ದಲಿತ ಸಂಘರ್ಷ ಸಮಿತಿ (ದಸಂಸ) ಹುಟ್ಟಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯನ್ನು ತುಮಕೂರಿನಲ್ಲಿ ಅದ್ಧೂರಿಯಾಗಿ ನೆರವೇರಿಸಲಾಯಿತು.
ದಸಂಸವನ್ನು ಕಟ್ಟಿದ ಪ್ರಾತಃಸ್ಮರಣೀಯರಾದ ಬಿ.ಕೃಷ್ಣಪ್ಪ, ದೇವಯ್ಯ ಹರವೆ, ದೇವನೂರ ಮಹಾದೇವ, ಸಿದ್ದಲಿಂಗಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಕೆ.ಬಿ.ಸಿದ್ದಯ್ಯ, ಗೋವಿಂದಯ್ಯ ಸೇರಿದಂತೆ ಮೊದಲಾದವರ ಕೊಡುಗೆಗಳನ್ನು ಮೆಲುಕು ಹಾಕಲಾಯಿತು.
ದಸಂಸವನ್ನು ಅಂದು ಕಟ್ಟಿದ ಹಿರಿಯ ತಲೆಮಾರಿನ ಹಲವು ಹೋರಾಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಎದುರಿಸಿದ ಪಾಡುಗಳನ್ನು ಹಂಚಿಕೊಂಡರು.
ತುಮಕೂರಿನ ಎಂಪ್ರೆಸ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ’ದಸಂಸ ಸುವರ್ಣ ಮಹೋತ್ಸವ’ದಲ್ಲಿ ಜಿಲ್ಲೆಯ ಸಾವಿರಾರು ದಸಂಸ ಕಾರ್ಯಕರ್ತರು ಪಾಲ್ಗೊಂಡಿದ್ದರು. ಜೈ ಭೀಮ್ ಘೋಷಣೆ ಮೊಳಗಿತು.
ಸಿದ್ದಲಿಂಗಯ್ಯನವರ ’ಇಕ್ಕುರ್ಲಾ ವದಿರ್ಲಾ ಈ ನನ್ ಮಕ್ಳ ಚರ್ಮ ಎಬ್ಬುರ್‍ಲಾ’ ಹಾಡಿಗೆ ಒನ್ಸ್ ಮೋರ್ ಕೇಳಿ ಬಂತು. ರಂಗಕರ್ಮಿ ಕೆ.ಪಿ.ಲಕ್ಷ್ಮಣ್ ತಂಡವು ಹೋರಾಟದ ಹಾಡುಗಳ ಮೂಲಕ ಇಡೀ ಸಭಾಂಗಣವನ್ನು ಎಪ್ಪತ್ತರ ದಶಕಕ್ಕೆ ಕರೆದೊಯ್ದಿತ್ತು. ತಮಟೆ, ಉರಿಮೆ ವಾದ್ಯದ ಸದ್ದಿನೊಂದಿಗೆ ದಲಿತ ಹೋರಾಟದ ಚರಿತ್ರೆ ಮಾರ್ದನಿಸಿತು.
ದಸಂಸವನ್ನು ಕಟ್ಟಿದ ದಿಟ್ಟ ಹೋರಾಟಗಾರ ಬಿ.ಕೃಷ್ಣಪ್ಪ ಅವರ ಐತಿಹಾಸಿಕ ಭಾಷಣವನ್ನು ದಾಖಲಿಸಿರುವ “ದಲಿತ ಚಳವಳಿಯ ತಾತ್ವಿಕ ನೆಲೆಗಳು” (ಸಂಪಾದನೆ: ನಾರಾಯಣರಾಜು ಬನಶಂಕರಿನಗರ) ಕೃತಿ ಲೋಕಾರ್ಪಣೆಗೊಂಡಿತು.
