ಪತ್ರಿಕೋದ್ಯಮವೆಂದರೆ ಅದೊಂದು ಪವಿತ್ರವಾದ ಸೇವೆ ಎಂಬ ಭಾವನೆ ಇತ್ತು. ಜನರನ್ನು ಜಾಗೃತಿ ಮಾಡುವ ಸಾಧನ ಎಂದು ಬಿಂಬಸಲಾಗುತ್ತಿತ್ತು. ಆದರೆ ಪ್ರಸ್ತುತ ಪತ್ರಿಕೋದ್ಯಮದ ಮೌಲ್ಯ ಜಾರಿ ಹೋಗುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾದಿಸಿದರು.
ತುರುವೇಕೆರೆ ಪಟ್ಟಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಲಯನ್ಸ್ ಕ್ಲಬ್ ಹಾಗೂ ರೋಟರಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಕರ್ತರ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿಕೊಂಡಿರುವ ಪತ್ರಿಕಾರಂಗ ಇತ್ತೀಚೆಗೆ ಕಲುಷಿತಗೊಂಡಿದೆ. ವ್ಯಾಪಾರೀ ಮನೋಭಾವ ಹೆಚ್ಚಿದೆ. ಹಲವಾರು ಮಂದಿ ಈ ಪವಿತ್ರವಾದ ಕ್ಷೇತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮೌಲ್ಯಯುತ ಪತ್ರಿಕೋದ್ಯಮವನ್ನು ಕಾಪಾಡಿಕೊಂಡು ಹೋಗುವುದು ಪ್ರತಿಯೊಬ್ಬ ಕಾರ್ಯನಿರತ ಪತ್ರಕರ್ತರ ಜವಾಬ್ದಾರಿ ಆಗಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಸಮಾಜದಲ್ಲಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗದ ರೀತಿಯಲ್ಲಿ ಪತ್ರಿಕಾರಂಗ ಕೂಡ ಕಾರ್ಯನಿರ್ವಹಿಸುತ್ತಿದೆ. ಸಮಾಜವನ್ನು ಸರಿದಾರಿಗೆ ತರುವ ಪತ್ರಕರ್ತರು ಮಾದರಿಯಾಗಿ ಬದುಕಬೇಕು. ಆಗ ಮಾತ್ರ ಸಮಾಜ ಅವರನ್ನು ಹಿಂಬಾಲಿಸುತ್ತದೆ. ಪ್ರಾಮಾಣಿಕವಾಗಿ ದುಡಿಯುವ ಪತ್ರಕರ್ತರಿಗೆ ಸರ್ಕಾರ ತಿಂಗಳಿಗೆ ಕನಿಷ್ಟ ಐದು ಸಾವಿರ ರೂಪಾಯಿಗಳ ಗೌರವ ಧನ ನೀಡಬೇಕು. ಪ್ರತಿ ತಾಲ್ಲೂಕಿನಲ್ಲಿ ಪತ್ರಕರ್ತರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಈ ಕುರಿತು ತಾವು ಸದನದಲ್ಲಿ ಪ್ರಸ್ಥಾಪಿಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ಗ್ರಾಮೀಣ ಪತ್ರಕರ್ತರಿಗೆ ಸರ್ಕಾರ ಸೇವಾ ಭದ್ರತೆ ನೀಡಬೇಕು. ಸರ್ಕಾರ ವತಿಯಿಂದ ಕನಿಷ್ಟ ಗೌರವ ಧನದ ಜೊತೆಗೆ ಆರೋಗ್ಯ ವಿಮೆ ನೀಡಬೇಕಿದೆ. ಇತ್ತೀಚಿಗೆ ಕೆ.ಎಸ್.ಆರ್.ಟಿ.