ತುರುವೇಕೆರೆ ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ರಾಗಿ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಇದರ ವಸ್ತುಸ್ಥಿತಿಯನ್ನು ಅರಿಯಲು ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ಮತ್ತು ಸಹಾಯಕ ಕೃಷಿ ನಿರ್ದೇಶಕಿ ಬಿ.ಪೂಜಾ ಮಂಗಳವಾರ ದಬ್ಬೇಘಟ್ಟ ಹೋಬಳಿಯಲ್ಲಿ ವೀಕ್ಷಣೆ ನಡೆಸಿದರು.
ದಬ್ಬೇಘಟ್ಟ ಹೋಬಳಿಯ ಸೂಳೆಕೆರೆ, ಹೆಡಗೀಹಳ್ಳಿ, ಬೇವಿನಹಳ್ಳಿ, ಅರೆಮಲ್ಲೇನಹಳ್ಳಿ, ಕ್ಯಾಮಸಂದ್ರ ಸೇರಿದಂತೆ ಹಲವಾರು ಗ್ರಾಮಗಳ ರೈತರುಗಳು ಬೆಳೆದಿರುವ ರಾಗಿ ಹೊಲಗಳಿಗೆ ಭೇಟಿ ನೀಡಿದರು.
ಈಗಾಗಲೇ ಕಟಾವು ಮಾಡಿರುವ ರಾಗಿ ತೆನೆ ನೆನೆದಿದೆ. ಮಳೆ ಹೀಗೆ ಮುಂದುವರೆದರೆ ಹುಲ್ಲು ಮತ್ತು ರಾಗಿ ಎರಡೂ ಕಪ್ಪಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗುತ್ತದೆ. ಮೋಡ ಕವಿದ ವಾತಾವರಣವಿರುವ ಕಾರಣ ಹಸಿಯಾಗಿರುವ ರಾಗಿಯನ್ನು ಒಣಗಿಸಲು ರೈತರು ಕಷ್ಟಪಡುತ್ತಿದ್ದಾರೆ. ಕೆಲ ಭಾಗಗಳಲ್ಲಿ ಭಾರಕ್ಕೆ ತೆನೆ ನೆಲಕಚ್ಚಿದೆ. ಮಳೆ ನಿಲ್ಲದಿದ್ದರೆ ರಾಗಿ ಮೊಳಕೆಯೊಡೆಯಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.
ತುರುವೇಕೆರೆ ತಾಲೂಕು ಕೃಷಿ ಸಹಾಯಕ ನಿರ್ದೇಶಕಿ ಬಿ.ಪೂಜಾ ಮಾತನಾಡಿ ಈ ಬಾರಿ ಶೇ.7ರಷ್ಟು ರಾಗಿ ಬೆಳೆ ಬಿತ್ತನೆ ಹೆಚ್ಚಾಗಿದೆ. ಉತ್ತಮ ರಾಗಿ ಫಸಲು ಬಂದಿದೆ. ರೈತರು ಡಿ.11 ರ ತನಕ ಹವಮಾನದಲ್ಲಿ ವೈಪರೀತ್ಯ ಕಂಡು ಬರುವ ಕಾರಣ ಯಾರೂ ರಾಗಿ ಕಟಾವು ಮಾಡಬಾರದು. ಈಗಾಗಲೇ ಕಟಾವು ಮಾಡಿರುವ ರಾಗಿ ತೆನೆಯನ್ನು ಟಾರ್ಪಲ್ ನಿಂದ ಸಂರಕ್ಷಿಸಬೇಕು. ಹವಾಮಾನ ನೋಡಿಕೊಂಡು ರಾಗಿ ಕಟಾವು ಮಾಡಬೇಕು. ಒಂದು ವೇಳೆ ರಾಗಿ ಬೆಳೆಗೆ ಹಾನಿಯಾಗಿದ್ದರೆ ತಾಲ್ಲೂಕು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಸ್ಥಳ ಪರಿಶೀಲನೆ ವೇಳೆ ಬೆಳೆಹಾನಿಯಾಗಿರುವುದು ಕಂಡುಬಂದಲ್ಲಿ ಪ್ರತಿ ಹೆಕ್ಟೇರ್‌ಗೆ 8500 ರೂಪಾಯಿಗಳ ಪರಿಹಾರದ ಹಣವನ್ನು ನೀಡಲಾಗುವುದು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಕೃಷಿ ಎ.ಒ.ಗಿರೀಶ್, ಸಿಬ್ಬಂದಿ ನವೀನ್ ಕುಮಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ವರದಿ – ಎಸ್. ನಾಗಭೂಷಣ್ ತುರುವೇಕೆರೆ