ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿ ರಚನೆಯಾಗುವುದಕ್ಕೆ ಕಾಂಗ್ರೆಸ್, ಬಿಜೆಪಿ, ಜನತಾದಳ ಪಕ್ಷಗಳು ಹೋರಾಟ ಮಾಡಿಲ್ಲ. ಮಂಡಳಿ ರಚನೆಗಾಗಿ ಸ್ವಾತಂತ್ರ್ಯ ಬಂದಾಗಿನಿಂದಲೂ ಎಐಟಿಯುಸಿ ಸಂಘಟನೆ ಹೋರಾಟ ಮಾಡುತ್ತಾ ಬಂದಿದೆ. ಆದರೆ, ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕಾದ ಸರ್ಕಾರಗಳು ಕಾರ್ಮಿಕರ ಸೆಸ್ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಲವಾರು ರೀತಿಯ ಕಿಟ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್‌ಗಳು, ಶಾಲಾ ಕಿಟ್‌ಗಳು, ಆರೋಗ್ಯ ತಪಾಸಣೆ, ಕಾರ್ಮಿಕರ ಕೌಶಲ್ಯಭಿವೃದ್ಧಿ ತರಬೇತಿ ಸೇರಿದಂತೆ ಇನ್ನು ಮುಂತಾದ ರೀತಿಯಲ್ಲಿ ಕಾರ್ಮಿಕರ ಸೆಸ್ ಹಣವನ್ನು ಮನಸೋ ಇಚ್ಚೆ ಮಂಡಳಿಯು ದುಂದುವೆಚ್ಚ ಮಾಡಿದೆ. ಇವುಗಳನ್ನು ತಕ್ಷಣ ನಿಲ್ಲಿಸಬೇಕು ಮತ್ತು ಇದರಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ನಾನು ಮನವಿ ಮಾಡುತ್ತಲೇ ಇದ್ದೇವೆ. ಆದರೆ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯಾಗಲಿ, ಪ್ರಸ್ತುತ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವಾಗಲಿ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ” ಎಂದು ಆರೋಪಿಸಿದ್ದಾರೆ.
“ಅವ್ಯವಹಾರದ ಬಗ್ಗೆ ತನಿಖೆ ನಡೆಸುವ ಬದಲು ಕಾರ್ಮಿಕ ಮಂತ್ರಿಗಳು 2023ರ ಆಗಸ್ಟ್ 20ರಂದು ನಡೆದ ಸಭೆಯಲ್ಲಿ ನಮ್ಮ ಸರ್ಕಾರ ಕಿಟ್ ಅಥವಾ ಇತರೆ ವಸ್ತುಗಳ ರೂಪದಲ್ಲಿ ಈ ಹಿಂದೆ ನೀಡುತ್ತಿದ್ದ ಎಲ್ಲವನ್ನು ನಿಲ್ಲಿಸಿದೆ ಎಂದು ತಿಳಿಸಿದ್ದರು” ಎಂದು ದೂರಿದ್ದಾರೆ.
