ಗುಬ್ಬಿ: ಎಂಟನೇ ತರಗತಿಯವರೆಗೆ ಬೋಧನೆ ಮಾಡುವಂತೆ ನೇಮಕಾತಿ ಮಾಡಿದ ಸರ್ಕಾರ ನಮ್ಮಲ್ಲೇ ಇಬ್ಬಗೆಯೇ ನೀತಿ ಅನುಸರಿಸಿ ಒಡಕು ಮೂಡಿಸುತ್ತಿರುವುದನ್ನು ಸೇರಿದಂತೆ ಪ್ರಮುಖ ಮೂರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರು ಐದು ಬಸ್ಸುಗಳಲ್ಲಿ ಬೆಂಗಳೂರು ಚಲೋ ಹೊರಟರು.ಸರ್ಕಾರಿ ಕಾಲೇಜು ಮೈದಾನದಲ್ಲಿ ತಾಲ್ಲೂಕಿನ ಪ್ರಾಥಮಿಕ ಶಾಲೆಗಳ ಎಲ್ಲಾ ಶಿಕ್ಷಕರು ಒಗ್ಗೂಡಿ ಬೆಂಗಳೂರಿನತ್ತ ತೆರಳಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಟಿ.ಪ್ರಕಾಶ್ ಮಾತನಾಡಿ ನೇಮಕಾತಿ ಪ್ರಕಾರ ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿ, ವರ್ಗಾವಣೆಗೆ ಅಡ್ಡಿಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ–2017ಕ್ಕೆ ತಿದ್ದುಪಡಿ ತಂದು ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಪ್ರಾಥಮಿಕ ಶಾಲಾ ಶಿಕ್ಷಕರು ರಜೆ ಹಾಕಿ, ಬೆಂಗಳೂರು ಚಲೋ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.2016ಕ್ಕಿಂತ ಮೊದಲು ನೇಮಕವಾದ ಶಿಕ್ಷಕರಿಗೆ 2017ರ ನಿಯಮ ಅನ್ವಯಿಸಬಾರದು. 1ರಿಂದ 8ನೇ ತರಗತಿಯ ಪ್ರಾಥಮಿಕ ಶಾಲೆಗಳಿಗೆ ನೇಮಕವಾದ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿರುವ ಆದೇಶವನ್ನು ಹಿಂಪಡೆಯಬೇಕು. ಪದವಿ ವಿದ್ಯಾರ್ಹತೆ ಹೊಂದಿರುವ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪರಿಗಣಿಸಬೇಕು. ಸೇವಾ ಜ್ಯೇಷ್ಠತೆ, ಬಡ್ತಿ, ವರ್ಗಾವಣೆ ಪ್ರಕ್ರಿಯೆಯಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಬಡ್ತಿಯಲ್ಲಿ ಮೊದಲ ಆದ್ಯತೆ ನೀಡಬೇಕು. ಮುಖ್ಯಶಿಕ್ಷಕರ ಹುದ್ದೆಗೆ ಸೇವಾ ಹಿರಿತನ ಪರಿಗಣಿಸಿ ಬಡ್ತಿ ನೀಡಬೇಕು. ಬಿ.ಇಡಿ ಪದವಿಧರರಿಗೆ ಪ್ರೌಢಶಾಲೆಗೆ ಪರಿಗಣಿಸಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜ್ಯದ ಪ್ರಾಥಮಿಕ ಶಾಲೆಗಳ ಒಂದು ಲಕ್ಷಕ್ಕೂ ಹೆಚ್ಚಿನ ಶಿಕ್ಷಕರು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ನಮ್ಮ ತಾಲ್ಲೂಕಿನಿಂದ ಐದು ನೂರಕ್ಕೂ ಅಧಿಕ ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಆರ್.ಕುಮಾರ್, ಉಪಾಧ್ಯಕ್ಷ ಮಹೇಶ್, ಶಿವಮ್ಮ, ಸಹ ಕಾರ್ಯದರ್ಶಿ ಮಂಜುನಾಥ, ಸಂಘಟನಾ ಕಾರ್ಯದರ್ಶಿ ಕಲ್ಪನಾ, ಮಲ್ಲೇಶ್, ನಿರ್ದೇಶಕರಾದ ಚನ್ನಬಸವಯ್ಯ, ಶಿಡ್ಲಪ್ಪ, ಗಂಗಾಧರ್, ಅರುಣ್ ಕುಮಾರ್ ಇತರರು ಇದ್ದರು.