ಕೇಂದ್ರ ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಹಬಾಳ್ವೆ ಉಡುಪಿ ಮತ್ತು ಸಹಭಾಗಿ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಐಕ್ಯ ವೇದಿಕೆ ವತಿಯಿಂದ ಶುಕ್ರವಾರ ಉಡುಪಿಯಲ್ಲಿ ಪಾದಯಾತ್ರೆ ಮತ್ತು ಪ್ರತಿಭಟನಾ ಸಭೆ ನಡೆಯಿತು. ಸುರಿಯುವ ಮಳೆಯ ನಡುವೆಯೂ ನೂರಾರು ಪ್ರತಿಭಟನಕಾರರು ಭಾಗವಹಿಸಿ ಘೋಷಣೆಗಳನ್ನು ಕೂಗಿದರು.


ಮತದಾನದ ಹಕ್ಕು ಕಸಿಯುವ ಹುನ್ನಾರ: ಭವ್ಯ ನರಸಿಂಹಮೂರ್ತಿ
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ, ಮತದಾನದ ಹಕ್ಕು ದೇಶದ ಸಾರ್ವಭೌಮತ್ವವನ್ನು ಕಾಪಾಡುವ ಪ್ರಮುಖ ಅಸ್ತ್ರವಾಗಿದೆ. ಈ ಹಕ್ಕಿನಿಂದ ಮಾತ್ರ ಎಲ್ಲರೂ ಸಮಾನರಾಗಿದ್ದು, ಅದನ್ನು ಕಿತ್ತುಕೊಳ್ಳುವ ಸಂಚು ನಡೆಯುತ್ತಿದೆ. ಮತದಾನದ ಹಕ್ಕು ಇಲ್ಲದಿದ್ದರೆ ನಮ್ಮ ಭವಿಷ್ಯವೇ ಇರುವುದಿಲ್ಲ ಮತದಾನ ಹಕ್ಕು ಇರುವುದರಿಂದ ರಾಜಕಾರಣಿಗಳು ಚುನಾವಣೆ ಸಂದರ್ಭ ನಮ್ಮ ಮನೆಬಾಗಿಲಿಗೆ ಬರುತ್ತಾರೆ ಮತ್ತು ಮಹಿಳೆಯರಿಗೆ ಅನೇಕ ಯೋಜನೆಗಳನ್ನು ನೀಡುತ್ತಾರೆ. ಇದೆಲ್ಲವೂ ಎಲ್ಲರಿಗೂ ಸಮಾನವಾಗಿರುವ ಆ ಒಂದೇ ಒಂದು ಮತದಾನದ ಹಕ್ಕುಗಳಿಂದ ಮಾತ್ರ ಸಾಧ್ಯವಾಗುತ್ತಿದೆ ಎಂದ ಅವರು, ಅನ್ಯಾಯದ ವಿರುದ್ಧ ಹೋರಾಟ ನಡೆಸಬೇಕೆಂಬ ಭಾರತೀಯರ ಭಾವನೆ ಇನ್ನು ಕೂಡ ಜೀವಂತವಾಗಿದೆ ಎಂಬುದಕ್ಕೆ ಈಗ ನಡೆಯುತ್ತಿರುವ ಹೋರಾಟಗಳೇ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂವಿಧಾನ ವಿರೋಧಿ ಎಸ್‌ಐಆರ್ ರದ್ದಾಗಲಿ: ಫಣಿರಾಜ್
ಸಹಬಾಳ್ವೆ ಸಂಚಾಲಕ ಪ್ರೊ. ಕೆ. ಫಣಿರಾಜ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ಬಡವರು, ಮಹಿಳೆಯರು, ದಲಿತರು, ಆದಿವಾಸಿಗಳು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕಿಗೆ ಧಕ್ಕೆ ತರುವ ಆತಂಕವಿದೆ. ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ದುರ್ಬಲಗೊಳಿಸುವ ಪ್ರಯತ್ನದ ವಿರುದ್ಧ ಹೋರಾಟ ಮುಂದುವರಿಯಬೇಕು ಎಂದು ಹೇಳಿದರು.