ಬಳಿಕ ಮಾತನಾಡಿದ ಹಿರಿಯ ಹೋರಾಟಗಾರ ಹಾಗೂ ರಂಗಕರ್ಮಿ ಕೋಟಿಗಾನಹಳ್ಳಿ ರಾಮಯ್ಯನವರು ದಲಿತ ಸಂಘರ್ಷ ಸಮಿತಿಯನ್ನು ಬೆಳೆಸಿದ ಕಿರುತೊರೆಗಳ ಬಗ್ಗೆ ಮಾತನಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.
“ನಾವು ದಲಿತ ಸಂಘರ್ಷ ಸಮಿತಿಯ ಮೆಗಾ ನರೇಟಿವ್‍ಗಳನ್ನು ತಿರಸ್ಕರಿಸಬೇಕು. ಮೆಗಾ ನರೇಟಿವ್‌ಗಳಲ್ಲಿ ಕುಂದೂರು ತಿಮ್ಮಯ್ಯ, ಪ್ರೊ.ಕೆ.ದೊರೈರಾಜ್ ಅಂಥವರು ಇರುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
“50 ವರ್ಷಗಳಾದರೂ ಚಳವಳಿ ಜೀವಂತವಾಗಿದೆ ಎಂದರೆ ಅಧಿಕಾರ ಬದಲಿಸುವ ಶಕ್ತಿ ಈಗಲೂ ದಲಿತರ ಹೋರಾಟಕ್ಕಿದೆ. ಕಲ್ಲುಮುಳ್ಳಿನ ಹಾದಿಯಲ್ಲಿ ಹೋರಾಟ ಸಾಗುತ್ತಿರುವುದು ವಿಪರ್ಯಾಸ. ದಲಿತರ ಹೋರಾಟದ ರೋಧನೆಗಳು ಇಂದಿಗೂ ಹೆಚ್ಚುತ್ತಿದ್ದು, ದಲಿತರು ಬಂದೂಕು ಹಿಡಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದಿದ್ದೆ. ಸನಾತನದ ಕ್ಯಾನ್ಸರ್ ಭಾರತದಲ್ಲಿ ಹುಟ್ಟಿದೆ” ಎಂದು ಎಚ್ಚರಿಸಿದರು.
“ಕಂಗೆಟ್ಟಿದ್ದ ಕಣ್ಣುಗಳಲ್ಲಿ ಭವಿಷ್ಯದ ಚಿಂತೆಗಳಿಲ್ಲ. ನಿರಾತಂಕ ಭಾವ ಹೆಚ್ಚಿರುವುದು ಮತ್ತು ನವ್ಯೋತ್ತರ ಆಧುನಿಕ ಕಾಲಘಟ್ಟದಲ್ಲಿ ದಲಿತರು ಆರಾಮಾಗಿರುವುದು ಮನುವಾದ ಚಿಗುರಲು ಕಾರಣವಾಗಿದೆ” ಎಂದು ವಿಷಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದೂರು ತಿಮ್ಮಯ್ಯ ಅವರು, “ಬಿ.ಕೃಷ್ಣಪ್ಪನವರಿಂದ ಆರಂಭವಾದ ದಸಂಸ ಐವತ್ತು ವರ್ಷ ಪೂರೈಸಿದೆ. ದಲಿತರ ಮಾನ , ಪ್ರಾಣ ರಕ್ಷಣೆಗಾಗಿ ದಸಂಸ ಹೋರಾಟ ಮಾಡುತ್ತ ಸ್ವಾಭಿಮಾನ, ಆತ್ಮಗೌರವವನ್ನು ತಂದಿದೆ. ಅಂಬೇಡ್ಕರ್ ಅವರು ಎಳೆದ ವಿಮೋಚನಾ ರಥವನ್ನು ದಸಂಸ ಮುಂದಕ್ಕೆ ಎಳೆದಿದೆ” ಎಂದು ಬಣ್ಣಿಸಿದರು.
