ಜೆಡಿಎಸ್‌ನಿಂದ ಜಿಟಿಡಿ ದೂರ ದೂರ; ಕಾಂಗ್ರೆಸ್‌ನಲ್ಲಿ ಹೊಸ ನೆಲೆ ಹುಡುಕಾಟವೇ?

Date:

ಕರ್ನಾಟಕದ ರಾಜಕೀಯ ಅಖಾಡದಲ್ಲಿ, ವಿಶೇಷವಾಗಿ ಹಳೆಯ ಮೈಸೂರು ಭಾಗದ ಬಲಿಷ್ಠ ಒಕ್ಕಲಿಗ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಶುರುವಾಗಿದೆ. ಮೈಸೂರಿನ ಪ್ರಭಾವಿ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಮತ್ತು ಜೆಡಿಎಸ್‌ನ ವರಿಷ್ಠ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಕುಟುಂಬದ ನಡುವಿನ ಕಂದಕ ದಿನ ಕಳೆದಂತೆ ದೊಡ್ಡದಾಗುತ್ತಲೇ ಇದೆ. “ಕಳೆದ ಮೂರು ವರ್ಷಗಳಿಂದ ನನ್ನದೇ ಪಕ್ಷದವರು ನನ್ನನ್ನು ತೀವ್ರವಾಗಿ ಅವಮಾನಿಸಿದ್ದಾರೆ. ಶಾಸಕನಾಗಿದ್ದರೂ ಪಕ್ಷದ ಪ್ರಮುಖ ಕಾರ್ಯಕ್ರಮ, ಸಮಾವೇಶಗಳಿಗೆ ನನ್ನನ್ನು ಕರೆಯದೆ ಮೂಲೆಗೆ ದೂಡಿದ್ದಾರೆ” ಎಂದು ಜಿ ಟಿ ದೇವೇಗೌಡ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಸೆಪ್ಟೆಂಬರ್ 6ರಂದು ಮೈಸೂರಿನಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ್ದಾರೆ.

- Advertisement -

ಭಾನುವಾರ, ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ. ಮೈದಾನದವರೆಗೆ ನಡೆದ ಜಿ ಡಿ ದೇವೇಗೌಡರ ಬೃಹತ್ ರ್ಯಾಲಿಯಲ್ಲಿ ಸ್ವಪಕ್ಷೀಯ ನಾಯಕರನ್ನು ಬದಿಗಿಡಲಾಗಿತ್ತು. ಮಾತ್ರವಲ್ಲ, ಇಡೀ ರ್ಯಾಲಿಯಲ್ಲಿ , ಜೆಡಿಎಸ್‌ನ ಅಗ್ರ ನಾಯಕರ ಚಿತ್ರಗಳು ಅಥವಾ ಹೆಸರುಗಳು ಎಲ್ಲಿಯೂ ಕಾಣಿಸಲಿಲ್ಲ. ಇದೆಲ್ಲವೂ, ದೇವೇಗೌಡ ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ ಹಾದಿ ಹಿಡಿದಿದ್ದಾರೆ ಎಂಬ ಚರ್ಚೆಯನ್ನೂ ಹುಟ್ಟುಹಾಕಿದೆ. ಆದರೂ, ತಮ್ಮ ಈ ರ್ಯಾಲಿಯನ್ನು ‘ಶಕ್ತಿ ಪ್ರದರ್ಶನವಲ್ಲ, ಜನರ ಪ್ರೀತಿ’ ಎಂದು ಜಿ ಟಿ ದೇವೇಗೌಡ ಹೇಳಿಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಆದಾಗ್ಯೂ, ಇದೇ ರ್ಯಾಲಿಯಲ್ಲಿ ಮಾತನಾಡಿದ ಜಿ ಟಿ ದೇವೇಗೌಡ, “ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜನರಿಗೆ ಪಕ್ಷಕ್ಕಿಂತ ಜಿ ಟಿ ದೇವೇಗೌಡನೇ ಮುಖ್ಯ. ನಾನು ಒಂದು ಮೂಲೆಯಲ್ಲಿ ಸುಮ್ಮನೆ ಕುಳಿತುಕೊಳ್ಳಬಾರದು ಎಂಬುದಾಗಿ ಕ್ಷೇತ್ರದ ಜನ ಹೇಳಿದ್ದಾರೆ” ಎಂದಿದ್ದಾರೆ. ಈ ಮೂಲಕ, ಮುಂದಿನ ಚುನಾವಣೆಗಳಲ್ಲಿ ಪಕ್ಷದ ಸಾಂಪ್ರದಾಯಿಕ ಚಿಹ್ನೆಗಿಂತ ಹೆಚ್ಚಾಗಿ, ತಮ್ಮ ವೈಯಕ್ತಿಕ ರಾಜಕೀಯ ಬಲ ಮತ್ತು ಜನಪ್ರಿಯತೆಯ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದೇನೆ ಎಂಬ ಸಂದೇಶವನ್ನು ತಮ್ಮ ವರಿಷ್ಠರಿಗೆ ರವಾಸಿದ್ದಾರೆ.