ಜಿಲ್ಲಾ ಮುಸ್ಲಿಮ್ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಯಾಸೀನ್ ಮಲ್ಪೆ ಮಾತನಾಡಿ, ಕಳೆದ 12 ವರ್ಷಗಳಿಂದ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಿಕ ಮೌಲ್ಯಗಳು ದುರ್ಬಲಗೊಳ್ಳುತ್ತಿವೆ ಎಂದು ಆರೋಪಿಸಿದರು. ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಬದಲಾವಣೆಗಾಗಿ ಜನರು ಬೀದಿಗಿಳಿಯುತ್ತಿದ್ದಾರೆ ಎಂದರು.

ಉಡುಪಿಯ ಕ್ಲಾಕ್ ಟವರ್ ಬಳಿಯ ಗಾಂಧಿ ಪ್ರತಿಮೆಗೆ ಫಾದರ್ ವಿಲಿಯಂ ಮಾರ್ಟೀಸ್ ಗೌರವ ಸಲ್ಲಿಸುವ ಮೂಲಕ ಪಾದಯಾತ್ರೆ ಆರಂಭವಾಯಿತು. ತ್ರಿವೇಣಿ ವೃತ್ತ, ಕೆ.ಎಂ. ಮಾರ್ಗ, ಹಳೆ ಡಯಾನ ವೃತ್ತ ಹಾಗೂ ಕೋರ್ಟ್ ರಸ್ತೆ ಮೂಲಕ ಸಾಗಿದ ಮೆರವಣಿಗೆ ಜೋಡುಕಟ್ಟೆಯಲ್ಲಿ ಸಮಾಪ್ತಿಗೊಂಡಿತು. ಪ್ರತಿಭಟನೆಯುದ್ದಕ್ಕೂ ‘ವೋಟ್ ಚೋರ್–ಗದ್ದಿ ಚೋಡ್’ ಘೋಷಣೆಗಳು ಮೊಳಗಿದವು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಸಹಬಾಳ್ವೆಯ ಅಮೃತ್ ಶೆಣೈ, ದಸಂಸ ಅಂಬೇಡ್ಕರ್ ವಾದ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್, ಮೈಸೂರು ವಿಭಾಗೀಯ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಮೌಲಾ, ಭಾರತೀಯ ಕ್ರೈಸ್ತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಫಾ.ವಿಲಿಯಂ ಮಾರ್ಟಿಸ್, ಸಿಪಿಎಂ ಮುಖಂಡರಾದ ಸುರೇಶ್ ಕಲ್ಲಾಗರ್, ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ,
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಇದ್ರೀಸ್ ಹೂಡೆ, ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಜಿಲ್ಲಾಧ್ಯಕ್ಷ ಅಫ್ಘಾನ್ ಬಿ.ಹೂಡೆ, ಜಅಮಾತೆ ಇಸ್ಲಾಮ್ ಹಿಂದ್‌ನ ನಿಸಾರ್ ಉಡುಪಿ, ಕಾಂಗ್ರೆಸ್ ಮುಖಂಡರಾದ ಹರಿಪ್ರಸಾದ್ ರೈ, ಎಂ.ಎ.ಗಫೂರ್, ರಮೇಶ್ ಕಾಂಚನ್, ಪ್ರಸಾದ್‌ರಾಜ್ ಕಾಂಚನ್, ಎಸ್‌ಡಿಪಿಐಯ ಮುಹಮ್ಮದ್ ಅಶ್ರಫ್ ಮೊದಲಾದವರು ಉಪಸ್ಥಿತರಿದ್ದರು. ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ಮೆಲ್ವಿನ್ ಅರನ್ಹಾ ವಂದಿಸಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.