ಸಿ. ಬಸ್ ಪಾಸ್ ನೀಡುವ ವಿಚಾರ ಸಂಪೂರ್ಣ ಗೊಂದಲಗಳಿಂದ ಕೂಡಿದೆ. ಈ ನಿಯಮಾವಳಿಯನ್ನು ಸಡಿಲಿಸಿದರೆ ಮಾತ್ರ ಗ್ರಾಮಾಂತರ ಪ್ರದೇಶದ ಪತ್ರಕರ್ತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅಮ್ಮಸಂದ್ರ ಸುರೇಶ್ ಮಾತನಾಡಿ ಪತ್ರಿಕೋದ್ಯಮಕ್ಕೆ 150 ವರ್ಷಗಳ ಇತಿಹಾಸವಿದೆ. ಸತತವಾಗಿ ಮುದ್ರಣ ಮಾಧ್ಯಮ ನಿರಂತರವಾಗಿ ಬೆಳೆಯುತ್ತಲೇ ಇದೇ ಹೊರತು ತನ್ನ ತನವನ್ನು ಎಂದಿಗೂ ಕಳೆದು ಕೊಂಡಿಲ್ಲ. ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಸರ್ಕಾರ ನಿವಾರಿಸಲೇಬೇಕಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ದ ರೀತಿಯಲ್ಲೇ ಕಾರ್ಯನಿರ್ವಹಿಸುವ ಪತ್ರಿಕಾರಂಗ ನಿರ್ಲಕ್ಷಕ್ಕೊಳಗಾಗಿರುವುದು ದುರಂತವೇ ಸರಿ ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ದುಂಡಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಹಶಿಲ್ದಾರ್ ಎನ್.ಎ.ಅಹಮ್ಮದ್, ಬಿ.ಇ.ಒ.ಸೋಮಶೇಖರ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾರಾಜಶೇಖರ್, ಕಾಂಗ್ರೆಸ್ ಮುಖಂಡ ಎನ್.ಆರ್.ಜಯರಾಮ್, ಲಯನ್ಸ್ ಕ್ಲಬ್ ಅಧ್ಯಕ್ಷ ರಂಗನಾಥ್, ಇನ್ನರ್ ವೀಲ್ ಅಧ್ಯಕ್ಷರಾದ ನೇತ್ರಾವತಿ ಸಿದ್ದಲಿಂಗಸ್ವಾಮಿ, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಸಿದ್ದಲಿಂಗಸ್ವಾಮಿ, ಜಿಲ್ಲಾ ನಿರ್ದೇಶಕರಾದ ಬೊಮ್ಮೇನಹಳ್ಳಿ ನಂದೀಶ್, ತಾಲ್ಲೂಕು ಸಂಘದ ಪದಾಧಿಕಾರಿಗಳಾದ, ಎಸ್.ನಾಗಭೂಷಣ, ಎಂ.ಬಿ.ಹರೀಶ್, ದೇವರಾಜ್, ಧರಣೀಶ್, ಸಚ್ಚಿನ್, ಪತ್ರಕರ್ತರಾದ ಸ್ವರ್ಣಕುಮಾರ್, ಮನೋಹರ್ ರಾಮ್ ಪ್ರಸಾದ್, ಕೊಂಡಜ್ಜಿ ಸುರೇಶ್ ಬಾಬು, ಧರಣೀಶ್, ಮಂಜುನಾಥ್ ಇತರರು ಇದ್ದರು.
ಈ ಸಂಧರ್ಭದಲ್ಲಿ ಪತ್ರಿಕೋದ್ಯಮದಲ್ಲಿ ಸೇವೆ ಮಾಡುತ್ತಿರುವ ತುರುವೇಕೆರೆ ತಾಲೂಕಿನ ಪ್ರತಿಭಾನ್ವಿತ ಪತ್ರಕರ್ತರನ್ನು ಗೌರವಿಸಲಾಯಿತು. ಹಾಗೂ ಪತ್ರಿಕಾ ವಿತರಕರನ್ನು ಸನ್ಮಾಸಿ ಗೌರವಿಸಲಾಯಿತು.
ವರದಿ – ನಾಗಭೂಷಣ್ ತುರುವೇಕೆರೆ
