ಮಠ-ಮಾನ್ಯಗಳ ನೆರವಿನಿಂದ ವೀರಶೈವ-ಲಿಂಗಾಯತ ಸಮುದಾಯ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದೆ. ಆದರೆ ರಾಜಕೀಯವಾಗಿ ಬೆಳೆಯಲು ಇತರೆ ಸಮುದಾಯಗಳ ಬೆಂಬಲ ಹಾಗೂ ಸಹಕಾರ ಅಗತ್ಯ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ತುಮಕೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ನೌಕರರ ಸಮಾವೇಶ, ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆ ಮೈಸೂರು ಭಾಗದಲ್ಲಿ ಸಮುದಾಯದ ಶಾಸಕರ ಸಂಖ್ಯೆ ಕಡಿಮೆ ಇದೆ. ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ಒಬಿಸಿ, ಎಸ್ಸಿ, ಎಸ್ಟಿ ಸೇರಿದಂತೆ ಇತರೆ ಸಮುದಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಬೇಕು. ಇಲ್ಲದಿದ್ದರೆ ರಾಜಕೀಯ ಅಸ್ತಿತ್ವಕ್ಕೆ ಧಕ್ಕೆಯಾಗಬಹುದು ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು ಮಾತನಾಡಿ, ಮಠ-ಮಾನ್ಯಗಳು ಜಾತಿ, ಧರ್ಮದ ಭೇದವಿಲ್ಲದೆ ಶಿಕ್ಷಣ ನೀಡಿರುವುದು ರಾಜ್ಯದ ಪ್ರಗತಿಗೆ ಕಾರಣವಾಗಿದೆ. ಮಕ್ಕಳು ಕೇವಲ ಅಂಕಗಳಿಗೆ ಒತ್ತು ನೀಡದೆ ಮೌಲ್ಯಯುತ ಶಿಕ್ಷಣ ಪಡೆಯಬೇಕು ಎಂದರು. ಸಂಘದಿಂದ ಈ ವರ್ಷ 3,500 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗಿದ್ದು, ₹4 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ವೀಣಾ ಕಾಶಪ್ಪ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ವೀರಶೈವ-ಲಿಂಗಾಯತ ಭಿನ್ನಾಭಿಪ್ರಾಯ ಬದಿಗಿಟ್ಟು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದರು.
ಬೆಳ್ಳಾವಿ ಶ್ರೀಕಾರದೇಶ್ವರ ಮಠದ ಶ್ರೀ ಶ್ರೀ ವೀರಕಾರದ ಬಸವ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಜತೆಗೆ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಂ.ಬಿ. ಷಡಕ್ಷರಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳ ಗಣ್ಯರು, ಸಂಘದ ಪದಾಧಿಕಾರಿಗಳು ಹಾಗೂ ತಾಲೂಕು ಘಟಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.