“ಈ ಹೋರಾಟವನ್ನು ನಾವು ಕಟ್ಟಬೇಕಾಗಿದೆ. ಎಡಗೈ ಬಲಗೈ ಹೆಸರಿನ ಸಂಘಟನೆಗಳು ದಲಿತಗಾಗಿ ಹೋರಾಟ ಮಾಡಿಲ್ಲ. ದಲಿತ ಸಂಘರ್ಷ ಸಮಿತಿ ದಲಿತರ ಹೋರಾಟವನ್ನು ಮುನ್ನಡೆಸಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾಭಿಮಾನವನ್ನು ನಮಗೆ ಕೊಟ್ಟಿದ್ದಾರೆ. ಹೋರಾಟವನ್ನು ಬಲಪಡಿಸೋಣ. ಚಳವಳಿಯನ್ನು ಕಟ್ಟುತ್ತಾ ಅಳುವವರ ಕಣ್ಣೀರು ಅಳಿಸಿ ಹಾಕೋಣ, ಬಿದ್ದವರನ್ನು ಎದ್ದು ನಿಲ್ಲಿಸೋಣ” ಎಂದು ಆಶಿಸಿದರು.
ಕವಿ ಸುಬ್ಬು ಹೊಲೆಯಾರ್ ಮಾತನಾಡಿ, “ನಮ್ಮದು ಸಹನೆಯ ಕುಲ ಎಂದು ಹೆಮ್ಮೆ ಪಡುತ್ತೇನೆ. ನಾವು ಶೂರರು ಮತ್ತು ಹೃದಯವಂತರು. ಒಂದು ಇರುವೆಗೂ ತೊಂದರೆ ಕೊಡದ ಸಹನೆಯುಳ್ಳವರು ನಾವು” ಎಂದರು.
“ದಲಿತ ಸಂಘರ್ಷ ಸಮಿತಿ ಎಂದರೆ ಕೇವಲ ನೂರ ಹನ್ನೊಂದು ಪರಿಶಿಷ್ಟ ಜಾತಿಗಳ ಸಂಘಟನೆಯಲ್ಲ. ಇದು ಎಲ್ಲ ನೊಂದವರ, ಅಸಹಾಯಕ ಮಹಿಳೆಯರ ಸಂಘಟನೆ” ಎಂದು ಅಭಿಪ್ರಾಯಪಟ್ಟರು.
ಪ್ರೊ.ಕೆ.ದೊರೈರಾಜ್ ಮಾತನಾಡಿ, “ದಲಿತ ಸಂಘರ್ಷ ಸಮಿತಿಯ ಬೇರು ಹುಟ್ಟಿದ್ದು ತುಮಕೂರು ದೊಡ್ಡಟ್ಟಿಯ ಚಪ್ಪಲಿ ಅಂಗಡಿಯಲ್ಲಿ. ದಸಂಸ ಹುಟ್ಟಿಗೆ ಕೃಷ್ಣಪ್ಪ, ದೇವನೂರು, ಸಿದ್ದಲಿಂಗಯ್ಯ, ದೇವಯ್ಯ ಹರವೆ ಎಲ್ಲರೂ ಕಾರಣ” ಎಂದು ಸ್ಮರಿಸಿದರು.
“ಹೋರಾಟದ ಮೌಲ್ಯಗಳು ಮತ್ತು ವಿಚಾರಗಳನ್ನು ಸರಿಯಾಗಿ ದಾಖಲಾತಿ ಮಾಡಿಲ್ಲ. ಚಳವಳಿ ಏನೆಲ್ಲ ಸಾಮಾಜಿಕ ಅರಿವು ತಂದಿದೆ ಎಂಬುದು ತಿಳಿಯಬೇಕು. ಕೇವಲ ಮೇಲಿನ ಸ್ತರದ ವಿಚಾರಗಳನ್ನು ತಂದು ಯಾವುದೇ ಬರಹಗಾರರು ಅಪಮೌಲ್ಯ ಮಾಡಬಾರದು” ಎಂದು ಮನವಿ ಮಾಡಿದರು.
