ಗ್ರಾಮಾಂತರ ಪ್ರದೇಶದ ಜನರ ಮನೆ ಮನೆಗೆ ಕುಡಿಯುವ ನೀರನ್ನು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲ ಜೀವನ್ ಯೋಜನೆ (ಮನೆ ಮನೆಗೆ ಗಂಗೆ) ಬಹಳ ಮಹತ್ವಪೂರ್ಣ ಯೋಜನೆಯಾಗಿದೆ. ಆದರೆ, ತುರುವೇಕೆರೆ ತಾಲೂಕಿನ ದಂಡಿನಶಿವರ ಹೋಬಳಿಯ ತಾಳಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಡಿ.ಕಲ್ಕೆರೆಯಲ್ಲಿ ನಡೆದಿರುವ ಜಲಜೀವನ್ ಯೋಜನೆಯ ಕಾಮಗಾರಿ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ. ಅಲ್ಲದೇ ಅಪೂರ್ಣವಾಗಿದೆ.
ಹೌದು ಕಳೆದ ಎಂಟತ್ತು ತಿಂಗಳ ಹಿಂದೆ ಆರಂಭಗೊಂಡಿರುವ ಈ ಜಲಜೀವನ್ ಯೋಜನೆಗೆ ಕೇಂದ್ರ ಸರ್ಕಾರ ಸುಮಾರು 1.14 ಕೋಟಿ ವಿನಿಯೋಗಿಸಿದೆ. ಡಿ.ಕಲ್ಕೆರೆಯ ಹಲವರು ಬೀದಿಗಳನ್ನು ಈ ಹಿಂದಿನ ಶಾಸಕರಾಗಿದ್ದ ಮಸಾಲಾ ಜಯರಾಮ್ ರವರ ಕಾಲದಲ್ಲಿ ಸುಮಾರು 2 ಕೋಟಿಗೂ ಅಧಿಕ ವೆಚ್ಚದಲ್ಲಿ ಎಲ್ಲಾ ರಸ್ತೆಗಳನ್ನು ಸಿಮೆಂಟಿನಿಂದ ನಿರ್ಮಿಸಲಾಗಿತ್ತು. ಆದರೆ ಈಗ ಜಲ ಜೀವನ್ ಯೋಜನೆಯಡಿ ಮನೆ ಮನೆಗೆ ನೀರು ಸಂಪರ್ಕ ನೀಡುವ ಸಲುವಾಗಿ ಪೈಪುಗಳನ್ನು ಅಳವಡಿಸುವುದಕ್ಕಾಗಿ ಸಿಮೆಂಟ್ ರಸ್ತೆಯ ಮಧ್ಯದಲ್ಲೇ ಗುಂಡಿ ಹೊಡೆದು ಪೈಪ್ ಗಳನ್ನು ಹೂಳಲಾಗಿದೆ. ಆದರೆ ತೆಗೆದಿರುವ ಗುಂಡಿಗಳನ್ನು ಕ್ರಮಬದ್ದವಾಗಿ ಮುಚ್ಚಿಲ್ಲ.

ಸಿಮೆಂಟ್ ರಸ್ತೆಯ ದಾರಿ ಮಧ್ಯೆ ಸುಮಾರು ಒಂದೆರೆಡು ಅಡಿ ಅಗಲದಲ್ಲಿ ಮತ್ತು ಎರಡು ಅಡಿ ಆಳದಲ್ಲಿ ಗುಂಡಿಯನ್ನು ತೆಗೆಯಲಾಗಿದೆ. ಪೈಪುಗಳನ್ನು ಹಾಕಿದ ನಂತರ ಗುಂಡಿಗಳನ್ನು ಮುಚ್ಚದಿರುವ ಕಾರಣ ಜನರು ಓಡಾಡಲು ತೊಂದರೆಯಾಗಿದೆ.
