ಕಳೆದ ಕೆಲ ದಿನಗಳಿಂದ ರಂಗೇರಿದ್ದ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ ಮತ ಚಲಾವಣೆ ಶುಕ್ರವಾರ ಬೆಳಿಗ್ಗೆ 8 ರಿಂದ ಬಿರುಸಿನಿಂದ ತಾಲ್ಲೂಕಿನ ಏಳು ಮತಗಟ್ಟೆಯಲ್ಲಿ ಸಾಗಿತ್ತು. ಸಂಜೆ 4 ಗಂಟೆಗೆ ಈ ಪ್ರಾಶಸ್ತ್ಯ ಮತ ಚಲಾವಣೆ ಮುಕ್ತಾಯ ಕಂಡು ಒಟ್ಟಾರೆ 3029 ಮತ ಚಲಾವಣೆಗೊಂಡಿದ್ದು ಶೇಕಡಾ 78.88 ಮತದಾನ ದಾಖಲಾಗಿದೆ.
ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಕೆರೆಗೆ ಹೇಮಾವತಿ ನೀರು ಹರಿಸಿಲ್ಲ ಎಂಬ ವಿಚಾರಕ್ಕೆ ಬಹಿಷ್ಕಾರದ ಮಾತುಗಳು ರೈತರು ಹೇಳಿ ಪ್ರತಿಭಟನೆ ನಡೆಸಿದ್ದರು. ರೈತರ ಮನವೊಲಿಸಲು ಸಾಕಷ್ಟು ಪ್ರಯತ್ನ ನಡೆದಿತ್ತು. ಈ ಓಲೈಕೆಯ ನಡುವೆ ಬಹಿಷ್ಕಾರದ ಬಿಸಿ ತಟ್ಟುವ ಭೀತಿ ಕಾಣುತ್ತಿತ್ತು. ಆದರೆ ಪೊಲೀಸರ ಬಂದೋಬಸ್ತ್ ನಲ್ಲಿ ಒಟ್ಟು 337 ಮತಗಳ ಬೂತ್ ನಲ್ಲಿ ಮತ ಚಲಾವಣೆ ಶಾಂತಿಯುತವಾಗಿ ನಡೆಯಿತು. ಆದರೆ ಮತಗಟ್ಟೆಯ ಹೊರ ಭಾಗದಲ್ಲಿ ಯಾವ ಪಕ್ಷದವರು ಟೇಬಲ್ ಹಾಕದಿರುವುದು ಗಮನಾರ್ಹ.
ಗುಬ್ಬಿ ಪಟ್ಟಣ ಹಾಗೂ ಕಸಬ ಹೋಬಳಿಯ ಎರಡು ಬೂತ್ ಗಳು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸ್ಥಾಪಿಸಿದ್ದು, ಬೆಳಿಗ್ಗೆಯಿಂದಲೇ ಚುರುಕಿನ ಮತದಾನ ನಡೆದಿದೆ. ಗುಬ್ಬಿ ನಗರ 698 ಹಾಗೂ ಕಸಬ 651 ಒಟ್ಟು ಮತಗಳಿವೆ. ಕಡಬ ಮತಗಟ್ಟೆಯಲ್ಲಿ 535 ಮತಗಳು, ಸಿ.ಎಸ್.ಪುರ ಮತಗಟ್ಟೆಯಲ್ಲಿ ಅತಿ ಕಡಿಮೆ 179 ಮತಗಳಿವೆ. ಅತಿ ಹೆಚ್ಚು 840 ಮತಗಳು ನಿಟ್ಟೂರು ಮತಗಟ್ಟೆಯಲ್ಲಿವೆ. ಚೇಳೂರು ಮತಗಟ್ಟೆಯಲ್ಲಿ 600 ಮತಗಳು ಇದ್ದು ಒಟ್ಟಾರೆ 3840 ಮತಗಳು ಈ ಚುನಾವಣೆಯಲ್ಲಿತ್ತು.
ಮತದಾನದ ಅಂತಿಮ ಮತ ಚಲಾವಣೆ ಈ ರೀತಿ ಇದೆ. ಗುಬ್ಬಿ ಪಟ್ಟಣದ ಮೊದಲ ಮತಗಟ್ಟೆಯಲ್ಲಿ 590 (ಶೇ.84.53), ಎರಡನೇ ಮತಗಟ್ಟೆಯಲ್ಲಿ 509(ಶೇ.78.19), ಹಾಗಲವಾಡಿ ಮತಗಟ್ಟೆಯಲ್ಲಿ 178(ಶೇ.52.82), ಕಡಬ ಮತಗಟ್ಟೆಯಲ್ಲಿ 398(ಶೇ.74.39), ಸಿ.ಎಸ್.ಪುರ ಮತಗಟ್ಟೆಯಲ್ಲಿ 147(ಶೇ.82.12), ನಿಟ್ಟೂರು ಮತಗಟ್ಟೆಯಲ್ಲಿ 695(ಶೇ.82.74) ಹಾಗೂ ಚೇಳೂರು ಮತಗಟ್ಟೆಯಲ್ಲಿ 512(ಶೇ.85.33) ಚಲಾವಣೆಗೊಂಡಿದೆ.