“ಈ ಸಂಭ್ರಮ ಸವಾಲಾಗಬೇಕು. ಈ ವರ್ತಮಾನ ನಮಗೆ ಅರ್ಥವಾಗದಿದ್ದರೆ, ಭವಿಷ್ಯದ ಬಗ್ಗೆ ಆತಂಕ ಮೂಡದೆ ಹೋದರೆ ನಮಗೆ ಭವಿಷ್ಯವಿಲ್ಲ ಎಂದರ್ಥ. ವ್ಯಕ್ತಿತ್ವವನ್ನು ಛಿದ್ರೀಕರಣ ಮಾಡುವ ಕಾಲಘಟ್ಟದಲ್ಲಿದ್ದೇವೆ. ಈ ಛಿದ್ರೀಕರಣದ ಕಾಲದಲ್ಲಿ ನಾವು ಎಲ್ಲ ಜಾತಿ ಜನರನ್ನು ಒಗ್ಗೂಡಿಸದೆ ಹೋದರೆ ನಮ್ಮ ಶಕ್ತಿ ಕುಂದುತ್ತದೆ. ನಮ್ಮ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಬೇಕಿದೆ. ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆಯನ್ನು ಕಟ್ಟಬೇಕು” ಎಂದು ಕೋರಿದರು.
“ದ್ವೇಷ ಮತ್ತು ಬೇಧಭಾವ ಮಾಡುವವರು ಮನುಷ್ಯರೇ ಅಲ್ಲ. ದಸಂಸಕ್ಕಾಗಿ ಹೊಲ ಮನೆ ಕಳೆದುಕೊಂಡವರು ಸಾಕಷ್ಟಿದ್ದಾರೆ. ಯುವ ಪೀಳಿಗೆ ವೈದಿಕಶಾಹಿ, ಬಂಡವಾಳಶಾಹಿಯ ಬಲೆಗೆ ಬೀಳದೆ ಬೌದ್ಧಿಕವಾಗಿ ಬೆಳೆಯಬೇಕು. ವರ್ತಮಾನವನ್ನು ಅರ್ಥಮಾಡಿಕೊಂಡು ವೈದಿಕಶಾಹಿಯನ್ನು ಎದುರಿಸದಿದ್ದರೆ ಭವಿಷ್ಯ ಇರುವುದಿಲ್ಲ” ಎಂದು ಎಚ್ಚರಿಸಿದರು.
ಹೋರಾಟಗಾರ್ತಿ ಗಂಗಮ್ಮ ಎಂ.ಎನ್.ಕೆಂಪಯ್ಯ ಮಾತನಾಡಿ, “1982ರಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿದ್ದೆ. ಮಹಿಳೆಯರು ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹೊತ್ತಿಕೊಂಡು ಹೋರಾಟಕ್ಕೆ ಬರುತ್ತಿದ್ದರು. ನೂರಾರು ಮಹಿಳೆಯರು ನನ್ನ ಜೊತೆಯಲ್ಲಿ ಇರುತ್ತಿದ್ದರು. ಭೂಮಿಗಾಗಿ ಧರಣಿ ನಡೆಸಿದ್ದೆವು. ನಮ್ಮ ಪ್ರತಿಭಟನೆಗೆ ಹೆದರಿ ಡಿಸಿ ಓಡಿ ಹೋಗಿದ್ದರು” ಎಂದು ಹೋರಾಟದ ದಿನಗಳನ್ನು ನೆನೆದರು.
ಇತಿಹಾಸ ಮರೆಯದಿರಿ: ಕೆ.ಎನ್.ರಾಜಣ್ಣ
ಕಾರ್ಯಕ್ರಮ ಉದ್ಘಾಟಿಸಿದರೂ ಕೊನೆಗಳಿಗೆಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ, “ನಮ್ಮ ಇತಿಹಾಸವನ್ನು ನಾವು ಮರೆಯಬಾರದು” ಎಂದು ನುಡಿದರು.
