ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್ ಎಚ್ ಎಂ ಒಳಗುತ್ತಿಗೆ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಸೇವೆಯನ್ನು ಖಾಯಂ ಮಾಡುವಂತೆ ಆಗ್ರಹಿಸಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಂಗಾಧರ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಆರೋಗ್ಯ ಇಲಾಖೆಯ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸುಮಾರು 28,258 ನೌಕರರು ಎನ್‌ಎಚ್‌ಎಂ ಯೋಜನೆ ಅಡಿಯಲ್ಲಿ ಒಳಗುತ್ತಿಗೆ ನೌಕರರಾಗಿ ಕಳೆದ 20 ವರ್ಷದಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಾರಿಯರ್ ಗಳಂತೆ ಕರ್ತವ್ಯ ನಿರ್ವಹಿಸಿದ್ದು ನಮ್ಮ ಎಲ್ಲಾ ಸೇವೆಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷವು ವಿಧಾನಸಭೆ ಚುನಾವಣೆಯ ತಮ್ಮ ಪ್ರಣಾಳಿಕೆಯಲ್ಲಿ ಎನ್‌ಎಚ್‌ಎಮ್ ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಭರವಸೆ ನೀಡಿತ್ತು. ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳಿಗೆ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೂ ಸಹ ಮನವಿ ಮಾಡಲಾಗಿದೆ. ಘೋಷಿಸಿದಂತೆ ನಮ್ಮನ್ನು ಖಾಯಂ ಮಾಡಬೇಕೆಂಬುದು ನಮ್ಮ ಬಹು ದಿನಗಳ ಏಕೈಕ ಬೇಡಿಕೆಯಾಗಿದೆ ಎಂದು ಸಂಘದ ಪದಾಧಿಕಾರಿಗಳು ವಿವರಿಸಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ಆರೋಗ್ಯ ಸಚಿವರು ಸಭೆ ನಡೆಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನೌಕರರ ಖಾಯಂ ಕಡತ ಸಿದ್ಧಪಡಿಸಲು ಸೂಚಿಸಿದ್ದು ಅದರಂತೆ ಖಾಯಂಮಾತಿ ಕಡತವು ರಚನೆಯಾಗಿ ಇಲಾಖೆಯ ಹಂತದಲ್ಲಿದೆ ನುಡಿದಂತೆ ನಡೆಯುತ್ತಿರುವ ಘನ ಸರ್ಕಾರವು ಸಚಿವ ಸಂಪುಟದಲ್ಲಿ ಉನ್ನತ ಮಟ್ಟದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಸರ್ಕಾರ ವನ್ನು ಒತ್ತಾಯಿಸಿದ್ದಾರೆ.
ಅಯ್ಯೂಷ್ ವೈದ್ಯ ಅಬ್ದುರ್ ರೆಹಮಾನ್ ಮಾತನಾಡಿ ರಾಜ್ಯ ಸಂಘದ ಸೂಚನೆಯ ಮೇರೆಗೆ ನಮ್ಮ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎನ್ ಹೆಚ್ ಎಂ ಒಳಗುತ್ತಿಗೆ ನೌಕರರೆಲ್ಲಾ ಸೇರಿ ಸರ್ಕಾರದ ಮೇಲೆ ಒತ್ತಡ ಹೇರಲು ತಮ್ಮ ತಮ್ಮ ಕೆಲಸದ ಸ್ಥಳಗಳಲ್ಲಿ ಆ.17 ರಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಾಗುತ್ತಿದ್ದು ಸಾಂಕೇತಿಕವಾಗಿ ಶಾಂತಿಯುತವಾಗಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಕೈಗೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕೃಷ್ಣ , ಮೋಹನ್ , ಹರೀಶ್ , ನವೀನ್ , ಮಧುರಾಜ್ , ರಾಘವೇಂದ್ರ , ನಾಗರಾಜು , ಶಿವಕುಮಾರ್ ಇದ್ದರು.