ತುಮಕೂರು ಜಿಲ್ಲೆಯಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಿದ್ದು, ಯೋಜನೆಯಡಿ ನೋಂದಾಯಿಸಿಕೊಂಡ ಪದವಿ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅರ್ಹ ಫಲಾನುಭವಿಗಳ ಖಾತೆಗೆ ಡಿಬಿಟಿ ಮೂಲಕ ನಿರುದ್ಯೋಗ ಭತ್ಯೆ ಜಮೆ ಮಾಡಲಾಗುವುದು ಎಂದು ಗೃಹಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಅವರು ತಿಳಿಸಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಯುವನಿಧಿ ಯೋಜನೆ ಕುರಿತು ಭಿತ್ತಿ ಪತ್ರ ಬಿಡುಗಡೆ ಮಾಡುವ ಮೂಲಕ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
“ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಅದರಂತೆ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ 4 ಗ್ಯಾರಂಟಿಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು, 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಬೆಂಗಳೂರಿನಲ್ಲಿ ಡಿಸೆಂಬರ್ 26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ” ಎಂದು ತಿಳಿಸಿದರು.
“ಯುವನಿಧಿ ಯೋಜನೆಯಡಿ ಪದವಿ ಮುಗಿಸಿದ ಅರ್ಹ ಫಲಾನುಭವಿಗಳಿಗೆ ಮಾಹೆಯಾನ ₹3,000 ಹಾಗೂ ಡಿಪ್ಲೊಮಾ ಹೊಂದಿದವರಿಗೆ ₹1,500ರಂತೆ ಅವರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ ನಿರುದ್ಯೋಗ ಭತ್ಯೆಯನ್ನು ಜಮೆ ಮಾಡಲಾಗುವುದು. 2023ರಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ. ಪದವಿ, ಡಿಪ್ಲೊಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಹೊಂದಿಲ್ಲದ ನಿರುದ್ಯೋಗಿಗಳು ಸೇವಾಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಈ ಸೌಲಭ್ಯ ನೀಡಲಾಗುವುದು. ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು 10,000 ಮಂದಿ ಪದವೀಧರರು ಹಾಗೂ 2,000 ಮಂದಿ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿಗಳಿದ್ದಾರೆಂದು ಅಂದಾಜಿಸಲಾಗಿದೆ” ಎಂದು ತಿಳಿಸಿದರು.
“ರಾಜ್ಯದಲ್ಲಿ ಪದವಿ ಉತ್ತೀರ್ಣರಾದ ಲಕ್ಷಾಂತರ ನಿರುದ್ಯೋಗಿಗಳು ಇರುವುದನ್ನು ಮನಗಂಡ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 5ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಚಾಲನೆ ನೀಡಿದೆ. ಪದವಿ ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಈ ಭತ್ಯೆ ಬೂಸ್ಟರ್ ಡೋಸ್ ಇದ್ದಂತೆ. ಉದ್ಯೋಗಾಂಕ್ಷಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಈ ಭತ್ಯೆ ಯಾವುದಾದರೂ ರೂಪದಲ್ಲಿ ನೆರವಾಗುತ್ತದೆ. ನೋಂದಾಯಿಸಿಕೊಂಡ ನಿರುದ್ಯೋಗಿ ಫಲಾನುಭವಿಗಳಿಗೆ 2 ವರ್ಷಗಳ ಕಾಲ ನಿರುದ್ಯೋಗ ಭತ್ಯೆ ಸೌಲಭ್ಯ ನೀಡಲಾಗುವುದು. 2 ವರ್ಷಗಳ ನಂತರ ಭತ್ಯೆಯ ಸೌಲಭ್ಯ ದೊರೆಯುವುದಿಲ್ಲ. ಭತ್ಯೆ ಪಡೆಯುತ್ತಿರುವ ಸಂದರ್ಭದಲ್ಲಿ ಖಾಸಗಿ ಅಥವಾ ಸರ್ಕಾರಿ ಉದ್ಯೋಗ ದೊರೆತ ಫಲಾನುಭವಿಗಳು ಉದ್ಯೋಗ ದೊರೆತಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಸುಳ್ಳು ಮಾಹಿತಿ ನೀಡಿ ಭತ್ಯೆ ಪಡೆದವರಿಗೆ ದಂಡ ವಿಧಿಸಲಾಗುವುದು” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? 14 ವರ್ಷದೊಳಗಿನ ಬಾಲಕರ ಕರ್ನಾಟಕ ಹಾಕಿ ತಂಡದಲ್ಲಿ ಕೊಡಗಿನ 9 ಆಟಗಾರರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಪಾಲಿಕೆ ಆಯುಕ್ತೆ ಬಿ ವಿ ಅಶ್ವಿಜ, ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆಂಪಯ್ಯ ಸೇರಿದಂತೆ ಇತರರು ಇದ್ದರು.