ಕಳೆದ ಆಗಸ್ಟ್ 10ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಹೋಗಿ, ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಆ ಬಳಿಕ ತಜ್ಞರು ಹರಿಯುವ ನೀರಿನಲ್ಲೇ ಕಾರ್ಯಾಚರಣೆ ನಡೆಸಿ, ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡಿದ್ದರು. ಇದಾದ ಬೆನ್ನಲ್ಲೇ ಸದ್ಯ ಡ್ಯಾಂಗೆ ಅಪಾರ ಪ್ರಮಾಣ ನೀರು ಹರಿದು ಬಂದಿದೆ.
ಜಲಾಶಯಕ್ಕೆ ಈಗ 29,014 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ 90 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಕಿತ್ತು ಹೋಗಿದ್ದ 19ನೇ ಗೇಟ್ ಬಂದ್ ಮಾಡಿದ ನಂತರ ಇದುವರೆಗೂ 20 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಭದ್ರಾ ಜಲಾಶಯವು ಒಟ್ಟು 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ.
90 ಟಿಎಂಸಿ ಅಡಿ ನೀರು ಸಂಗ್ರಹವಾಗಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಜೀವ ಕಳೆ ಬಂದಿದ್ದು, ವರುಣನ ಅರ್ಭಟದಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಅಲ್ಲದೇ, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕೂಡ ಹೆಚ್ಚಾಗಿದೆ. ಇದರೊಂದಿಗೆ ರೈತರ ಆತಂಕ ದೂರವಾದಂತಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ಯಾಚಾರಿಗೆ ಶಿಕ್ಷೆ; ನುಡಿದಂತೆ ನಡೆಯಲಿ ನರೇಂದ್ರ ಮೋದಿ
ತುಂಗಭದ್ರಾ ಜಲಾಶಯ ಭರ್ತಿಯಾದರೆ ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ಈ ಬಾರಿ ದುರಂತ ಸಂಭವಿಸಿ ಆತಂಕ ಎದುರಾಗಿತ್ತು. ಮುಂದಿನ ದಿನಗಳಲ್ಲಿ ಮತ್ತಷ್ಟು ನೀರು ಸಂಗ್ರಹವಾಗುವ ನಿರೀಕ್ಷೆ ಇದೆ.
