ಶೋಷಿತರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರು ಹಾಗೂ ಅಹಿಂದ ವರ್ಗದ ಸರ್ವತೋಮುಖ ಬೆಳವಣಿಗೆಗೆ ಪಣ ತೊಟ್ಟ ಭಾರತ ಭೀಮ್ ಸೇನೆ ಸಂಘಟನೆಯ ಬೆನ್ನೆಲುಬಾಗಿ ಶ್ರಮಿಸುವ ಪದಾಧಿಕಾರಿಗಳ ಆಯ್ಕೆ ಗುಬ್ಬಿ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು.
ಸಭಾಂಗಣದಲ್ಲಿ ಭಾರತ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಟಿ.ಸಿ.ಸಚಿನ್, ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಎಚ್.ಕೆ.ಮಧು, ತಾಲ್ಲೂಕು ಅಧ್ಯಕ್ಷರಾಗಿ ಭಾಸ್ಕರ್ ಆಯ್ಕೆ ನಡೆಯಿತು.
ಸೇನೆಯ ಯುವ ಘಟಕದ ಗೌರವಾಧ್ಯಕ್ಷ ಎ.ಟಿ.ಮುನಿರಾಜು, ಜಿಲ್ಲಾ ಉಪಾಧ್ಯಕ್ಷ ಗಿರೀಶ್, ತಾಲ್ಲೂಕು ಯುವ ಘಟಕದ ಅಧ್ಯಕ್ಷ ನವೀನ್, ಸೃಜನ್, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಎನ್.ಮಂಜುನಾಥ್, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಇಮ್ರಾನ್ ಪಾಷ, ಅಲ್ಪ ಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಜಬಿವುಲ್ಲಾ, ಯುವ ಘಟಕದ ಅಧ್ಯಕ್ಷ ಸಾದತ್ ಹೀಗೆ ಅನೇಕ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ನಂತರ ಪ್ರಮಾಣಪತ್ರ ನೀಡಿ ಸೇನೆಯ ಕೆಲಸಕ್ಕೆ ಬದ್ಧರಾಗಿ ದುಡಿಯಲು ಪಣ ತೊಡಲಾಯಿತು.
ಭಾರತ ಭೀಮ್ ಸೇನೆ ರಾಜ್ಯಾಧ್ಯಕ್ಷ ದಿನೇಶ್ ಮಾತನಾಡಿ ಸಾಮಾಜಿಕ ನ್ಯಾಯ ಕಾಪಾಡುವಲ್ಲಿ ಹಲವು ಸಂಘಟನೆಗಳು ದುಡಿಯುತ್ತಿವೆ. ಈ ಪೈಕಿ ನಮ್ಮ ಸೇನೆ ವಿಶೇಷವಾಗಿ ಯುವ ಶಕ್ತಿಯಿಂದ ತುಂಬಿ ಚೈತನ್ಯದಿಂದ ಕೆಲಸ ನಡೆದಿದೆ. ಅಂಬೇಡ್ಕರ್ ಅವರ ಮಾರ್ಗದಲ್ಲಿ ಯಾವುದೇ ಒಂದು ವರ್ಗಕ್ಕೆ ಸೀಮಿತವಾಗದೆ ಶೋಷಿತ ಎಲ್ಲಾ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದೇವೆ. ಸೇನೆಯ ನಾನಾ ಮಜಲು ರಾಜ್ಯದಲ್ಲಿ ಹರಡಿದೆ. ಎಲ್ಲಾ ಜಿಲ್ಲೆಯಲ್ಲಿ ಶಾಖೆ ಹೊಂದಿದ್ದು ತುಮಕೂರು ಜಿಲ್ಲೆಯಲ್ಲೂ ಸೇನೆಯ ಸೇವೆಗೆ ಯುವಕರು ಸಿದ್ಧರಿದ್ದಾರೆ. ಅವರೊಟ್ಟಿಗೆ ಸಮಾಜ ಸುಧಾರಣೆ ತರುವ ಕೆಲಸ ಒಗ್ಗೂಡಿ ಮಾಡೋಣ ಎಂದು ಕರೆ ನೀಡಿದರು.
ಸೇನೆಯ ಯುವ ಘಟಕದ ನೂತನ ರಾಜ್ಯಾಧ್ಯಕ್ಷ ಟಿ.ಸಿ.ಸಚಿನ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ ಹೋರಾಟ ಸಂಘಟನೆಯ ಪರಿಕಲ್ಪನೆಯಲ್ಲಿ ನಮ್ಮ ಸೇನೆ ಕೆಲಸ ಮಾಡಲಿದೆ. ಶೋಷಣೆ ಕಂಡಲ್ಲಿ ಸೇನೆ ಸಂತ್ರಸ್ತರ ಪರ ನಿಲ್ಲಲಿದೆ. ರಾಜ್ಯದಲ್ಲಿ ಯುವಕರ ಈ ಸೇನೆ ದಲಿತರು, ಹಿಂದುಳಿದವರು ಹಾಗೂ ಅಲ್ಪ ಸಂಖ್ಯಾತರ ಮೇಲೆತ್ತುವ ಕಾರ್ಯ ನಿರಂತರ ಮಾಡಲಿದೆ. ಈ ಸತ್ಕಾರ್ಯಕ್ಕೆ ತುಮಕೂರು ಜಿಲ್ಲೆ ಹಾಗೂ ಗುಬ್ಬಿ ತಾಲ್ಲೂಕು ಘಟಕ ಪ್ರಾಮಾಣಿಕವಾಗಿ ದುಡಿಯಲಿದೆ ಎಂದರು.
ಇದೇ ಸಂದರ್ಭದಲ್ಲಿ ಸೇನೆಯ ನೂರಾರು ಸದಸ್ಯರು ಹಾಜರಿದ್ದರು.
