ತುಮಕೂರು | ಬಾಹ್ಯಾಕಾಶದಲ್ಲಿ ಭಾರತಕ್ಕೆ ವಿಶ್ವದಾಖಲೆಗಳ ಗರಿ: ಸಾಹೇ ಘಟಿಕೋತ್ಸವದಲ್ಲಿ ಡಾ. ನಾರಾಯಣನ್

Date:

ಒಂದು ಕಾಲದಲ್ಲಿ ರಾಕೆಟ್‌ನ ಬಿಡಿಭಾಗಗಳನ್ನು ಸೈಕಲ್‌ನಲ್ಲಿ, ಉಪಗ್ರಹದ ಪ್ರಯೋಗ ಸಾಮಗ್ರಿಗಳನ್ನು ಎತ್ತಿನಗಾಡಿಯಲ್ಲಿ ಸಾಗಿಸುತ್ತಿದ್ದ ಭಾರತ ಇಂದು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಜಾಗತಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಈ ಪ್ರಗತಿ ದೇಶದ ಸಾಮರ್ಥ್ಯ ಹಾಗೂ ವಿಜ್ಞಾನಿಗಳ ಪರಿಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಇಸ್ರೋ ಅಧ್ಯಕ್ಷರು ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ. ವಿ. ನಾರಾಯಣನ್ ಹೆಮ್ಮೆಯಿಂದ ಹೇಳಿದರು.

- Advertisement -

ತುಮಕೂರು ನಗರ ಸಮೀಪದ ಅಗಳಕೋಟೆಯ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಸಾಹೇ) ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, 1963ರ ನವೆಂಬರ್ 21ರಂದು ಅಮೆರಿಕ ನೀಡಿದ್ದ ಸಣ್ಣ ರಾಕೆಟ್ ಅನ್ನು ಸೈಕಲ್‌ನಲ್ಲಿ ಸಾಗಿಸಿ, ಚರ್ಚ್ ಕಟ್ಟಡವೊಂದರಲ್ಲಿ ಜೋಡಿಸಿ ಉಡಾವಣೆ ಮಾಡಿದ್ದ ಭಾರತ ಇಂದು ಸುಮಾರು 13,500 ಕೋಟಿ ರೂ. ವೆಚ್ಚದ ಅತ್ಯಾಧುನಿಕ ನಿಸಾರ್ (NISAR) ಉಪಗ್ರಹ ಹಾಗೂ 6,000 ಕೆ.ಜಿ. ತೂಕದ ವಾಣಿಜ್ಯ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಬೆಳೆಸಿಕೊಂಡಿದೆ ಎಂದು ವಿವರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...
1004490125

ಭಾರತದ ಬಾಹ್ಯಾಕಾಶ ಸಾಧನೆಗಳನ್ನು ವಿವರಿಸಿದ ಅವರು, ಚಂದ್ರಯಾನ-1 ಮೂಲಕ ಚಂದ್ರನಲ್ಲಿ ನೀರಿನ ಅಣುಗಳ ಇರುವಿಕೆಯನ್ನು ಪತ್ತೆಹಚ್ಚುವಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಒಂದೇ ರಾಕೆಟ್ ಮೂಲಕ 104 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ ವಿಶ್ವದಾಖಲೆ ನಿರ್ಮಿಸಿದೆ. ಮಂಗಳಯಾನವನ್ನು ಮೊದಲ ಪ್ರಯತ್ನದಲ್ಲೇ ಯಶಸ್ವಿಗೊಳಿಸಿದ ಏಕೈಕ ದೇಶ ಭಾರತವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನೂ ಗಳಿಸಿದೆ ಎಂದರು.

ಒಂದು ಕಾಲದಲ್ಲಿ ವಿದೇಶಗಳಿಂದ ನಿರಾಕರಿಸಲ್ಪಟ್ಟ ಕ್ರಯೋಜೆನಿಕ್ ತಂತ್ರಜ್ಞಾನವನ್ನು ಸ್ವದೇಶಿಯಾಗಿಯೇ ಅಭಿವೃದ್ಧಿಪಡಿಸಿರುವ ಭಾರತ, ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನದಲ್ಲೂ ಯಶಸ್ಸು ಸಾಧಿಸಿದೆ. ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ-ಎಲ್1 ಸೇರಿದಂತೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಕೈಗೊಂಡಿದೆ. 2035ರ ವೇಳೆಗೆ ಭಾರತದದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವುದು ಹಾಗೂ 2040ರ ವೇಳೆಗೆ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವ ಗುರಿ ಹೊಂದಲಾಗಿದೆ. ಗಗನಯಾನ ಯೋಜನೆಯ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನಕ್ಕೂ ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.