“ದಲಿತ ಸಂಘರ್ಷ ಸಮಿತಿಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜೊತೆಗೆ ಶೋಷಣೆಗಳನ್ನು ಹಿಮ್ಮೆಟ್ಟಿಸಬೇಕು. ನಮ್ಮೆಲ್ಲರ ಹೋರಾಟಗಾರರ ಇತಿಹಾಸವನ್ನು ನಾವು ಮೆಲುಕು ಹಾಕಬೇಕು. ಇತಿಹಾಸವನ್ನು ಅರಿತವರು ಮಾತ್ರ ಇತಿಹಾಸವನ್ನು ಸೃಷ್ಟಿ ಮಾಡಲು ಸಾಧ್ಯ. ಈ ಹೋರಾಟದ ಇತಿಹಾಸವನ್ನು ತಿಳಿದುಕೊಳ್ಳಬೇಕು” ಎಂದು ಹೇಳಿದರು.

“ಶೋಷಣೆ, ಅವಮಾನ, ಹಸಿವು ಎಲ್ಲವನ್ನೂ ಸಹಿಸಿಕೊಂಡು ಹೋರಾಟವನ್ನು ಮುನ್ನಡೆಸಿದ ಹಿರಿಯರನ್ನು ಸ್ಮರಿಸಬೇಕಾಗುತ್ತದೆ. ಕೃಷ್ಣಪ್ಪನವರು ಸ್ಥಾಪಿಸಿದ ದಸಂಸ ಎಷ್ಟೆಲ್ಲ ಮುಖಂಡರನ್ನು ಈ ಸಮಾಜಕ್ಕೆ ಕೊಟ್ಟಿದೆಯಲ್ಲವೇ?” ಎಂದು ಪ್ರಶಂಸಿಸಿದರು.
“ಎಲ್ಲಿಯವರೆಗೆ ಶೋಷಣೆಗೆ ಒಳಗಾಗುವ ಮನಸ್ಥಿತಿ ಇರುತ್ತದೆಯೋ ಅಲ್ಲಿಯವರೆಗೂ ಶೋಷಣೆ ಮಾಡುವ ಜನರೂ ಇರುತ್ತಾರೆ. ಶಿಕ್ಷಣ, ಸಂಘಟನೆ ಹೋರಾಟ- ಈ ಮೂಲಮಂತ್ರವನ್ನು ಅಂಬೇಡ್ಕರ್ ಹೇಳಿದರು. ಇವುಗಳನ್ನು ನಾವು ಪಾಲಿಸಬೇಕು” ಎಂದು ತಿಳಿಸಿದರು.
ಮೇಲ್ವರ್ಗ- ಕೆಳವರ್ಗ ಎನ್ನುವುದನ್ನು ಒಪ್ಪಬೇಡಿ: ರಾಜಣ್ಣ
“ಮೇಲ್ವರ್ಗ, ಕೆಳವರ್ಗ ಎಂದು ಹೇಳುವುದನ್ನು ನೀವು ಒಪ್ಪಬಾರದು. ಕೆಳವರ್ಗ ಎಂದು ಕರೆಸಿಕೊಳ್ಳಬಾರದು. ಹಿಂದುಳಿದವರು, ತಳ ಸಮುದಾಯಗಳು ಎಂದು ಬೇಕಾದರೆ ಕರೆದುಕೊಳ್ಳೋಣ. ಕೆಳವರ್ಗ ಎಂದು ಅನಿಸಿಕೊಳ್ಳುವುದು ಬೇಡ. ಯಾರೂ ಇಲ್ಲಿ ಹೆಚ್ಚು ಅಲ್ಲ, ಕಮ್ಮಿಯೂ ಅಲ್ಲ. ಪ್ರತಿಯೊಬ್ಬರಿಗೂ ಪ್ರತಿಭೆ ಇದೆ. ಆ ಪ್ರತಿಭೆಯನ್ನು ಹೊರತರುವ ಮಾರ್ಗದರ್ಶನದ ಕೊರತೆ ನೀಗಿಸಬೇಕು” ಎಂದು ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
“ಹಿಂಜರಿಕೆ ಸ್ವಭಾವ ಯಾವತ್ತೂ ಇರಬಾರದು. ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಆತ್ಮವಿಶ್ವಾಸ ಬರಬೇಕು. ನಮ್ಮ ಬೇಡಿಕೆ ಈಡೇರಬೇಕೆಂದರೆ ಅದಕ್ಕೆಲ್ಲ ರಾಜಕೀಯ ಅಧಿಕಾರದ ಅವಶ್ಯಕತೆ ಇದೆ. ರಾಜಕೀಯ ಅಧಿಕಾರದಿಂದ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಬಹುದು. ಆ ರಾಜಕೀಯ ಅಧಿಕಾರವನ್ನು ಗಳಿಸಲು ಯೋಚನೆ ಮಾಡಬೇಕು” ಎಂದು ತಿಳಿಸಿದರು.