ಗ್ರಾಮದಲ್ಲಿರುವ ಹಲವಾರು ಗುಂಡಿಗಳಲ್ಲಿ ಗಿಡಗಂಟೆಗಳು ಬೆಳೆದಿವೆ. ನಡೆದಾಡುವುದು ಸಹ ಕಷ್ಟವಾಗಿದೆ. ಇನ್ನು ದ್ವಿಚಕ್ರ ವಾಹನಗಳಲ್ಲಿ ಓಡಾಡುವವರ ಸ್ಥಿತಿಯಂತೂ ಭಯಾನಕ. ಗ್ರಾಮದ ಅದೆಷ್ಟೋ ಮಂದಿ ದ್ವಿಚಕ್ರವಾಹದಲ್ಲಿ ಬಿದ್ದು ತಮ್ಮ ಕೈಕಾಲುಗಳನ್ನು ಮುರಿದುಕೊಂಡಿದ್ದಾರೆ. ಅಲ್ಲದೇ ತಮ್ಮ ವಾಹನಗಳಿಗೂ ಹಾನಿಯಾಗಿದೆ. ಕೆಲವು ರಸ್ತೆಗಳಲ್ಲಿ ಪೈಪುಗಳನ್ನು ಹುದಿಯುವ ಸಂಧರ್ಭದಲ್ಲಿ ಜೆಸಿಬಿ ಬಳಸಿರುವ ವೇಳೆ ಇಡೀ ರಸ್ತೆಯೇ ಕಿತ್ತು ಬಂದಿದೆ. ಇತ್ತ ಜಲ ಜೀವನ್ ಯೋಜನೆಯ ಕಾಮಗಾರಿಯೂ ಆಗಿಲ್ಲ. ಅಲ್ಲದೇ ಕಿತ್ತು ಹಾಕಿರುವ ರಸ್ತೆಯನ್ನು ದುರಸ್ಥಿ ಪಡಿಸುವ ಗೋಜಿಗೂ ಯಾರೂ ಹೋಗಿಲ್ಲ.
ಜಲಜೀವನ್ ಯೋಜನೆಯ ಕಾಮಗಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಗಳಾಗಲೀ, ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರಾಗಲೀ ಜನರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಿಲ್ಲ. ಸುಮಾರು ಎರಡು ತಿಂಗಳಿನಿಂದ ಕಾಮಗಾರಿ ನಿಲ್ಲಿಸಲಾಗಿದೆ. ತೆಗೆದಿರುವ ಗುಂಡಿಗಳಲ್ಲಿ ಗಿಡಗಂಟೆಗಳು ಬೆಳೆದು ವಿಷಜಂತುಗಳ ಆವಾಸ್ಥಾನವಾಗುತ್ತಿದೆ. ಪ್ರತಿದಿನ ಮಕ್ಕಳು, ಹೆಂಗಸರು ಸೇರಿದಂತೆ ವೃದ್ಧರು ಈ ಗುಂಡಿಗಳಲ್ಲಿ ಬೀಳುವುದು ಸಾಮಾನ್ಯವಾಗಿದೆ. ಗ್ರಾಮದಲ್ಲಿ ಸುಮಾರು 350 ಕ್ಕೂ ಹೆಚ್ಚು ಮನೆಗಳಿವೆ. ಇವುಗಳಲ್ಲಿ ಕೆಲವು ಮನೆಗಳಿಗೆ ಮಾತ್ರ ಜಲ ಜೀವನ್ ಯೋಜನೆಯಡಿ ನಲ್ಲಿ ಸಂಪರ್ಕವನ್ನು ನೀಡಲಾಗಿದೆ. ಅಲ್ಲಿಯೂ ಗುಣಮಟ್ಟದ ಪರಿಕರಗಳನ್ನು ಹಾಕದೇ ವಂಚಿಸಲಾಗಿದೆ.

