ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ. ಜಿಲ್ಲೆಯ 50,060 ಅರ್ಹ ಮತದಾರರ ಪೈಕಿ 35,825 ಮಂದಿ ಮತ ಚಲಾಯಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಮತ ಚಲಾಯಿಸಿದವರಲ್ಲಿ 21,226 ಪುರುಷರು ಹಾಗೂ 14,599 ಮಹಿಳೆಯರು ಸೇರಿದ್ದಾರೆ. ಜಿಲ್ಲೆಯ 11 ತಾಲ್ಲೂಕುಗಳ ವ್ಯಾಪ್ತಿಯಲ್ಲಿ 57 ಮುಖ್ಯ ಹಾಗೂ 23 ಹೆಚ್ಚುವರಿ ಮತಗಟ್ಟೆಗಳು ಸೇರಿದಂತೆ ಒಟ್ಟು 80 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಿತು.
ತುಮಕೂರು ನಗರದಲ್ಲಿ 7,075 ಮಂದಿ ಮತ ಚಲಾಯಿಸಿದ್ದು, ಜಿಲ್ಲೆಯ ತಾಲ್ಲೂಕುಗಳ ಪೈಕಿ ಅತಿ ಹೆಚ್ಚು ಮತದಾರರು ಇಲ್ಲಿ ಹಕ್ಕು ಚಲಾಯಿಸಿದ್ದಾರೆ. ಶಿರಾದಲ್ಲಿ 3,971, ಪಾವಗಡದಲ್ಲಿ 3,460, ತುಮಕೂರು ಗ್ರಾಮಾಂತರದಲ್ಲಿ 3,568, ಮಧುಗಿರಿಯಲ್ಲಿ 3,129, ತಿಪಟೂರಿನಲ್ಲಿ 3,065, ಗುಬ್ಬಿಯಲ್ಲಿ 3,029, ಚಿಕ್ಕನಾಯಕನಹಳ್ಳಿಯಲ್ಲಿ 2,297, ಕೊರಟಗೆರೆಯಲ್ಲಿ 2,151, ತುರುವೇಕೆರೆಯಲ್ಲಿ 2,063 ಹಾಗೂ ಕುಣಿಗಲ್ನಲ್ಲಿ 2,017 ಮಂದಿ ಮತ ಚಲಾಯಿಸಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ನ ಶಶಿ ಹುಲಿಕುಂಟೆಮಠ್, ಬಿಜೆಪಿಯ ಕೆ.ಎಂ. ಸುರೇಶ (ಸೋಮೇಶ್ವರ), ಸರ್ವ ಜನತಾ ಪಕ್ಷದ ಜಿ.ಸಿ. ಪಟೇಲ್ ಸೇರಿದಂತೆ ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರು.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲ ಮತಗಟ್ಟೆಗಳಲ್ಲಿ ವೆಬ್ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ 400 ಸಿಬ್ಬಂದಿ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಎಲ್ಲ ತಾಲ್ಲೂಕುಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ (ಎಫ್ಎಸ್ಟಿ) ಮತ್ತು ಸೆಕ್ಟರ್ ಅಧಿಕಾರಿಗಳ ತಂಡಗಳನ್ನು ನೇಮಿಸಲಾಗಿತ್ತು.
ಚುನಾವಣೆಯ ಮತ ಎಣಿಕೆಯು ಅಕ್ಟೋಬರ್ 27ರಂದು ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.





