ಅಭಿವೃದ್ಧಿ ಹೆಸರಿನ ಪರಿಸರ ನಾಶ ಗಂಭೀರವಾದ ಸಂಗತಿಯಾಗಿದ್ದು, ಪ್ರಾಣಿ ಸಂಪತ್ತಿನ ಸಾಂಪ್ರದಾಯಿಕ ಜಾಗ ಒತ್ತುವರಿಯೇ ವನ್ಯಜೀವಿ-ಮಾನವ ಸಂಘರ್ಷಕ್ಕೆ ಕಾರಣ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ‘ಸಂಭ್ರಮ- 2026′ ಸಮಾರೋಪ ಸಮಾರಂಭ ನುಡಿಗಳನ್ನಾಡಿದರು.
ಇದು ಕೇವಲ ಒಂದು ಶೈಕ್ಷಣಿಕ ಕಾರ್ಯಕ್ರಮವಾಗಿರದೆ, ಇಂದಿನ ಪರಿಸರ ಬಿಕ್ಕಟ್ಟಿನ ಕಾಲದಲ್ಲಿ ಮಾಧ್ಯಮಗಳ ಜವಾಬ್ದಾರಿಯನ್ನು ನೆನಪಿಸುವ ಮಹತ್ವದ ವೇದಿಕೆಯಾಗಿದೆ. ಪತ್ರಕರ್ತರಾಗುವವರಿಗೆ ನೋಟ ಮತ್ತು ಗ್ರಹಿಕೆ ಬಹಳ ಮುಖ್ಯ. ಒಂದು ಸಂಗತಿಯನ್ನು ಹೇಗೆ ನೋಡುತ್ತೇವೆ, ಹೇಗೆ ಗ್ರಹಿಸುತ್ತೇವೆ ಎನ್ನುವುದು ಪತ್ರಕರ್ತನ ವೃತ್ತಿಪರತೆಯನ್ನು ನಿರ್ಧರಿಸುತ್ತದೆ ಎಂದರು.
ಪತ್ರಕರ್ತರಾಗುವವರು ದಿನಕ್ಕೆ ಕನಿಷ್ಠ ಐದು ಪತ್ರಿಕೆಗಳನ್ನು ಓದಬೇಕು. ಈಗ ತಮ್ಮದೇ ಪತ್ರಿಕೆಗಳನ್ನು ಓದುವವರೇ ಕಡಿಮೆ. ಹಳ್ಳಿಯಿಂದ ದಿಲ್ಲಿಯವರೆಗೆ ಎಲ್ಲಾ ವಿದ್ಯಾಮಾನಗಳನ್ನು ಸರಿಯಾಗಿ ಗ್ರಹಿಸಿ ಜನರ ದೃಷ್ಟಿಕೋನದಿಂದ ಮಂಡಿಸುವುದು ಮುಖ್ಯ. ಹಿರಿಯರು ಹಾಕಿಕೊಟ್ಟ ಬುನಾದಿ ಕಾರಣದಿಂದ ನಮ್ಮ ಪತ್ರಿಕಾ ವೃತ್ತಿಯ ಘನತೆ ಈಗಲೂ ಉನ್ನತ ಮಟ್ಟದಲ್ಲಿದೆ. ಈ ಘತೆಯನ್ನು ಮುಂದುವರೆಸಬೇಕಿದೆ. ಇವತ್ತಿನ ಮಾಧ್ಯಮಗಳು ಕಾರ್ಪೋರೇಟ್ ಹಿಡಿತಕ್ಕೆ ಸಿಲುಕಿದ್ದರೂ ಈ ಮಿತಿಯಲ್ಲೇ ಹೊಸ ಹೊಸ ಮಾರ್ಗಗಳ ಮೂಲಕ ವೃತ್ತಿಪರತೆಯನ್ನು ಮುಂದುವರೆಸಬೇಕು ಎಂದರು.