ಇನ್ನೂ ಹಲವಾರು ಮನೆಗಳಿಗೆ ಸಂಪರ್ಕ ನೀಡಿಲ್ಲ. ಕಳಪೆ ಗುಣಮಟ್ಟ ಕಾಮಗಾರಿ ಆಗಿರುವ ಬಗ್ಗೆ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರೋರ್ವರು ತಕರಾರು ತೆಗೆದಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸಂಪೂರ್ಣಗೊಳಿಸದೇ ಅರ್ಧಕ್ಕೇ ಬಿಟ್ಟು ಹೋಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಬೇಜವಾಬ್ದಾರಿಯಿಂದ ದಾರಿ ಮಧ್ಯೆಯೇ ಗುಂಡಿ ತೋಡಿರುವುದರಿಂದ ರಸ್ತೆಯೂ ಹಾಳಾಗಿದೆ. ಅಲ್ಲದೇ ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗಿದೆ ಎಂದು ಗ್ರಾಮದ ಮುಖಂಡರಾದ ಮೃತ್ಯುಂಜಯ ದೂರಿದ್ದಾರೆ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಕೆಲವೇ ದಿನಗಳಲ್ಲಿ ತಮ್ಮ ಗ್ರಾಮದಲ್ಲಿ ಆಗಿರುವ ತೊಂದರೆಯನ್ನು ನಿವಾರಿಸದಿದ್ದಲ್ಲಿ ತಾಲೂಕು ಪಂಚಾಯಿತಿ ಮುಂಭಾಗವೇ ಡಿ.ಕಲ್ಕೆರೆ ಗ್ರಾಮಸ್ಥರೊಡಗೂಡಿ ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಮೃತ್ಯುಂಜಯ ಎಚ್ಚರಿಕೆ ನೀಡಿದ್ದಾರೆ.

ಕೂಡಲೇ ಗ್ರಾಮದ ಜಲ ಜೀವನ್ ಯೋಜನೆಯ ಕಮಗಾರಿಯನ್ನು ಸಂಪೂರ್ಣಗೊಳಿಸಬೇಕು. ಅಲ್ಲದೇ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಸಿಮೆಂಟ್ ರಸ್ತೆ ಹೇಗಿತ್ತೋ ಅದೇ ಮಾದರಿಯಲ್ಲಿ ರಸ್ತೆ ನಿರ್ಮಾಣ ಮಾಡಬೇಕೆಂದು ಮೃತ್ಯುಂಜಯ ಆಗ್ರಹಿಸಿದ್ದಾರೆ.
ಗ್ರಾಮದ ಹಲವಾರು ರಸ್ತೆಗಳ ಉದ್ದಕ್ಕೂ ಗುಂಡಿ ತೋಡಲಾಗಿದೆ. ಗುಂಡಿಗಳನ್ನು ಮುಚ್ಚದಿರುವ ಹಿನ್ನೆಲೆಯಲ್ಲಿ ಜನರು ಗುಂಡಿಯೊಳಗೆ ಬಿದ್ದು ಕೈಕಾಲು ಮುರಿದುಕೊಳ್ಳುವುದು ಸಾಮಾನ್ಯವಾಗಿದೆ. ದ್ವಿಚಕ್ರವಾಹನದಲ್ಲಿ ತೆರಳುವಾಗ ಬಿದ್ದು ಜೀವಕ್ಕೆ ಅನಾಹುತವಾದರೆ ಯಾರು ಹೊಣೆ ಎಂದು ಗುಂಡಿಯಲ್ಲಿ ಬಿದ್ದು ಗಾಯಗೊಂಡಿರುವ ಬಾಬಣ್ಣ ಪ್ರಶ್ನಿಸುತ್ತಾರೆ.
ಡಿ.ಕಲ್ಕೆರೆಯ ಜಲ ಜೀವನ್ ಯೋಜನೆಯಲ್ಲಾಗಿರುವ ಲೋಪವನ್ನು ಒಪ್ಪಿಕೊಂಡಿರುವ ತಾಳಕೆರೆ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ವಿನೋದ್ ರವರು ಇನ್ನು ಕೆಲವೇ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಗ್ರಾಮಸ್ಥರೊಡನೆ ಮಾತುಕತೆ ನಡೆಸಿ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.
ವರದಿ – ಎಸ್.ನಾಗಭೂಷಣ