1004490128

ತುಮಕೂರಿನಲ್ಲಿ ಸ್ಥಾಪನೆಯಾಗಿರುವ ಇಸ್ರೋದ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC) ಘಟಕವು ಚಂದ್ರಯಾನ, ಮಂಗಳಯಾನ ಹಾಗೂ ಮುಂದಿನ ಶುಕ್ರಯಾನ ಯೋಜನೆಗಳಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಈ ಘಟಕಕ್ಕೆ ಅಗತ್ಯವಾದ ಭೂಮಿಯನ್ನು ಒದಗಿಸುವಲ್ಲಿ ಉಪಮುಖ್ಯಮಂತ್ರಿ ಹಾಗೂ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಜಿ. ಪರಮೇಶ್ವರ ಅವರು ನೀಡಿದ ಸಹಕಾರವನ್ನು ಸ್ಮರಿಸಿದ ಅವರು, ಉನ್ನತ ಜವಾಬ್ದಾರಿಗಳ ನಡುವೆಯೂ ಶಿಕ್ಷಣ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ರಕ್ಷಣಾ ಕ್ಷೇತ್ರದಲ್ಲಿ ಇಸ್ರೋ ಮತ್ತು ಡಿಆರ್‌ಡಿಒ ಸಾಧನೆಗಳನ್ನು ಉಲ್ಲೇಖಿಸಿದ ಡಾ. ನಾರಾಯಣನ್, ಆಪರೇಷನ್ ಸಿಂಧೂರ್ ಸಂದರ್ಭದಲ್ಲಿ ಉಪಗ್ರಹ ತಂತ್ರಜ್ಞಾನವು ದೇಶದ ಭದ್ರತೆಗೆ ಮಹತ್ವದ ನೆರವು ನೀಡಿದೆ. ಭವಿಷ್ಯದಲ್ಲಿ ಹೊಸ ತಲೆಮಾರಿನ ಉಡಾವಣಾ ವಾಹನಗಳು ಹಾಗೂ ಬಾಹ್ಯಾಕಾಶ ಪ್ರವಾಸೋದ್ಯಮಕ್ಕೂ ಭಾರತ ಸಜ್ಜಾಗುತ್ತಿದೆ ಎಂದರು.

1004490073

ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ನಿರಂತರ ಕಲಿಕೆ, ಸಂಪೂರ್ಣ ಬದ್ಧತೆ, ಪ್ರಾಮಾಣಿಕತೆ ಮತ್ತು ತಂಡದ ಮನೋಭಾವ ಯಶಸ್ಸಿನ ಪ್ರಮುಖ ಅಂಶಗಳು. ದೊಡ್ಡ ಗುರಿಗಳನ್ನು ಹೊಂದಿ, ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ತಮ್ಮ ಬೆಳವಣಿಗೆಗೆ ಕಾರಣರಾದ ಪೋಷಕರು, ಶಿಕ್ಷಕರು, ಸಿಬ್ಬಂದಿ ಮತ್ತು ಸಮಾಜದ ಕೊಡುಗೆಯನ್ನು ಸದಾ ಸ್ಮರಿಸಬೇಕು. ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.

1004490127

ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಹಿರಿಯ ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಪ್ರೊ. ಬರಗೂರು ರಾಮಚಂದ್ರಪ್ಪ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮಹತ್ತರ ಪ್ರಗತಿ ಸಾಧಿಸಿರುವುದು ಹೆಮ್ಮೆಯ ಸಂಗತಿ. ಆದರೆ ದೇಶದ ಮತ್ತೊಂದು ವಾಸ್ತವವನ್ನೂ ನಾವು ಮರೆಯಬಾರದು. ವಿಜ್ಞಾನದ ಪ್ರಗತಿಯ ಜತೆಗೆ ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಬೆಳವಣಿಗೆಯೂ ಅತ್ಯಗತ್ಯ ಎಂದು ಹೇಳಿದರು.

