ತುರುವೇಕೆರೆ ತಾಲೂಕಿನಲ್ಲಿ ಕಳೆದ ಐದಾರು ದಿನಗಳ ಹಿಂದೆಯಷ್ಟೇ ಸಿಡಿಲಿಗೆ ಬಲಿಯಾಗಿದ್ದ 14 ಕುರಿ ಮತ್ತು ಮೇಕೆ ಹಾಗೂ ಒಂದು ಹಸುವಿನ ಮಾಲೀಕರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾದ ಪರಿಹಾರ ಆದೇಶ ಪತ್ರವನ್ನು ವಿತರಣೆ ಮಾಡಿದರು.
ತುರುವೇಕೆರೆ ತಾಲೂಕಿನ ರಾಮಸಾಗರದಲ್ಲಿ ಗೋವಿಂದರಾಜು, ವರದಯ್ಯ, ದಾಸಪ್ಪ, ರಮೇಶ್ ಮತ್ತು ಲಕ್ಷ್ಮಣ ಎಂಬುವವರಿಗೆ ಸೇರಿದ 4 ಕುರಿಗಳು ಮತ್ತು 10 ಮೇಕೆಗಳು ಸಿಡಿಲಿಗೆ ಬಲಿಯಾಗಿದ್ದವು. ತಲಾ ಒಂದಕ್ಕೆ 4 ಸಾವಿರ ರೂಗಳಂತೆ ಪರಿಹಾರ ಧನ ನೀಡಲಾಯಿತು.
ತೋವಿನಕಟ್ಟೆಯಲ್ಲಿ ವೇಣುಗೋಪಾಲ್ ಎಂಬುವವರಿಗೆ ಸೇರಿದ ಹಸುವೊಂದು ಸಿಡಿಲಿಗೆ ಬಲಿಯಾಗಿತ್ತು. ಹಾಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ನೀಡಲಾದ 37.500 ರೂಗಳ ಪರಿಹಾರದ ಆದೇಶ ಪತ್ರವನ್ನು ಸಹ ಶಾಸಕ ಎಂ.ಟಿ.ಕೃಷ್ಣಪ್ಪ ಹಸುವಿನ ಮಾಲೀಕರಿಗೆ ವಿತರಣೆ ಮಾಡಿದರು.
ಮಳೆಗಾಲದಲ್ಲಿ ಮಳೆ, ಗುಡುಗು ಮತ್ತು ಸಿಡಿಲಿಗೆ ಸಾಕಷ್ಟು ಅನಾಹುತಗಳು ಸಂಭವಿಸುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ ರೈತಾಪಿಗಳು ಜೀವನೋಪಾಯಕ್ಕಾಗಿ ಜಾನುವಾರುಗಳನ್ನು ಸಾಕಿರುತ್ತಾರೆ. ಇಂತಹ ಸಂಧರ್ಭದಲ್ಲಿ ಆಗುವ ಅನಾಹುತಗಳಿಗೆ ಸರ್ಕಾರ ಹೆಚ್ಚು ಪರಿಹಾರವನ್ನು ನೀಡಬೇಕೆಂದು ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಕ್ಕೆ ಆಗ್ರಹಿಸಿದರು.
ಕುರಿಗಳಿಗೆ ತಲಾ 10 ಸಾವಿರ, ಮೇಕೆಗಳಿಗೆ ತಲಾ 15 ಸಾವಿರ ಮತ್ತು ಹಸು ಸೇರಿದಂತೆ ಇತರೆ ಜಾನುವಾರುಗಳಿಗೆ 80 ಸಾವಿರ ರೂಗಳನ್ನು ಪರಿಹಾರವಾಗಿ ನೀಡಬೇಕೆಂದು ಸರ್ಕಾರಕ್ಕೆ ಶಾಸಕ ಎಂ.ಟಿ.ಕೃಷ್ಣಪ್ಪ ಸಲಹೆ ನೀಡಿದ್ದಾರೆ.
28 ಟಿವಿಕೆ 3 – ತುರುವೇಕೆರೆ ತಾಲೂಕಿನಲ್ಲಿ ಸಿಡಿಲಿಗೆ ಬಲಿಯಾದ ಜಾನುವಾರುಗಳ ಮಾಲೀಕರಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ಪರಿಹಾರದ ಆದೇಶ ಪತ್ರವನ್ನು ವಿತರಣೆ ಮಾಡಿದರು.
ಪಶು ಸಂಗೋಪನಾ ಇಲಾಖೆಯಿಂದ ತಲಾ ಒಂದು ಸಾವಿರ ರೂ ಪರಿಹಾರ ಧನ ನೀಡಲಾಗುವುದು ಎಂದು ತಾಲೂಕು ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕರಾದ ಡಾ.ರೇವಣಸಿದ್ದಪ್ಪ ತಿಳಿಸಿದರು.
ಇದೇ ಸಂಧರ್ಭದಲ್ಲಿ ತಹಸೀಲ್ದಾರ್ ಕುಂ ಇ ಅಹಮದ್, ಇಓ ಶಿವರಾಜಯ್ಯ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಕುಮಾರ್, ಜೆಡಿಎಸ್ ಮುಖಂಡ ಮಾದಿಹಳ್ಳಿ ಕಾಂತರಾಜ್ ಸೇರಿದಂತೆ ಹಲವರು ಇದ್ದರು.
ವರದಿ – ಎಸ್. ನಾಗಭೂಷಣ್
