ಕೊರಟಗೆರೆ ತಾಲ್ಲೂಕಿನ ಹೂಲೀಕುಂಟೆ, ತುಂಬಾಡಿ ಹಾಗೂ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾದ ಶಾಲಾಭಿವೃದ್ದಿ ಕಾಮಗಾರಿಗಳು, ಬೂದು ನೀರು ನಿರ್ವಹಣಾ ಕಾಮಗಾರಿಗಳು ಹಾಗೂ ಜಲ ಜೀವನ್ ಮಿಷನ್ ಗ್ರಾಮೀಣ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ ಪರಿಶೀಲಿಸಿದರು.
ಹೂಲೀಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮೇನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ ಸೇರಿದಂತೆ ಅಡುಗೆಕೋಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು. ಬಳಿಕ ಜೆಜೆಎಂ ಕಾಮಗಾರಿಯನ್ನು ವೀಕ್ಷಿಸಿದರು. ಇದೇ ವೇಳೆ ಸ್ಥಳದಲ್ಲಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು. ಆನಂತರ ನರೇಗಾ ಯೋಜನೆಯಡಿ ಅನುಷ್ಟಾನಿಸಲಾದ ಸಿಸಿ ಚರಂಡಿ ಕಾಮಗಾರಿಯನ್ನು ವೀಕ್ಷಿಸಿದರು. ಕಾಮೇನಹಳ್ಳಿ ಮುಖ್ಯರಸ್ತೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಅನುಷ್ಟಾನಗೊಳಿಸಿದ ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಪರಿಶೀಲಿಸಿದರು.

ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿದ ಶಾಲಾ ಕಾಂಪೌಂಡ್ ಕಾಮಗಾರಿಯನ್ನು ಪರಿಶೀಲಿಸಿ, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಳಿಕ ಪಕೀರಪ್ಪನ ಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಶೌಚಾಲಯ ಕಾಮಗಾರಿ ಪರಿಶೀಲನೆ ನಡೆಸಿದರು. ಮುಗ್ಗೊಂಡನಹಳ್ಳಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಸಿಸಿ ರಸ್ತೆ ಹಾಗೂ ಸಿಸಿ ಚರಂಡಿ ಕಾಮಗಾರಿಯನ್ನು ಪರಿಶೀಲಿಸಿದರು.

ತುಂಬಾಡಿ ಗ್ರಾಮದ ಹಳೇ ಕೆರೆ ಹಳ್ಳದ ಹೂಳೆತ್ತುವ ಕಾಮಗಾರಿ, ಸರ್ಕಾರಿ ಪ್ರಾಥಮಿಕ ಪಾಠ ಶಾಲೆಯ ಶಾಲಾ ಶೌಚಾಲಯ ಕಾಮಗಾರಿಯನ್ನು ಮುಖ್ಯ ಕಾರ್ಯನಿರ್ವಾಹಕ ಅದಿಕಾರಿಗಳು ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಪೂರ್ವ ಸಿ ಅನಂತರಾಮು, ಸಹಾಯಕ ನಿರ್ದೇಶಕ(ಗ್ರಾ.ಉ)ರಾದ ಗುರುಮೂರ್ತಿ ಎಂ.ಬಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕಾಂತರಾಜು, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ದಯಾನಂದ್, ತುಂಬಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಟರಾಜ್, ತಾಂತ್ರಿಕ ಸಂಯೋಜಕರಾದ ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರರು ಹಾಜರಿದ್ದರು.