ಇಂದು ಜನಸಾಮಾನ್ಯರಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವ ಅಗತ್ಯ ಇಲ್ಲ. ಏಕೆಂದರೆ ಪರಿಸರದ ಮೇಲಾಗುತ್ತಿರುವ ದೌರ್ಜನ್ಯದ ಅಡ್ಡ ಪರಿಣಾಮಗಳಿಗೆ ಮೊದಲ ಬಲಿ ಆಗುತ್ತಿರುವವರೇ ಜನ ಸಾಮಾನ್ಯರು. ಹೀಗಾಗಿ ಪತ್ರಕರ್ತರು ಜನರಿಗೆ ತಿಳಿವಳಿಕೆ ಹೇಳುವುದಕ್ಕಿಂತ ಹೆಚ್ಚಾಗಿ ಅವರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಮಾಧ್ಯಮ ವಿದ್ಯಾರ್ಥಿಗಳು ಪರಿಸರ ವರದಿಗಾರಿಕೆಯಲ್ಲಿರುವ ಸವಾಲುಗಳು ಮತ್ತು ಅವಕಾಶಗಳನ್ನು ಅರಿತುಕೊಳ್ಳಬೇಕು. ತುಮಕೂರು ಜಿಲ್ಲೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಪರಿಸರ ಸಮಸ್ಯೆಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಬಿಂಬಿಸಬೇಕು, ಸ್ಥಳೀಯವಾಗಿ ನಡೆಯುವ ಪರಿಸರ ಹೋರಾಟಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೋರಾಟಗಳ ಜೊತೆ ಬೆಸೆಯುವ ಮೂಲಕ ಸ್ಥಳೀಯ ಹೋರಾಟಗಳಿಗೆ ನೈತಿಕ ಮತ್ತು ಜಾಗತಿಕ ಶಕ್ತಿ ಒದಗಿಸುವ ಅಗತ್ಯವಿದೆ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ನಾಶವನ್ನು ಪ್ರಶ್ನಿಸುವ ಧೈರ್ಯವನ್ನು ಪತ್ರಿಕೋದ್ಯಮ ತೋರಿಸಬೇಕು. ಕೇವಲ ನಕಾರಾತ್ಮಕ ಸುದ್ದಿಗಳ ಬದಲಿಗೆ, ಪರಿಸರ ಹೋರಾಟ ಮತ್ತು ಪರಿಸರ ಸಂರಕ್ಷಣೆಯ ಯಶಸ್ವಿ ಹೋರಾಟಗಳ ಮಾದರಿಗಳನ್ನು ಸ್ಥಳೀಯ ಮಟ್ಟದಲ್ಲೂ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.
ಇತ್ತೀಚಿಗೆ ಬೀದರ್ ನಲ್ಲಿ ಬಿಸಿಲಿನ ತಾಪಕ್ಕೆ ಯುವಕನೊಬ್ಬ ಮೃತಪಟ್ಟರೆ, ಇದಷ್ಟೆ ಸುದ್ದಿ ಆಗುವುದಕ್ಕಿಂತ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಂತಹ ಸಂಕೀರ್ಣ ವಿಷಯಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಭಾಷೆಯಲ್ಲಿ ವಿವರಿಸುವಂತಾಗಬೇಕು. ಪರಿಸರ ಪತ್ರಿಕೋದ್ಯಮವು ಕೇವಲ ಕಚೇರಿಯಲ್ಲಿ ಕುಳಿತು ಮಾಡುವ ಕೆಲಸವಲ್ಲ; ಇದು ಕಾಡು, ಮೇಡು ಹಾಗೂ ಹಳ್ಳಿಗಳಿಗೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅರಿಯುವ ಕೆಲಸ ಎಂದರು.