ದೇಶದಲ್ಲಿ ಇತಿಹಾಸ, ಸಾಹಿತ್ಯ, ಭೂಗೋಳ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರದಂತಹ ಮಾನವಿಕ ವಿಜ್ಞಾನಗಳ ಅಧ್ಯಯನ ಮಾಡುವವರ ಸಂಖ್ಯೆ ಕೇವಲ ಶೇ.5ರಷ್ಟಿರುವುದು ಕಳವಳಕಾರಿ ಸಂಗತಿ. ಮನುಷ್ಯನ ಮನಸ್ಸನ್ನು ವಿಕಸನಗೊಳಿಸಿ, ಜಾತ್ಯತೀತತೆ, ಮಾನವೀಯತೆ ಹಾಗೂ ಸಾಮಾಜಿಕ ಕಾಳಜಿಯನ್ನು ಬೆಳೆಸುವ ಇಂತಹ ಅಧ್ಯಯನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

1004490123

ಸಂವಿಧಾನದಲ್ಲಿ ವೈಜ್ಞಾನಿಕ ಮನೋಧರ್ಮಕ್ಕೆ ಮಹತ್ವ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ದೇಶದಲ್ಲಿ ವಿಜ್ಞಾನ ಸಂಶೋಧನೆಗಳಿಗೆ ಭದ್ರ ಬುನಾದಿ ಹಾಕಿದ ಜವಾಹರಲಾಲ್ ನೆಹರು ಅವರನ್ನು ಸ್ಮರಿಸಿದ ಅವರು, ದೇಶದ ಒಂದು ಭಾಗ ಅಭಿವೃದ್ಧಿಯ ಉತ್ತುಂಗಕ್ಕೇರುತ್ತಿದ್ದರೆ ಮತ್ತೊಂದೆಡೆ ಭೂಹೀನತೆ, ಕೂಲಿ ಕಾರ್ಮಿಕರ ಸಮಸ್ಯೆ, ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳ ಶೈಕ್ಷಣಿಕ ಹಿನ್ನಡೆ ಮುಂದುವರಿದಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬುಡಕಟ್ಟು ಮತ್ತು ಅಲೆಮಾರಿ ಸಮುದಾಯಗಳಲ್ಲಿ ಕೇವಲ ಶೇ.25ರಷ್ಟು ಮಂದಿ ಅಕ್ಷರಸ್ಥರಾಗಿದ್ದು, ಅವರಲ್ಲಿ ಶೇ.75ರಷ್ಟು ಮಂದಿ ಪ್ರಾಥಮಿಕ ಶಿಕ್ಷಣಕ್ಕಷ್ಟೇ ಸೀಮಿತರಾಗಿದ್ದಾರೆ. ಕೇವಲ ಶೇ.0.2ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣ ತಲುಪಿದ್ದಾರೆ ಎಂಬ ಅಂಕಿಅಂಶಗಳನ್ನು ಉಲ್ಲೇಖಿಸಿದರು. ಇಂತಹ ಅಸಮಾನತೆಗಳನ್ನು ನಿವಾರಿಸಿ ಸಮಾನತೆ ಮತ್ತು ಸೌಹಾರ್ದತೆಯ ಭಾರತ ನಿರ್ಮಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು. ವೈದ್ಯರು, ಎಂಜಿನಿಯರ್‌ಗಳು ಸೇರಿದಂತೆ ಯಾವುದೇ ವೃತ್ತಿಯಲ್ಲಿದ್ದರೂ ಅವರಲ್ಲಿ ಮನುಷ್ಯತ್ವ ಜೀವಂತವಾಗಿದ್ದಾಗ ಮಾತ್ರ ಶಿಕ್ಷಣ ಮತ್ತು ವೃತ್ತಿ ಸಮಾಜಕ್ಕೆ ಉಪಯುಕ್ತವಾಗುತ್ತವೆ ಎಂದು ಪ್ರತಿಪಾದಿಸಿದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರೊಂದಿಗಿನ ತಮ್ಮ ಸಂಬಂಧ ರಾಜಕೀಯವನ್ನು ಮೀರಿದ್ದು, ಅವರು ರಾಜಕಾರಣಿಯಾಗುವ ಮುನ್ನಿನಿಂದಲೂ ಆತ್ಮೀಯ ಬಾಂಧವ್ಯವಿದೆ. ಇಂದಿನ ರಾಜಕಾರಣದಲ್ಲಿ ಸಜ್ಜನಿಕೆ, ಸೌಜನ್ಯ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವ ಡಾ. ಪರಮೇಶ್ವರ ಅವರ ವ್ಯಕ್ತಿತ್ವ ಅಭಿನಂದನೀಯ ಎಂದು ಬರಗೂರು ಮೆಚ್ಚುಗೆ ವ್ಯಕ್ತಪಡಿಸಿದರು.