ಅಂದಹಾಗೆ, ಜೆಡಿಎಸ್‌ ವರಿಷ್ಠರ ಜೊತೆದಿನ ಜಿ ಟಿ ದೇವೇಗೌಡರ ಅಸಮಾಧಾನ ಇಂದಿನದ್ದಲ್ಲ. 2018ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ತಾವು ಮಂತ್ರಿಯಾಗಿದ್ದಾಗಿನಿಂದಲೂ ಹೊಗೆಯಾಡುತ್ತಲೇ ಬಂದಿದೆ. ಅದು, 2024ರ ಲೋಕಸಭಾ ಚುನಾವಣೆಯ ನಂತರ, ಕೊಂಚ ಸ್ಫೋಟಿಸಿತ್ತು. ಆ ಚುನಾವಣೆಯಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಸಂಸದರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾದ ಬಳಿಕ, ಜೆಡಿಎಸ್ ಶಾಸಕಾಂಗ ಪಕ್ಷದ (JDSL) ನಾಯಕ ಸ್ಥಾನ ಖಾಲಿಯಾಗಿತ್ತು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತಮಗೆ ಆ ಹುದ್ದೆ ದೊರೆಯುತ್ತದೆ ಎಂದು ಜಿ ಟಿ ದೇವೇಗೌಡ ನಿರೀಕ್ಷಿಸಿದ್ದರು. ಆದರೆ, ಪಕ್ಷದ ನಾಯಕತ್ವವು ಜಿ ಟಿ ದೇವೇಗೌಡರನ್ನು ಬದಿಗೊತ್ತಿ ಸಿ ಬಿ ಸುರೇಶ್ ಬಾಬು ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿತು.

ಈ ನಿರ್ಧಾರ ಜಿ ಟಿ ದೇವೇಗೌಡರಿಗೆ ತೀವ್ರ ರಾಜಕೀಯ ಹಿನ್ನಡೆಯನ್ನುಂಟುಮಾಡಿತು. ಅವರನ್ನು ಸಮಾಧಾನಪಡಿಸುವ ಉದ್ದೇಶದಿಂದ ಅವರಿಗೆ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಜಿ ಟಿ ದೇವೇಗೌಡರ ಮನಸ್ಸಿನಲ್ಲಿದ್ದ ಅಸಮಾಧಾನ ಸಂಪೂರ್ಣವಾಗಿ ಕಡಿಮೆಯಾಗಲಿಲ್ಲ. ಇದರ ಬೆನ್ನಲ್ಲೇ ಮೈಸೂರು ಭಾಗದ ಜೆಡಿಎಸ್ ಸಂಘಟನೆಯಲ್ಲಿ ಮಾಜಿ ಸಚಿವ ಸಾ ರಾ ಮಹೇಶ್ ಮತ್ತು ಜಿ ಟಿ ದೇವೇಗೌಡರ ನಡುವೆ ಬಹಿರಂಗ ವಾಕ್ಸಮರವೂ ಆರಂಭವಾಯಿತು. 2028ರ ಚಾಮುಂಡೇಶ್ವರಿ ಕ್ಷೇತ್ರದ ಮುಂದಿನ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯು ಈ ಆಂತರಿಕ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿಯಿತು.