“ಎಸ್ಸಿ, ಎಸ್ಟಿ ಸಮುದಾಯಕ್ಕಾಗಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಎಸ್‌ಸಿಎಸ್‌ಪಿ- ಟಿಎಸ್‌ಪಿ ಕಾಯ್ದೆಯನ್ನು ತಂದಿತು. ಎಚ್.ಆಂಜನೇಯ ಅವರು ಸಮಾಜ ಕಲ್ಯಾಣ ಇಲಾಖೆಯ ಮಿನಿಸ್ಟರ್ ಆಗಿದ್ದಾಗ ಈ ಕಾಯ್ದೆ ಬಂದಿತು. ಪರಿಶಿಷ್ಟರಿಗೆ ಮೀಸಲಾದ ಹಣವನ್ನು ಖರ್ಚು ಮಾಡಲೇಬೇಕು. ಇಲ್ಲವಾದರೆ ಕ್ರಮ ತೆಗೆದುಕೊಳ್ಳಲು ಕಾಯ್ದೆಯಲ್ಲಿ ಅವಕಾಶವಿದೆ” ಎಂದು ವಿವರಿಸಿದರು.
“ನಮ್ಮ ಗುರಿ ಮುಟ್ಟುವವರೆಗೂ ನಮ್ಮ ಹೋರಾಟ ನಡೆಸುವ ಅಗತ್ಯವಿದೆ. ಯುವಕರು ಸ್ವಾರ್ಥಿಗಳಾಗಬಾರದು. ವಿದ್ಯಾವಂತರಾಗಿ ಡಾಕ್ಟರ್, ಇಂಜಿನಿಯರ್, ಅಧಿಕಾರಿ ಆದ ತಕ್ಷಣ ಸಮುದಾಯದಿಂದ ದೂರು ಉಳಿಯುತ್ತಾರೆ. ಕಾಲೊನಿಗಳನ್ನು ತೊರೆದುಬಿಡುತ್ತಾರೆ. ನಮ್ಮ ಜನರ ಮಧ್ಯೆ ನಾವು ಇರದಿದ್ದರೆ ಇನ್ಯಾರು ಇರುತ್ತಾರೆ?” ಎಂದು ಪ್ರಶ್ನಿಸಿದರು.
ದಸಂಸ ಮುಖಂಡರಾದ ಎಂ.ಗುರುಮೂರ್ತಿ, ಬೆಲ್ಲದಮಡು ಕೃಷ್ಣಪ್ಪ, ಗಂಗಾಧರಪ್ಪ ಚಿಕ್ಕಬಳ್ಳಾಪುರ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ವಿರೂಪಾಕ್ಷಪ್ಪ ಡ್ಯಾಗೇರಹಳ್ಳಿ, ಕುಂದೂರು ಮುರುಳಿ, ರಾಮಚಂದ್ರಪ್ಪ, ಡಾ.ಬಸವರಾಜು, ಬರಹಗಾರರಾದ ಸಿ.ಜಿ.ಲಕ್ಷ್ಮಿಪತಿ ಕೋಲಾರ, ಡಾ.ರವಿಕುಮಾರ್ ನೀಹ, ವಿ.ಎಲ್.ನರಸಿಂಹಮೂರ್ತಿ, ಗುರುಪ್ರಸಾದ್ ಕಂಟಲಗೆರೆ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು. ಹತ್ತಾರು ಹೋರಾಟಗಾರರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.