1004490126

ಪದ್ಮಶ್ರೀ ಪುರಸ್ಕೃತ ಖ್ಯಾತ ಜೀವಶಾಸ್ತ್ರ ವಿಜ್ಞಾನಿ ಡಾ. ಶುಭಾ ವೆಂಕಟೇಶ ಅಯ್ಯಂಗಾರ್ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ನಿರಂತರ ಕಲಿಕೆ, ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಆತ್ಮವಿಶ್ವಾಸ ಅಗತ್ಯ. ಸೋಲು ಮತ್ತು ಸವಾಲುಗಳು ಎದುರಾದಾಗ ಧೃತಿಗೆಡದೆ ಗುರಿಯತ್ತ ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಕೊಡುಗೆ ಹಾಗೂ ಕಾವೇರಿ ಯೋಜನೆ ಸೇರಿದಂತೆ ಜನಪರ ಕಾರ್ಯಗಳ ಮೂಲಕ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಅವರ ಸೇವೆಯನ್ನು ಸ್ಮರಿಸಿದರು. ಡಿ.ವಿ. ಗುಂಡಪ್ಪ ಅವರ ‘ಮಂಕುತಿಮ್ಮನ ಕಗ್ಗ’ವನ್ನು ಉಲ್ಲೇಖಿಸಿ, ಕಷ್ಟಗಳ ನಡುವೆಯೂ ಸಮಚಿತ್ತ ಮತ್ತು ಸಮಾಜಮುಖಿ ಮನೋಭಾವ ಬೆಳೆಸಿಕೊಳ್ಳುವ ಮಹತ್ವವನ್ನು ವಿವರಿಸಿದರು.

ತಮಿಳುನಾಡಿನ ಖ್ಯಾತ ಗ್ಯಾಸ್ಟ್ರೋ ಸರ್ಜನ್ ಡಾ. ಸಿ. ಪಳನಿವೇಲು ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿ, ತಮ್ಮ ಬಾಲ್ಯದ ಕಷ್ಟದ ದಿನಗಳನ್ನು ಸ್ಮರಿಸಿದರು. 1970ರ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆಯನ್ನು ಕಂಡು ವೈದ್ಯರಾಗಬೇಕೆಂಬ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು. ಆರ್ಥಿಕ ಸಂಕಷ್ಟದ ನಡುವೆಯೂ ಗ್ರಾಮಸ್ಥರ ಸಹಕಾರದಿಂದ ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ, ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪರಿಣತಿ ಪಡೆದಿದ್ದಾಗಿ ವಿವರಿಸಿದರು.

ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರೊಂದಿಗಿನ ಭೇಟಿಯನ್ನು ಸ್ಮರಿಸಿದ ಅವರು, ವೈದ್ಯಕೀಯ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಜನರಲ್ಲಿ ಆರೋಗ್ಯದ ಅರಿವಿನ ಕೊರತೆಯಿಂದಾಗಿ ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ. ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿದರೆ ಚಿಕಿತ್ಸೆ ಮೂಲಕ ಗುಣಪಡಿಸುವ ಸಾಧ್ಯತೆ ಹೆಚ್ಚಿದೆ. ಗರ್ಭಕಂಠದ ಕ್ಯಾನ್ಸರ್ ತಡೆಗೆ ಲಸಿಕೆ ಲಭ್ಯವಿದ್ದು, ಮಕ್ಕಳಿಗೆ ಸೂಕ್ತ ಸಮಯದಲ್ಲಿ ಲಸಿಕೆ ಹಾಕಿಸುವುದು ಮುಖ್ಯ. ಶೇ.50ರಿಂದ 60ರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಿರುವುದರಿಂದ ಸ್ಕ್ರೀನಿಂಗ್ ಕಾರ್ಯಕ್ರಮಗಳನ್ನು ವ್ಯಾಪಕಗೊಳಿಸಬೇಕು ಎಂದು ಸಲಹೆ ನೀಡಿದರು.

1004490123 1

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ ಒಟ್ಟು 1,347 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ 18 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು.