ಇದೆಲ್ಲದರ ನಡುವೆ, ಇದೇ ವರ್ಷದ ಮೇ ತಿಂಗಳಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಕಾರ್ಯಕ್ರಮ ಜಿ.ಟಿ ದೇವೇಗೌಡರ ಅಸಮಾಧಾನ ತೀವ್ರಗೊಳ್ಳಲು ಮತ್ತೊಂದು ಕಾರಣವಾಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರಾಗಿದ್ದ ಜಿ ಟಿ ದೇವೇಗೌಡರನ್ನೇ ಆಹ್ವಾನಿಸಿರಲಿಲ್ಲ. ಅಲ್ಲಿ ಮಾತನಾಡಿದ್ದ ಎಚ್‌ ಡಿ ಕುಮಾರಸ್ವಾಮಿ, “ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಯಾವುದೇ ಒಬ್ಬ ವ್ಯಕ್ತಿಯಿಂದ ಬಂದಿದ್ದಲ್ಲ; ಅದು ಪಕ್ಷದ ಭದ್ರಕೋಟೆ” ಎಂಬರ್ಥದಲ್ಲಿ ಮಾತನಾಡಿದ್ದರು. ಈ ಹೇಳಿಕೆಯು ಜಿ ಟಿ ದೇವೇಗೌಡರ ವೈಯಕ್ತಿಕ ರಾಜಕೀಯ ನೆಲೆಯನ್ನೇ ಪ್ರಶ್ನಿಸಿದಂತಿತ್ತು. ಇದಕ್ಕೆ ಪ್ರತಿಯಾಗಿ ಭಾನುವಾರ ರ್ಯಾಲಿ ನಡೆಸಿದ ಜಿ ಟಿ ದೇವೇಗೌಡ, “ಜನರಿಗೆ ಪಕ್ಷಕ್ಕಿಂತ ಜಿ ಟಿ ದೇವೇಗೌಡನೇ ಮುಖ್ಯ” ಎಂದು ಟಾಂಗ್ ನೀಡಿದ್ದಾರೆ.

ಜೆಡಿಎಸ್‌ ವರಿಷ್ಠರು ಮತ್ತು ಜಿ ಟಿ ದೇವೇಗೌಡರ ನಡುವಿನ ಈ ತಿಕ್ಕಾಟದ ನಡುವೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣವು ಮೈಸೂರು ಭಾಗದಲ್ಲಿ ಭಾರೀ ಸದ್ದು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿದ ಬೃಹತ್ ಪಾದಯಾತ್ರೆಯಿಂದ ಮೈಸೂರಿನವರೇ ಆದ ಜಿ ಟಿ ದೇವೇಗೌಡ ಸಂಪೂರ್ಣವಾಗಿ ದೂರ ಉಳಿದಿದ್ದರು. ಮುಡಾ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಗುರಿಯಾಗಿಸಿದ್ದ ವಿಪಕ್ಷಗಳ ನಿಲುವಿಗೆ ಜಿ ಟಿ ದೇವೇಗೌಡರು ವಿರುದ್ಧವಿದ್ದರು ಮಾತ್ರವಲ್ಲ, ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಪರವಾಗಿ ಅಬ್ಬರ ಭಾಷಣ ಮಾಡಿದ್ದರು, ತಮ್ಮದೇ ಪಕ್ಷದ ನಾಯಕರನ್ನು ಹೀನಾಯವಾಗಿ ಜರಿದಿದ್ದರು.