“ಈಗ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ 7 ಸಾವಿರ ಲ್ಯಾಪ್‌ಟಾಪ್ ಖರೀದಿಸಿದ್ದಾರೆ. ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಪ್ರತಿ ಜಿಲ್ಲೆಯ 33 ಸಾವಿರ ಕಾರ್ಮಿಕರಿಗೆ ತಲಾ 2,850 ರೂ.ಗಳಂತೆ ಪ್ರತಿ ಜಿಲ್ಲೆಗೆ 10 ಕೋಟಿಯಂತೆ 31 ಜಿಲ್ಲೆಗೆ 310 ಕೋಟಿ ರೂ.ಗಳನ್ನು ಕಾರ್ಮಿಕರ ಹಾಗೂ ಅವರ ಅವಲಂಬಿತರಿಗೆ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಮಂಡಳಿಯ ಹಣವನ್ನು ತೆಗೆಯಲಾಗಿದೆ. ಇದನ್ನು 31-08-2023 ರಲ್ಲಿ ಮುಖ್ಯಮಂತ್ರಿಗಳಿಗೆ ಈ ವಿಷಯದ ಬಗ್ಗೆ ಪತ್ರ ಬರೆದು ಈ ಆರೋಗ್ಯ ತಪಾಸಣೆ ಹಾಗೂ ಲ್ಯಾಪ್‌ಟಾಪ್ ಖರೀದಿಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಸಹ ಇದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಈಗಾಗಲೇ ತುಮಕೂರು, ರಾಮನಗರ, ಬೆಳಗಾವಿಯಲ್ಲಿ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗಿದೆ. ಈ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಗುಮಾನಿ ಇದೆ. ಕಳೆದ ವರ್ಷ ನಡೆದ ಆರೋಗ್ಯ ತಪಾಸಣೆಯಲ್ಲಿ ಫಲಾನುಭವಿಗಳಿಗೆ ಕೇವಲ ತಪಾಸಣೆ ನಡೆಸಿದ ಫಲಿತಾಂಶವನ್ನಷ್ಟೆ ನೀಡಿ ಕೈತೊಳೆದುಕೊಳ್ಳಲಾಗಿದೆ. ಇದರಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜನಗಳಿಲ್ಲ. ಹೀಗಾಗಿ ನಿಖರವಾದ ಫಲಿತಾಂಶ ಲಭ್ಯವಾಗಿಲ್ಲ. ಎಷ್ಟೋ ಜನ ಕಾರ್ಮಿಕರಿಗೆ ಇಲ್ಲದ ಖಾಯಿಲೆಗಳು ಇವೆ ಎಂದು ವರದಿ ನೀಡಿದ ಉದಾಹರಣೆಗಳು ಇವೆ. ಇನ್ನು ಎಷ್ಟೋ ಜನಕ್ಕೆ ಫಲಿತಾಂಶದ ಚೀಟಿಯೂ ಸಿಕ್ಕಿಲ್ಲ” ಎಂದು ವಿವರಿಸಿದ್ದಾರೆ.
“ಈಗಾಗಲೇ ಆರೋಗ್ಯ ತಪಾಸಣೆ ನಡೆಸುವ ಕಾರ್ಯಕ್ರಮವನ್ನು ತಕ್ಷಣ ನಿಲ್ಲಿಸಬೇಕು. ಆರೋಗ್ಯ ಇಲಾಖೆಯಿಂದ ಉಚಿತ ತಪಾಸಣೆ ನಡೆಸಬೇಕು. ಬಾಕಿ ಇರುವ ಸುಮಾರು 14 ಲಕ್ಷ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ವಿತರಣೆ ಮಾಡಬೇಕು. ಶೈಕ್ಷಣಿಕ ಸಹಾಯಧನವನ್ನು ಕಡಿತಗೊಳಿಸಿ ಅಕ್ಟೋಬರ್ 30ರಂದು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು. ಬೋಗಸ್ ಕಾರ್ಡ್ ತಡೆಯಲು ಕ್ರಮ ಕೈಗೊಳ್ಳಬೇಕು. ಮಂಡಳಿ ಅಭಿವೃದ್ಧಿ ಪಡಿಸಿರುವ ದತ್ತಾಂಶದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗೋವಿಂದರಾಜು, ಖಜಾಂಚಿ ಅಶ್ವತ್ಥನಾರಾಯಣ, ಗೋವಿಂದರಾಜು ಬಾಬು, ವಸಂತ್‌ರಾಜ್, ಶಂಕರಪ್ಪ, ಶಿವಾನಂದ್, ದೊಡ್ಡತಿಮ್ಮಯ್ಯ, ವಿಜಯ್‌ಕುಮಾರ್, ರವಿಕುಮಾರ್, ವೆಂಕಟೇಶ್, ಪಾಪಣ್ಣಿ ಉಪಸ್ಥಿತರಿದ್ದರು.