ವೈದ್ಯಕೀಯ ವಿಭಾಗದಲ್ಲಿ ನಾಲ್ವರು, ದಂತ ವೈದ್ಯಕೀಯ ವಿಭಾಗದಲ್ಲಿ ಇಬ್ಬರು, ಎಂಜಿನಿಯರಿಂಗ್ ವಿಭಾಗದಲ್ಲಿ ಹತ್ತು ಮಂದಿ ಹಾಗೂ ಎಂಸಿಎ ಮತ್ತು ಎಂಬಿಎ ವಿಭಾಗಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು. 18 ಮಂದಿಗೆ ಪಿಎಚ್‌ಡಿ ಪದವಿ ಹಾಗೂ ಎಂಟು ಮಂದಿಗೆ ಫೆಲೋಶಿಪ್ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಬಿ. ಲಿಂಗೇಗೌಡ ಅವರು ವಾರ್ಷಿಕ ಪ್ರಗತಿ ವರದಿ ಮಂಡಿಸಿದರು. ಹೊರಾಂಗಣ ವೇದಿಕೆಯಲ್ಲಿ ನಡೆದ ಘಟಿಕೋತ್ಸವದಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಆಸನ ಹಾಗೂ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಮಾರಂಭದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಕನ್ನಿಕಾ ಪರಮೇಶ್ವರಿ, ಡಾ. ಜಿ.ಎಸ್. ಆನಂದ್, ಕುಲಸಚಿವ ಡಾ. ಅಶೋಕ್ ಮೆಹತಾ, ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ. ಸುನೀಲ್ ಕೆ., ಕುಲಾಧಿಪತಿಗಳ ಸಲಹೆಗಾರ ಡಾ. ವಿವೇಕ್ ವೀರಯ್ಯ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಾಣಿಕೊಪ್ಪ, ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ಉಪಕುಲಸಚಿವ ಡಾ. ಸುದೀಪ್ ಕುಮಾರ್, ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಪ್ರಾಂಶುಪಾಲ ಡಾ. ದಿವಾಕರ್, ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ್ ಎಂ. ನಡಕಟ್ಟಿ, ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ನಿವೃತ್ತ ಪ್ರಾಂಶುಪಾಲರಾದ ಡಾ. ಎಂ.ಕೆ. ವೀರಯ್ಯ, ಡಾ. ರವಿಪ್ರಕಾಶ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಗ್ರಾಮೀಣ ಪದವೀಧರರಿಗೆ ಉದ್ಯೋಗದ ದಾರಿ ತೋರಿಸಲು ಹಾಲಪ್ಪ ಫೌಂಡೇಷನ್‌ನಿಂದ ಎರಡು ದಿನಗಳ ಕಾರ್ಯಾಗಾರ

ಗ್ರಾಮೀಣ ಭಾಗದ ಪದವೀಧರ ನಿರುದ್ಯೋಗಿ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಉದ್ಯೋಗ...

ತುಮಕೂರು | 2047ರ ಭಾರತ ನಿರ್ಮಾಣಕ್ಕೆ ಯುವಶಕ್ತಿಯೇ ಬುನಾದಿ : ಪ್ರೊ. ಪರಶುರಾಮ ಕೆ.ಜಿ

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಗುರಿ...

ತುಮಕೂರು | ಮಾಧ್ಯಮ ಶಿಕ್ಷಣಕ್ಕೆ ಪ್ರಾಯೋಗಿಕ ಸ್ಪರ್ಶ; ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ‘ಸಿದ್ಧಾರ್ಥ ಸಂಪದ’

ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರದ ಕೌಶಲ್ಯಗಳನ್ನು ತರಗತಿಯ ಪಾಠಕ್ಕೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳಿಂದಲೇ...

ತುಮಕೂರು | ಲಾಟರಿ ಮೂಲಕ 32 ಮಂದಿಯ ಆಯ್ಕೆ ಬೇಡ ; ಎಲ್ಲ ಅರ್ಹರಿಗೂ ನಿವೇಶನ ನೀಡಿ : ಮಂಜುನಾಥ್ ಹೆತ್ತೇನಹಳ್ಳಿ

ತುಮಕೂರು ತಾಲೂಕಿನ ಗೂಳೂರು ಹೋಬಳಿಯ ಹೊನ್ನುಡಿಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಶ್ರಯ...