ಅಷ್ಟೇ ಅಲ್ಲದೆ, ಮಂಡ್ಯ ಉಪಚುನಾವಣಾ ಪ್ರಚಾರ, ಮೈಸೂರು ಭಾಗದ ಪಕ್ಷದ ಸಮಾವೇಶಗಳು ಹಾಗೂ ಬಿಡದಿಯಲ್ಲಿ ನಡೆದ ಬೃಹತ್ ಹೋರಾಟಗಳಲ್ಲೂ ಜಿ ಟಿ ದೇವೇಗೌಡ ಭಾಗಿಯಾಗಲಿಲ್ಲ. ಈ ಎಲ್ಲ ಸಂದರ್ಭಗಳಲ್ಲೂ ಜೆಡಿಎಸ್‌ ನಾಯಕರು ಜಿ ಟಿ ದೇವೇಗೌಡರನ್ನು ದೂರವಿಟ್ಟಿದ್ದರು. ಆದ್ದರಿಂದ, ಸಿಟ್ಟಾದ ಜಿ ಟಿ ದೇವೇಗೌಡರ ಬೆಂಬಲಿಗರು, “ಪಕ್ಷದ ಬ್ಯಾನರ್, ಫೋಟೊಗಳಿಂದ ನಮ್ಮ ನಾಯಕನನ್ನು ವ್ಯವಸ್ಥಿತವಾಗಿ ಕೈಬಿಡಲಾಗಿದೆ” ಎಂದು ಆರೋಪಿಸಿದರೆ, ಸಾ.ರಾ. ಮಹೇಶ್ ಅವರಂತಹ ನಾಯಕರು ‘ಜಿಟಿಡಿಯವರೇ ಕಳೆದ ಎರಡು ವರ್ಷಗಳಿಂದ ಪಕ್ಷದ ಸಂಘಟನೆಯಿಂದ ದೂರ ಉಳಿದಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದ್ದರು.

ಈ ನಡುವೆ, ಕಳೆದ ಮೇ ತಿಂಗಳಲ್ಲಿ ಜಿ ಟಿ ದೇವೇಗೌಡರು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದರು. ಅಂದು ಮಾಧ್ಯಮಗಳ ಮುಂದೆ ಮಾತನಾಡಿದ್ದ ಜಿ ಟಿ ದೇವೇಗೌಡ, “ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆದರೆ, ಆ ಭೇಟಿ ಕೇವಲ ಸೌಜನ್ಯಕ್ಕಷ್ಟೇ ಸೀಮಿತವಾಯಿತು. ದೇವೇಗೌಡರ ಮೇಲಿನ ವೈಯಕ್ತಿಕ ಗೌರವ ಮುಂದುವರಿದಿದೆಯಾದರೂ, ಕುಮಾರಸ್ವಾಮಿ ಮತ್ತು ಮೈಸೂರು ಜಿಲ್ಲಾ ಜೆಡಿಎಸ್ ನಾಯಕರೊಂದಿಗಿನ ಜಿ ಡಿ ದೇವೇಗೌಡರ ಆಂತರಿಕ ಬಿರುಕು ಹಾಗೆಯೇ ಉಳಿದಿತ್ತು.

