ಮಾಜಿಕ ಜಾಲತಾಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವೇದಮೂರ್ತಿ ಎಂಬ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ (ದಸಂಸ) ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನಾ ಸಭೆ ನಡೆಸಿ, ಆರೋಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ಅವರು ಜಾತಿ, ಧರ್ಮದ ಎಲ್ಲೆಗಳನ್ನು ಮೀರಿ ಸಾಮಾಜಿಕ ನ್ಯಾಯಕ್ಕೆ ಬುನಾದಿ ಹಾಕಿದ ಸಂವಿಧಾನವನ್ನು ರಚಿಸಿದ್ದು, ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಜಿ.ಎಚ್. ಜಗನ್ನಾಥ್ ಮಾತನಾಡಿ, ದಲಿತರನ್ನು ಶೋಷಿಸುವ ಮನೋಭಾವ ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸಂವಿಧಾನದ ಆಶ್ರಯದಲ್ಲಿ ಕಾನೂನು ಹಾಗೂ ಶಿಕ್ಷಣ ಪಡೆದ ವ್ಯಕ್ತಿಯೇ ಬುದ್ಧ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ಇಂತಹ ಮನೋಭಾವದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ದಸಂಸ ತಾಲ್ಲೂಕು ಸಂಚಾಲಕ ಎನ್.ಎ. ನಾಗರಾಜು ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಯ ವಿರುದ್ಧ ಜಾತಿ ನಿಂದನೆ, ದಲಿತರ ಭಾವನೆಗಳಿಗೆ ಧಕ್ಕೆ ಹಾಗೂ ಸಮಾಜದ ಶಾಂತಿ ಭಂಗಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ನಂತರ ತಹಶೀಲ್ದಾರ್ ಆರತಿ.ಬಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಪಪಂ ಮಾಜಿ ಸದಸ್ಯರಾದ ಮಹಮದ್ ಸಾದಿಕ್, ರೇಣುಕಸ್ವಾಮಿ, ಕಾಂಗ್ರೆಸ್ ಮುಖಂಡರಾದ ಜಿ.ಸಿ. ಶಿವಕುಮಾರ್, ರಾಘವೇಂದ್ರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಹರಿವೆಸಂದ್ರ ಕೃಷ್ಣಪ್ಪ, ನರೇಂದ್ರಕುಮಾರ್, ನಿಟ್ಟೂರು ಕೃಷ್ಣಮೂರ್ತಿ, ಮಂಜುನಾಥ್, ಯೋಗೀಶ್, ಗುಬ್ಬಿ ಬಸವರಾಜು, ನಾಗಭೂಷಣ್, ಮಾರಶೆಟ್ಟಿಹಳ್ಳಿ ಬಸವರಾಜು, ಕಿಟ್ಟದಕುಪ್ಪೆ ನಾಗರಾಜು, ಪಾಂಡುರಂಗಯ್ಯ, ಇರಕಸಂದ್ರ ನರಸಿಂಹಮೂರ್ತಿ, ಮಧು, ಇಮ್ರಾನ್, ದೊಡ್ಡಯ್ಯ, ಮನೋಹರ್ ಸೇರಿದಂತೆ ಹಲವರು ಭಾಗವಹಿಸಿದ್ದರು.