ಪತ್ರಕರ್ತರಿಗೆ ದೇಶದ ಪರಿಸರ ಕಾಯ್ದೆಗಳ ಬಗ್ಗೆ ಕನಿಷ್ಠ ಜ್ಞಾನವಿರಬೇಕು, ಆಗ ಮಾತ್ರ ಅಕ್ರಮ ಗಣಿಗಾರಿಕೆ ಅಥವಾ ಅರಣ್ಯ ಒತ್ತುವರಿಯಂತಹ ಪ್ರಕರಣಗಳನ್ನು ಸಮರ್ಥವಾಗಿ ವರದಿ ಮಾಡಲು ಸಾಧ್ಯ. ಸಾಮಾಜಿಕ ಜಾಲತಾಣಗಳನ್ನು ಪರಿಸರ ಜಾಗೃತಿಯ ಅಭಿಯಾನಗಳನ್ನು ರೂಪಿಸಲು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅರಿತುಕೊಳ್ಳಿ ಎಂದು ಸಲಹೆ ನೀಡಿದರು. ಪತ್ರಿಕೋದ್ಯಮವು ಕೇವಲ ರಾಜಕೀಯ ಮತ್ತು ಅಪರಾಧ ಸುದ್ದಿಗಳ ಸುತ್ತ ಸುತ್ತುತ್ತಿರುವ ಈ ಹೊತ್ತಿನಲ್ಲಿ ಪರಿಸರ ಪತ್ರಿಕೋದ್ಯಮದ ಬಗ್ಗೆಯೇ ವಿಚಾರಗೋಷ್ಠಿ ಏರ್ಪಡಿಸಿದ್ದು ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ ಎಂದರು.

ಬರುವ ದಿನಗಳಲ್ಲಿ ಪರಿಸರ ಬಿಕ್ಕಟ್ಟು ತೀವ್ರಗೊಳ್ಳಲಿದ್ದು, ಈ ಸವಾಲನ್ನು ಎದುರಿಸಲು ಮಾಧ್ಯಮಗಳು ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಪತ್ರಕರ್ತರು ಕೆಲಸ ಮಾಡಬೇಕು ಎಂದರು.
ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇಂತಹ ಸಮಾರಂಭಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸೈದ್ಧಾಂತಿಕ ತಿಳುವಳಿಕೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತಿರುವುದು ಅಭಿನಂದನೀಯ ಎಂದು ಮೆಚ್ವುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀನಾರಾಯಣ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ ನಡಕಟ್ಟಿ, ಗೃಹಸಚಿವರ ವಿಶೇಷ ಕರ್ತವ್ಯ ಅಧಿಕಾರಿಯಾದ ಡಾ. ಕೆ. ನಾಗಣ್ಣ, ಪ್ರಜಾಪ್ರಗತಿ ಸಹ ಸಂಪಾದಕರಾದ ಮಧುಕರ್, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಇಕ್ಬಾಲ್ ಅಹಮ್ಮದ್, ತುಮಕೂರಿನ ಪ್ರಗತಿಪರ ರೈತರಾದ ಸಿ ಕೆ ಪ್ರಕಾಶ್, ತುಮಕೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯರಾದ ಮಂಜುನಾಥ್ ಹೆತ್ತೇನಹಳ್ಳಿ, ಕುಣಿಗಲ್‌ನ ಪರಿಸರ ಪ್ರೇಮಿ ವೇಣು, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ಬಿ.ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ, ಶ್ವೇತಾ ಎಂ.ಪಿ, ನವೀನ್ ಎನ್ ಜಿ, ರೇಡಿಯೋ ಸಿದ್ಧಾರ್ಥ ಸಿಬ್ಬಂದಿ ಗೌತಮ್ ಎ.ವಿ, ರವಿಕುಮಾರ್, ಮಧುಶ್ರೀ, ಹರೀಶ್ ಕುಮಾರ್, ಟೆಲಿವಿಷನ್ ನಿರ್ವಾಹಕರಾದ ಎಸ್ ರಾಘವ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿ ಎಚ್.ಜಿ, ಎಸ್‌ಎಸ್‌ಸಿಎಂಎಸ್‌ನ ಬೋಧಕೇತರ ಸಿಬ್ಬಂದಿಗಳಾದ ಮಂಜುಳಾ ಟಿ ವಿ, ಶಿಲ್ಪ ಜಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅನುಷ ಮತ್ತು ಕೀರ್ತನ ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು.
ಮಾಧ್ಯಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುಮಾರು 150ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಪಾಲ್ಗೊಂಡಿದ್ದರು. ಎರಡು ದಿನದ ಈ ಕಾರ್ಯಕ್ರಮದಲ್ಲಿ ಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.