ಈ ಲೇಖನ ಓದಿದ್ದೀರಾ?: ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಜೆಡಿಎಸ್‌ನಲ್ಲಿ ಮೂಲೆಗುಂಪಾಗುತ್ತಿದ್ದ ಜಿ ಟಿ ದೇವೇಗೌಡ, ಕಾಂಗ್ರೆಸ್‌ ಸರ್ಕಾರದಲ್ಲೂ ‘ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ’ದ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಇತ್ತೀಚೆಗೆ, ಈ ಮಹಾಮಂಡಲದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲೂ ಜಿ ಟಿ ದೇವೇಗೌಡರ ಮರು ಆಯ್ಕೆಗೆ ಕಾಂಗ್ರೆಸ್ ಸರ್ಕಾರದಿಂದ ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಅವರ ಆಯ್ಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಪರಿಣಾಮವಾಗಿ, ಜಿ ಟಿ ದೇವೇಗೌಡರು ಬರೋಬ್ಬರಿ 6ನೇ ಬಾರಿಗೆ ಸಹಕಾರ ಮಹಾಮಂಡಲದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಈ ಬೆಳವಣಿಗೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಚರ್ಚೆಗೆ ಮತ್ತಷ್ಟು ಪುಷ್ಠಿ ನೀಡಿದೆ. ಗಮನಾರ್ಹವಾಗಿ, 2018ರ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿ ಡಿ ದೇವೇಗೌಡ ಪ್ರತಿಸ್ಪರ್ಧಿಗಳಾಗಿ ಸ್ಪರ್ಧಿಸಿ, ಸಿದ್ದರಾಮಯ್ಯ ಸೋಲುಂಡರೂ, ಅವರಿಬ್ಬರ ನಡುವಿನ ಬಾಂಧವ್ಯ ಕಳಚಿಲ್ಲ. ಜೆಡಿಎಸ್‌ನಲ್ಲಿದ್ದಾಗಲೂ ಜಿ ಟಿ ದೇವೇಗೌಡರು ಹಲವು ಬಾರಿ ಸಿದ್ದರಾಮಯ್ಯ ಅವರ ಆಡಳಿತ ಮತ್ತು ಕಾರ್ಯವೈಖರಿಯನ್ನು ಬಹಿರಂಗವಾಗಿ ಹೊಗಳಿದ್ದರು. ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ದಾಳಿ ನಡೆಸಿದಾಗಲೂ ಜಿ ಟಿ ದೇವೇಗೌಡ ಮೃದು ಧೋರಣೆ ತಳೆದಿದ್ದರು. ಈ ಹಳೆಯ ಸ್ನೇಹ ಮತ್ತು ಸರ್ಕಾರದೊಂದಿಗಿನ ಹೊಂದಾಣಿಕೆಯೇ ಅವರನ್ನು ಕಾಂಗ್ರೆಸ್ ಬಾಗಿಲಿಗೆ ತಂದು ನಿಲ್ಲಿಸುತ್ತಿದೆ ಎನ್ನಲಾಗಿದೆ.

ಚಾಮುಂಡೇಶ್ವರಿಯಲ್ಲಿ ಜಿ ಟ ದೇವೇಗೌಡರಂತಹ ಬಲಿಷ್ಠ ಒಕ್ಕಲಿಗ ನಾಯಕನನ್ನು ಕಳೆದುಕೊಂಡರೆ ಅದು ಜೆಡಿಎಸ್ ಪಕ್ಷಕ್ಕೆ ಮೈಸೂರು ಭಾಗದ ಸಹಕಾರ ಕ್ಷೇತ್ರ ಮತ್ತು ಬೃಹತ್ ಮತಬ್ಯಾಂಕ್‌ನ ಮಟ್ಟದಲ್ಲಿ ದೊಡ್ಡ ಪೆಟ್ಟಾಗಲಿದೆ. ಅದಕ್ಕಾಗಿಯೇ ಕುಮಾರಸ್ವಾಮಿ ‘ಇದು ಪಕ್ಷದ ಭದ್ರಕೋಟೆ’ ಎಂದು ಪ್ರತಿಪಾದಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್‌ಗೆ ಹಳೆಯ ಮೈಸೂರು ಭಾಗದಲ್ಲಿ ಒಕ್ಕಲಿಗ ಮತದಾರರ ನೆಲೆಯನ್ನು ಗಟ್ಟಿಗೊಳಿಸಲು ಜಿ ಟಿ ದೇವೇಗೌಡರ ಸೇರ್ಪಡೆ ನೆರವಾಗಲಿದೆ ಎಂದು ನೋಡಲಾಗುತ್ತಿದೆ. ಆದಾಗ್ಯೂ, ದೇವೇಗೌಡರು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯನ್ನು ಘೋಷಿಸಿಲ್ಲವಾದ್ದರಿಂದ, ಅವರ ರಾಜಕೀಯ ನಡೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...

ಶಿವಮೊಗ್ಗ | ಗಾಂಜಾ ಮಾರಾಟ ಆರೋಪ: ಐವರು ಅರೆಸ್ಟ್‌, 1.23 ಕೆಜಿ ಮಾದಕ ವಸ್ತು ಜಪ್ತಿ

ಶಿವಮೊಗ್ಗ ನಗರದ ಅನುಪಿನಕಟ್ಟೆ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ತುಂಗಾನಗರ...