ಚಿಗುರು ಯುವಜನ ಸಂಘ, ಅಮಲಗೊಂದಿ ಹಾಗೂ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟ-ಕರ್ನಾಟಕ ಸಹಯೋಗದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮನೋಭಾವಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಶ್ರೀಯುತ ಪ್ರೊ.ನರೇಂದ್ರ ನಾಯಕ್ ಶಾಲಾ ಮಕ್ಕಳಿಗೆ ವಿಡಿಯೋ ಪ್ರದರ್ಶನ – ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಾ ಸಂವಾದವನ್ನು ನಡೆಸಿದರು.

ಮಕ್ಕಳು ಶಿಕ್ಷಣ ಕಲಿಯುವಾಗ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸಮುದಾಯದಲ್ಲಿ ನಡೆಯುವ ಅನೇಕ ದುರ್ಘಟನೆಗಳು ನಾವು ಪ್ರಶ್ನೆಸದೆ ಇದ್ದ ಪರಿಣಾಮದಿಂದಲೂ ಸಹ ಘಟಿಸುತ್ತವೆ. ಹಾಗಾಗಿ ಪ್ರಜ್ಞಾವಂತರಾದ ಎಲ್ಲರೂ ಸಹ ತಮ್ಮ ದಿನನಿತ್ಯದ ಜೀವನದಲ್ಲಿ ಧೈರ್ಯದಿಂದ ಪ್ರಶ್ನೆ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕಿದೆ. ಪ್ರಶ್ನಿಸದೆ ಯಾವುದನ್ನು ಸಹ ಒಪ್ಪಿಕೊಳ್ಳಬಾರದು. ತಮ್ಮ ಶಿಕ್ಷಕರು ಹೇಳಿದರು ಸಹ ಅದನ್ನು ವಿಮರ್ಶಾತ್ಮಕವಾಗಿ ಆಲೋಚಿಸಬೇಕು. ಸಮುದಾಯದಲ್ಲಿ ಮುಗ್ಧ ಜನರು ಅನೇಕ ಮೋಸಗಾರರಿಂದ ಮೋಸ ಹೋಗುವಂತಹ ಸಂದರ್ಭಗಳನ್ನು ನಾವು ನೋಡಿದ್ದೇವೆ. ಪವಾಡಗಳ ಮೂಲಕ ವಂಚನೆ ಮಾಡುವ ಜನರನ್ನು ವೈಜ್ಞಾನಿಕವಾಗಿ ಪ್ರಶ್ನಿಸಿ ಇಂಥವರಿಂದ ಜನಸಾಮಾನ್ಯರನ್ನು ರಕ್ಷಿಸಬೇಕಿದೆ. ಮಕ್ಕಳಾದ ತಾವುಗಳೆಲ್ಲರೂ ವಿಜ್ಞಾನವನ್ನು ಕಲಿಯುವುದರ ಜೊತೆ ವೈಜ್ಞಾನಿಕ ಮನೋಭಾವನೆಯನ್ನು ರೂಡಿಸಿಕೊಳ್ಳಬೇಕಿದೆ ಎಂದು ಅಂತರಾಷ್ಟ್ರೀಯ ಖ್ಯಾತಿಯ ಶ್ರೀಯುತ ನರೇಂದ್ರ ನಾಯಕ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಮಂಜುನಾಥ್ ಆಮಲಗೊಂದಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ತಪ್ಪುಗಳು ನಡೆಯುತ್ತಿದ್ದರು ನೋಡಿಕೊಂಡು ಸುಮ್ಮನಿರುವವರ ಸಂಖ್ಯೆ ಹೆಚ್ಚಿದೆ. ಮಕ್ಕಳು ಕಲಿಕೆಯ ಜೊತೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿಯಬೇಕಿದೆ. ಮಕ್ಕಳು ತಮ್ಮ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆ ಬೇರೆಯವರಿಗೂ ಸಹ ಅದರ ಅರಿವನ್ನು ಮೂಡಿಸಬೇಕಿದೆ. ಮೌಡ್ಯತೆಯನ್ನು ಅಳಿಸಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ತಿಳಿಸುತ್ತಿರುವ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಕಾರ್ಯವು ಶ್ಲಾಘನೀಯವಾದದ್ದು. ಭಾರತದ ಸಂವಿಧಾನದಲ್ಲಿ 51A(h) ಪ್ರಕಾರ ಮೂಲಭೂತ ಕರ್ತವ್ಯಗಳ ಅಡಿಯಲ್ಲಿ, “ವೈಜ್ಞಾನಿಕ ಮನೋಭಾವ, ಮಾನವತಾವಾದ ಮತ್ತು ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸುವುದು ಭಾರತದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ”. ಅದ್ದರಿಂದ ಎಲ್ಲರೂ ಸಹ ಈ ಮೂಲಭೂತ ಕರ್ತವ್ಯವನ್ನು ಮಾಡಬೇಕೆಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆಯ್ದ ಐದು ಶಾಲೆಗಳಾದ ಅಮಲಗೊಂದಿ ಪ್ರೌಢಶಾಲೆ, ಸಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ), ಮಂಜುಶ್ರೀ ಆಂಗ್ಲಶಾಲೆ, ಎಪಿಜೆ ಅಬ್ದುಲ್ ಕಲಾಂ ಶಾಲೆ ಮತ್ತು ಚಿಕ್ಕನಹಳ್ಳಿಯ ಮುರಾರ್ಜಿ ಶಾಲೆಯ ಮಕ್ಕಳಿಗೆ ಮೌಡ್ಯಗಳನ್ನು ಬಯಲು ಮಾಡುವ ವಿಡಿಯೋಗಳನ್ನು, ಕೆಲವು ಮೌಡ್ಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಈ ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಅಂಬಿಕಾ, ಯಶೋಧ, ಮಧು, ಮಂಜುನಾಥ್ ಆಲದಮರ, ಸ್ವಯಂಸೇವಕರಾದ ಸಾಜಿ, ಶಾಲೆಗಳ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.