ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ತುಂಡಾಗಿ ನೀರುಪಾಲಾಗಿತ್ತು. ಈ ಬಗ್ಗೆ ಕೂಡಲೇ ಎಚ್ಚೆತ್ತಿದ್ದ ರಾಜ್ಯ ಸರ್ಕಾರ, ಹೊಸ ಸ್ಟಾಪ್ಲ್ಯಾಗ್ ಗೇಟ್ ಅಳವಡಿಸಲು ಸೂಚಿಸಿತ್ತು. ಅದರಂತೆ ಡ್ಯಾಂ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಮೂರನೇ ಎಲಿಮೆಂಟ್ ಅನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಈ ಮೂಲಕ ಹರಿಯುವ ನೀರನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಆಗಸ್ಟ್ 10ರಿಂದ ನಿರಂತರವಾಗಿ ನೀರು ಹರಿದು ವ್ಯರ್ಥವಾಗಿ ನದಿಗೆ ಹೋಗುತ್ತಿತ್ತು. ಕ್ರಸ್ಟ್‌ಗೇಟ್ 19 ಕೊಚ್ಚಿಕೊಂಡು ಹೋಗಿದ್ದರಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿದು ಹೋಗಿತ್ತು. ಇದೀಗ ಮೂರನೇ ಎಲಿಮೆಂಟ್ ಕೂಡ ಅಳವಡಿಕೆ ಮಾಡಲಾಗಿದ್ದು, ನೀರನ್ನು ಬಂದ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ರೈತರು ಹಾಗೂ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ರಭಸವಾಗಿ ಹರಿಯುತ್ತಿರುವ ನೀರಿನ ನಡುವೆಯೂ ಶನಿವಾರ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಎರಡು ಬೃಹತ್ ಕ್ರೇನ್‌ಗಳ ನೆರವಿನಿಂದ ಮೂರನೇ ಎಲಿಮೆಂಟ್ ಅಳವಡಿಕೆ ಮಾಡಿದರು. ನಾಲ್ಕು ಅಡಿ ಎತ್ತರದ ಒಟ್ಟು ಐದು ಎಲಿಮೆಂಟ್ ಅಳವಡಿಕೆ ಮಾಡಲಾಗುತ್ತಿದ್ದು, ಶುಕ್ರವಾರ ರಾತ್ರಿ ಮೊದಲ ಎಲಿಮೆಂಟ್ ಅಳವಡಿಕೆಯಾಗಿತ್ತು. ಜಲಾಶಯ ಗೇಟ್ ಹಾಗೂ ಸುರಕ್ಷತಾ ತಜ್ಞ ಕನ್ನಯ್ಯ ನಾಯ್ಡು ನೇತೃತ್ವದಲ್ಲಿ ಮೊದಲ ಕಾರ್ಯಾಚರಣೆ ನಡೆದಿತ್ತು. ಇನ್ನು ಕೂಡ ಎರಡು ಎಲಿಮೆಂಟ್ ಅಳವಡಿಕೆ ಕಾರ್ಯ ಬಾಕಿ ಉಳಿದಿದೆ.
ತುಂಗಭದ್ರಾ ಜಲಾಶಯಕ್ಕೆ ಒಟ್ಟು 32 ಕ್ರಸ್ಟ್ ಗೇಟ್‌ಗಳಿದ್ದು, ಎಲಿಮೆಂಟ್ ಅಳವಡಿಸುವಾಗ 24 ಗೇಟ್ ಮೂಲಕ ನೀರು ಹರಿಸಲಾಗುತ್ತಿತ್ತು. ಹಂತಹಂತವಾಗಿ ಒಂದೊಂದೇ ಗೇಟ್ ಬಂದ್ ಮಾಡಿ ಹೊಸ ಎಲಿಮೆಂಟ್ ಮೇಲೆ ಹೆಚ್ಚು ನೀರು ಹರಿಸಲಾಯಿತು.

ಕೊಚ್ಚಿ ಹೋಗಿದ್ದ ಹಳೆಯ ಗೇಟ್ ಪತ್ತೆ
ನೀರನ್ನು ಬಂದ್ ಮಾಡುವಲ್ಲಿ ಯಶಸ್ವಿಯಾದ ಬಳಿಕ, ಕಳೆದ ಶನಿವಾರ ನೀರಿನ ರಭಸಕ್ಕೆ ನಾಪತ್ತೆಯಾಗಿದ್ದ ಗೇಟ್ ನಂ. 19ರ ಹಳೆಯ ಗೇಟ್ ಅಂತಿಮವಾಗಿ ನೀರಿನ ಕೆಳಭಾಗದಲ್ಲಿ ಪತ್ತೆಯಾಗಿದೆ. ಈ ಗೇಟ್ ಸದ್ಯ ಮೂರು ಭಾಗಗಳಾಗಿ ತುಂಡಾಗಿ ಬಿದ್ದಿರುವುದಾಗಿ ವರದಿಯಾಗಿದೆ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಶನಿವಾರ ಬೆಳಗ್ಗೆ ತುಂಗಭದ್ರಾ ಆಣೆಕಟ್ಟು ಬಳಿ ಸ್ಟಾಪ್ ಗೇಟ್ ಅಳವಡಿಕೆ ಮುಂದುವರಿದ ಕಾಮಗಾರಿ ಪರಿಶೀಲನೆ ನಡೆಸಿದರು. ಶಾಸಕ ಕಂಪ್ಲಿ ಗಣೇಶ್, ಜಿಲ್ಲಾಧಿಕಾರಿ ದಿವಾಕರ್ ಈ ವೇಳೆ ಉಪಸ್ಥಿತರಿದ್ದರು.

ಗೇಟು ಮುರಿದದ್ದರಿಂದ ೬೦ ಟೀ ಎಂ ಸಿ ನೀರು ನದಿಗೆ ಬಿಡಬೇಕಾಗತ್ತೆ ಅಂತ ಹೇಳಿದ್ದರು,ಈ ರಿಪೇರಿಯಿಂದ ಅದರಲ್ಲಿ ಎಷ್ಟು ನೀರು ಉಳಿಸಿಕೊಳ್ಳಲಾಯಿತು?