌಲಭ್ಯವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬ್ಯಾಂಕುಗಳ ಮೂಲಕ ತಲುಪಿಸಲಾಗುತ್ತಿದ್ದು, ಈ ಸೌಲಭ್ಯಗಳಲ್ಲಿ ಆಯ್ಕೆಯಾಗಿರುವ ರೈತರು, ಬಡವರು, ಮಹಿಳೆಯರು ಹಾಗೂ ನಿರ್ಗತಿಕರ ಅರ್ಜಿಗಳಿಗೆ ಆದ್ಯತೆಯ ಮೇಲೆ ಸಾಲ ಮಂಜೂರಾತಿ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಭು ಜಿ. ಸೂಚಿಸಿದ್ದಾರೆ.
ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಭೆ ಹಾಗೂ ಜಿಲ್ಲಾ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡದೆ ಹೆಚ್ಚಿನ ಕಾಲಾವಧಿ ತೆಗೆದು ಕೊಳ್ಳುವ ಬ್ಯಾಂಕುಗಳ ವಿರುದ್ಧ ಕ್ರಮಕೈಗೊಳ್ಳಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಂಸದರಿಗೆ ವರದಿ ನೀಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಕೈಗಾರಿಕೋದ್ಯಮಕ್ಕಾಗಿ ಸಾಕಷ್ಟು ಅವಕಾಶಗಳಿದ್ದು, ಬ್ಯಾಂಕುಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಎಂಎಸ್‌ಎಂಇ ವಲಯದ ಮುಖ್ಯವಾಗಿ ಪಿಎಂಇಜಿಪಿ ಹಾಗೂ ವಿಶ್ವಕರ್ಮ ಯೋಜನೆಯಲ್ಲಿ ಸಾಲದ ಸೌಲಭ್ಯ ಕಲ್ಪಿಸಲು ಸೂಚಿಸಿದ್ದಾರೆ.

ಪಿಎಂಎಫ್‌ಎಂಇ ಮತ್ತು ಎನ್‌ಎಲ್‌ಎಂ ಯೋಜನೆಗಳು ಯುವಕರಿಗೆ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಟಿಸುವಲ್ಲಿ ಮಹತ್ತರ ಪಾತ್ರವಹಿಸುತ್ತಿದ್ದು, ಬ್ಯಾಂಕುಗಳು ಆಧ್ಯತೆಯ ಮೇರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಗಳಿಗೆ ಸಾಲ ಸೌಲಭ್ಯ ಒದಗಿಸಲು ಸೂಚನೆ ನೀಡಿದ್ದಾರೆ.
ನಂತರ ಕೃಷಿ, ತೋಟಗಾರಿಕೆ, ಕೈಗಾರಿಕೆ ಹಾಗೂ ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಯಡಿ ಸಾಲ ವಿತರಣೆಯಾಗಿರುವ ಬಗ್ಗೆ ಪ್ರಗತಿ ಪರಿಶೀಲಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಚೈತನ್ಯ ಕಂಚಿ ಬೈಲ್ ಮಾತನಾಡಿ, 2024ರ ಅಕ್ಟೋಬರ್ 15 ರಿಂದ 2025ರ ಜನವರಿ 15ರವರೆಗೆ ನಡೆದಂತಹ ಜನ ಸುರಕ್ಷಾ ಅಭಿಯಾನದಲ್ಲಿ ಹಣಕಾಸು ಸೇವೆಗಳ ಇಲಾಖೆಯ ನಿರ್ದೇಶನದಂತೆ ಪಿಎಂಎಸ್‌ಬಿವೈ ಹಾಗೂ ಪಿಎಂಜೆಜೆಬಿವೈ ಯೋಜನೆಗಳ ಅಡಿ ಪ್ರತಿ ಗ್ರಾಮ ಪಂಚಾಯತಿಗಳು ನೋಂದಾಯಿಸಲು ನಡೆದಂತಹ ಅಭಿಯಾನದಲ್ಲಿ ಪಿಎಂಜೆಜೆಬಿವೈನಲ್ಲಿ ಶೇ.53 ಹಾಗೂ ಪಿಎಂಎಸ್‌ಬಿವೈನಲ್ಲಿ ಶೇ.76ರಷ್ಟು ಪ್ರಗತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಡಿಸೆಂಬರ್ ಮಾಹೆ ಅಂತ್ಯಕ್ಕೆ ವಾರ್ಷಿಕ ಸಾಲ ಯೋಜನೆಯಡಿ 8405 ಕೋಟಿ ರೂ.ಗಳ ಸಾಲ ನೀಡಲು ಗುರಿ ಹೊಂದಲಾಗಿತ್ತು. ಇದರಲ್ಲಿ ಕೃಷಿ ಸಾಲ ಹಾಗೂ ಕೃಷಿಗೆ ಪೂರಕವಾದ ಚಟುವಟಿಕೆಗಳಿಗಾಗಿ 6741 ಕೋಟಿ ರೂ., ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗಾಗಿ 2124 ಕೋಟಿ ರೂ.ಗಳನ್ನು ಹಾಗೂ ವ್ಯಾಪಾರ ಮತ್ತು ಸೇವೆಗಳಿಗಾಗಿ 178 ಕೋಟಿ ರೂ.ಗಳ ಸಾಲ ನೀಡುವ ಮೂಲಕ ಶೇಕಡ 108ರಷ್ಟು ಗುರಿ ಮಿರಿ ಸಾಧನೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಆರ್‌ಬಿಐನ ಡಿಜಿಎಂ ವಿ. ಹರಿಪ್ರಸಾದ್ ಮಾತನಾಡುತ್ತಾ, ಬ್ಯಾಂಕುಗಳು ತಮಗೆ ನೀಡಲಾಗಿರುವಂತಹ ಎಲ್ಲಾ ಆಧ್ಯತಾವಲಯಗಳ ಗುರಿಯನ್ನು ತಲುಪಬೇಕೆಂದು ಬ್ಯಾಂಕುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಹಾಲಸಿದ್ದಪ್ಪ ಪೂಜೇರಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಬ್ಯಾಂಕಿನ ಅಧಿಕಾರಿಗಳು ಸೇರಿದಂತೆ ಮತ್ತಿತರರು ಹಾಜರಿದ್ದರು.