ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು, ಸಮಸ್ಯೆಗೆ ಪರಿಹಾರ ಕಂಡು ಹಿಡಿಯಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಡಾ ಎಂ ವೆಂಕಟೇಶ್ವರಲು ತಿಳಿಸಿದರು.
ತುಮಕೂರು ನಗರದ ಬಾಲಭವನದಲ್ಲಿ ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಜಿಲ್ಲೆಯ ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ತಂತ್ರಜ್ಞಾನದಿಂದ ಮಾಹಿತಿಯನ್ನು ಪಡೆಯಲಷ್ಟೇ ಸಾಧ್ಯ. ಜ್ಞಾನವನ್ನು ಪಡೆಯಲು ಸಾಧ್ಯವಿಲ್ಲ. ಇಂದು ಬುಕ್‌ಲೆಸ್ ಲೈಬ್ರರಿ, ಕ್ಲಾಸ್‌ಲೆಸ್ ಟೀಚರ್ ಇವುಗಳನ್ನೇ ಕಾಣುವಂತಾಗಿದೆ. ಶಿಸ್ತು ಮತ್ತು ಎಚ್ಚರಿಕೆ ಶಿಕ್ಷಣದಲ್ಲಿ ಮರೆಯಾಗಿದ್ದು, ವಿದ್ಯಾರ್ಥಿಯ ಬುದ್ದಿಮತ್ತೆ ಕೂಡ ಉನ್ನತ ಮಟ್ಟದಲ್ಲಿದೆ. ಹಾಗಾಗಿ ಶಿಕ್ಷಕರು ಸದಾ ಜಾಗರೂಕರಾಗಿಬೇಕಾದ ಅನಿವಾರ್ಯತೆ ಇದೆ” ಎಂದರು.
“ಇಂದಿನ ಹೊಸ ಅವಿಷ್ಕಾರಗಳು ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಬರುತ್ತಿವೆ. ಹಾಗಾಗಿ ಹಿಂದಿನ ಶಿಕ್ಷಕರಿಗೂ, ಈಗಿನ ಶಿಕ್ಷಕರಿಗೂ ಬೋಧನ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ನಾವು ಓದುವಾಗ ಹೇಗೆ? ಎಲ್ಲಿಂದ? ಯಾವಾಗ? ಹೀಗೆ ಪ್ರಶ್ನೆಗಳನ್ನು ಮಾಡಿದರೆ ಶಿಕ್ಷಕರಾಗಲಿ, ಪೋಷಕರಾಗಿ ಸಮರ್ಪಕ ಉತ್ತರ ನೀಡುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಮಗು ತನ್ನ ಪ್ರತಿ ಪ್ರಶ್ನೆಗೂ ಶಿಕ್ಷಕರಿಂದ ಉತ್ತರ ಬಯಸುತ್ತದೆ. ನಮ್ಮ ಬಳಿ ವಿದ್ಯಾರ್ಥಿಯ ಪ್ರತಿ ಪ್ರಶ್ನೆಗೆ ಉತ್ತರವಿದ್ದರೆ ಮಾತ್ರ ಉತ್ತಮ ಶಿಕ್ಷಕನಾಗಲು ಸಾಧ್ಯ” ಎಂದರು.
ತುಮಕೂರು ನಗರ ಶಾಸಕ ಜಿ ಬಿ ಜ್ಯೋತಿಗಣೇಶ್ ಮಾತನಾಡಿ, “ತಂತ್ರಜ್ಞಾನ ಬದಲಾದಂತೆ ಕಲಿಕಾ ಕ್ರಮ ಹಾಗೂ ಬೋಧನಾ ಕ್ರಮ ಎರಡೂ ಬದಲಾಗಿವೆ. ನಾನು ಸಂಸದರ ಮಗನಾಗಿದ್ದೂ, ಶಿಕ್ಷಕರ ಕೈಯಲ್ಲಿ ಒದೆ ತಿಂದಿದ್ದೇನೆ. ಇಂದು ಆ ರೀತಿ ನಡೆದರೆ ಶಿಕ್ಷಕರಿಗೆ ನೋಟಿಸ್ ನೀಡಲಾಗುತ್ತದೆ. ಆದರೂ ಈ ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಆತ್ಮ ಸಾಕ್ಷಿಯಾಗಿ ಕೆಲಸ ಮಾಡಬೇಕಿದೆ. ಪ್ರತಿಫಲಾಪೇಕ್ಷೆ ಇಲ್ಲದೆ ಕಲಿಸುತ್ತಿರುವ ಅವರ ನಿಸ್ವಾರ್ಥ ಮನೋಭಾವಕ್ಕೆ ನಾವು ಗೌರವ ಸಲ್ಲಿಸಬೇಕಿದೆ. ಇಂತಹ ಕಾರ್ಯಕ್ರಮಗಳು ಮತ್ತಷ್ಟು ಹೆಚ್ಚಬೇಕಿದೆ. ಮತ್ತಷ್ಟು ಹುರಿದುಂಬಿಸುವ ಕೆಲಸ ಮಾಡಬೇಕಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಎಚ್ ಎನ್ ದೀಪಕ್ ಮಾತನಾಡಿ, “ಶಿಕ್ಷಣದಿಂದ ಮಾತ್ರ ದೇಶವನ್ನು ಸದೃಢವಾಗಿ ಕಟ್ಟಲು ಸಾಧ್ಯ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಕೊಂಡಿಯಾಗಿ ಕರುನಾಡ ವಿಜಯಸೇನೆ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿಯೇ ಅತ್ಯುತ್ತಮ ಶಿಕ್ಷಕರಿಗೆ ವಿದ್ಯಾವಾರಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಶಿಕ್ಷಕರು, ರೈತರು, ಸೈನಿಕರು ಈ ದೇಶದ ಕಣ್ಣುಗಳಿದ್ದಂತೆ, ಅವರ ಬಗ್ಗೆ ಕರುನಾಡ ವಿಜಯಸೇನೆ ವಿಶೇಷ ಕಾಳಜಿಯನ್ನು ಹೊಂದಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ಶಿಕ್ಷಣದಿಂದ ಮಕ್ಕಳ ಭವಿಷ್ಯ ಬದಲಾಗಲಿದೆ. ಮಾನಸಿಕವಾಗಿ ಮಕ್ಕಳನ್ನು ಸದೃಢವಾಗಿಸಲು ಶಿಕ್ಷಕರು ಪ್ರಯತ್ನಿಸಬೇಕು” ಎಂದರು.
ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, “ಶಿಕ್ಷಣ ಎಲ್ಲ ಸಮಸ್ಯೆಗಳಿಂದ ಮನುಷ್ಯನನ್ನು ಮುಕ್ತಗೊಳಿಸುವ ಆಸ್ತ್ರ ಎಂಬ ಹಿರಿಯರ ಮಾತಿನಂತೆ ಎಲ್ಲರೂ ವಿದ್ಯಾವಂತರಾಗಿ, ಈ ದೇಶವನ್ನು ಮತ್ತಷ್ಟು ಬಲಿಷ್ಟವಾಗಿ ಕಟ್ಟಲು ತಮ್ಮ ಕೈಲಾದ ಕೊಡುಗೆ ನೀಡಬೇಕಾಗಿದೆ. ಹಾಗೆಯೇ ಭವಿಷ್ಯದ ಪ್ರಜೆಗಳನ್ನು ತಯಾರಿಸುವ ಶಿಕ್ಷಕರೂ ಕೂಡ ದಿನದಿಂದ ದಿನಕ್ಕೆ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗೆ ಅನುಗುಣವಾಗಿ ತಮ್ಮ ಬೋಧನ ಕೌಶಲ್ಯ ಹೆಚ್ಚಿಸಿಕೊಂಡು ಮುನ್ನೆಡೆಯಬೇಕು” ಎಂದರು.
ಈ ಸಿದ್ದಿ ಓದಿದ್ದೀರಾ? ದಾವಣಗೆರೆ | ಬಡ ಬೀಡಿ ಕಾರ್ಮಿಕರ ಮನೆ, ನಿವೇಶನ ಕಬಳಿಕೆಗೆ ಭೂಗಳ್ಳರ ಯತ್ನ; ಕ್ರಮಕ್ಕೆ ಒತ್ತಾಯ
ವೇದಿಕೆಯಲ್ಲಿ ಬೆಂಗಳೂರಿನ ಎಸ್‌ಇಎ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಿ ಟಿ ಶ್ರೀನಿವಾಸ್, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ನಿಖೇತರಾಜ್ ಮೌರ್ಯ, ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಅರುಣ್ ಕೃಷ್ಣಯ್ಯ, ಟಿ ಮುರುಳಿಕೃಷ್ಣ, ಚಿಕ್ಕಹನುಮಯ್ಯ, ಸುಬ್ಬಯ್ಯ, ಕೊಟ್ಟ ಶಂಕರ್, ಡಾ ಡಿ ಸುರೇಶ್, ಕೆ ವೀರೇಶ್, ಕರುನಾಡ ವಿಜಯಸೇನೆಯ ರಾಜ್ಯ ಉಪಾಧ್ಯಕ್ಷ ಸೋಮಶೇಖರ್, ಡಾ ಎಂ ಜಗದೀಶ್‌ಗೌಡ, ಮುಖ್ಯ ಸಲಹೆಗಾರ ಡಾ ಸುದೀಪ್ ಕುಮಾರ್, ಸಚ್ಚಿದಾನಂದ, ರಾಜ್ಯ ಸಂಚಾಲಕ ವಾಸು ಸೇರಿದಂತೆ ಇತರರು ಇದ್ದರು.