ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಹೇಮಾವತಿ ಲಿಂಕ್ ಕೆನಾಲ್ ಹಾಗೂ ಪೈಪ್‌ಲೈನ್ ಕಾಮಗಾರಿ ವಿರೋಧಿಸಿ ಮನವಿ ಸಲ್ಲಿಸಲು ಬಂದಿದ್ದ ಹೇಮಾವತಿ ಹೋರಾಟ ಸಮಿತಿ ಹಾಗೂ ರೈತ ಸಂಘದ ಪದಾಧಿಕಾರಿಗಳನ್ನು ಕಾರ್ಯಕ್ರಮದ ವೇದಿಕೆ ಬಳಿಗೆ ತೆರಳಲು ಪೊಲೀಸರು ತಡೆದ ಹಿನ್ನೆಲೆಯಲ್ಲಿ ಗುಬ್ಬಿ ವೀರಣ್ಣ ರಂಗಮಂದಿರದ ಗೇಟ್ ಬಳಿ ಕುಳಿತು ದಿಢೀರ್ ಪ್ರತಿಭಟನೆ ನಡೆಸಿದರು.
ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಗಮಿಸಿದ್ದರು. ಇದೇ ವೇಳೆ ರೈತರು ತಮ್ಮ ಸಮಸ್ಯೆ ಹಾಗೂ ಹೇಮಾವತಿ ನೀರಿನ ಹಕ್ಕಿನ ಕುರಿತು ಮನವಿ ಸಲ್ಲಿಸಲು ಮುಂದಾದಾಗ ಪೊಲೀಸರು ಅವರನ್ನು ರಂಗಮಂದಿರದೊಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಹೋರಾಟಗಾರರು “ನಮ್ಮ ನೀರು, ನಮ್ಮ ಹಕ್ಕು” ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಜೆಡಿಎಸ್ ಮುಖಂಡ ಬಿ.ಎಸ್. ನಾಗರಾಜು ಮಾತನಾಡಿ, ಹೇಮಾವತಿ ನೀರನ್ನು ಜಿಲ್ಲೆಗೆ ಉಳಿಸಬೇಕು ಹಾಗೂ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಬಾರದು ಎಂಬ ಮನವಿ ಸಲ್ಲಿಸಲು ಬಂದ ರೈತರಿಗೆ ಅವಕಾಶ ನೀಡದಿರುವುದು ಖಂಡನೀಯ. ರೈತರನ್ನು ಪೊಲೀಸರ ಮೂಲಕ ತಡೆಯುವ ಅಗತ್ಯವಿರಲಿಲ್ಲ. ಹೋರಾಟಕ್ಕೆ ರೈತರು ಸಜ್ಜಾಗಿದ್ದು, ಮನವಿ ಸ್ವೀಕರಿಸಿ ಡಿಸಿಎಂ ಹಾಗೂ ಶಾಸಕರು ಭರವಸೆ ನೀಡಬೇಕಿತ್ತು ಎಂದರು.
ಜಿಪಂ ಮಾಜಿ ಸದಸ್ಯ ಪಿ.ಬಿ. ಚಂದೇಶೇಖರಬಾಬು ಮಾತನಾಡಿ, ಹೇಮಾವತಿ ಪೈಪ್‌ಲೈನ್ ಕಾಮಗಾರಿ ವಿರುದ್ಧ ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಅವೈಜ್ಞಾನಿಕ ಪೈಪ್‌ಲೈನ್ ಯೋಜನೆಯ ಮೂಲಕ ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತಿದೆ. ಈ ಕುರಿತು ಮನವಿ ಸಲ್ಲಿಸಲು ಬಂದ ರೈತರನ್ನು ಕಾರ್ಯಕ್ರಮದೊಳಗೆ ಬಿಡದೆ ಪೊಲೀಸರ ಮೂಲಕ ತಡೆದಿರುವುದು ಸರಿಯಲ್ಲ. ಸರ್ಕಾರಕ್ಕೆ ಸಾಮಾನ್ಯ ರೈತರ ಸಮಸ್ಯೆಗಳ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ರೈತರು ತಮ್ಮ ನೀರಿನ ಹಕ್ಕಿಗಾಗಿ ಮನವಿ ಸಲ್ಲಿಸಲು ಬಂದಿದ್ದರು. ಆದರೆ ಅವರ ಮನವಿ ಸ್ವೀಕರಿಸದೆ ಕಾರ್ಯಕ್ರಮದಲ್ಲಿ ಕೇವಲ ಫೋಟೋಶೂಟ್‌ಗೆ ಆದ್ಯತೆ ನೀಡಲಾಗಿದೆ. ರೈತರ ಅರ್ಜಿಗಳನ್ನು ಸ್ವೀಕರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿ, ರೈತರನ್ನೇ ಹೊರಗಿಟ್ಟು ಪೊಲೀಸರ ಮೂಲಕ ತಡೆದಿರುವುದು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತದೆ ಎಂದು ಆರೋಪಿಸಿದರು.
ಇದೇ ವೇಳೆ ಹೇಮಾವತಿ ಹೋರಾಟಗಾರರೊಂದಿಗೆ ರೈತ ಸಂಘದ ಪದಾಧಿಕಾರಿಗಳು ಕೂಡ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳದಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡ ಕಳ್ಳಿಪಾಳ್ಯ ಲೋಕೇಶ್, ಬಿಜೆಪಿ ಮುಖಂಡ ಎಚ್.ಟಿ. ಭೈರಪ್ಪ, ಸಿದ್ದರಾಮಯ್ಯ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.





