ನೋಡಿ ಸಾರ್, ನಮ್ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಈಗ ಏಕಾಏಕಿ ಸ್ಕೂಲ್ ಕ್ಲೋಸ್ ಮಾಡ್ತೀವಿ ಅಂದ್ರೆ ನಮ್ಮ ಮಕ್ಕಳ ಗತಿ ಏನು?. ನಮ್ಮ ಮಕ್ಕಳ ಭವಿಷ್ಯನ ಏನ್ಮಾಡಬೇಕು ಅಂತಿದ್ದೀರಾ? ಎಂದು ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಹೈಸ್ಕೂಲ್ ವಿದ್ಯಾರ್ಧಿಗಳ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬ್ಯಾಲಹಳ್ಳಿಯಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ನೆಹರು ವಿದ್ಯಾಶಾಲೆ ನಡೆಯುತ್ತಿದ್ದು, ಇದೀಗ ಶಾಲೆ ಮುಚ್ಚುವ ಕುರಿತಾಗಿ ಶಿಕ್ಷಕರು ಪೋಷಕರ ಬಳಿ ಹಂಚಿಕೊಂಡಾಗ ಪೋಷಕರು ಆಕ್ರೋಶದ ನುಡಿಗಳನ್ನಾಡಿದ್ದಾರೆ.
ತುರುವೇಕೆರೆ ತಾಲೂಕಿನ ಬ್ಯಾಲಹಳ್ಳಿಯಲ್ಲಿರುವ ನೆಹರೂ ವಿದ್ಯಾಶಾಲೆಯಲ್ಲಿ 8, 9 ಮತ್ತು 10ನೇ ತರಗತಿಗಳು ನಡೆಯುತ್ತಿವೆ. ಇಲ್ಲಿ ಎಲ್ಲ ಮೂರು ತರಗತಿಗಳಿಗೆ ದಾಖಲಾತಿ ಕಡಿಮೆಯಿರುವ ಕಾರಣಕ್ಕೆ ಇಡೀ ಮೂರು ತರಗತಿಗಳನ್ನು ಮುಚ್ಚಲು ಸರ್ಕಾರದಿಂದ ಆದೇಶ ಬಂದಿದೆ. ಪ್ರತಿ ತರಗತಿಯಲ್ಲಿ ಕನಿಷ್ಠ 25 ಹಾಜರಾತಿ ಇರಬೇಕು. ಆದರೆ ಇಲ್ಲಿಯ 8ನೇ ತರಗತಿಯಲ್ಲಿ ಕೇವಲ 7, 9ನೇ ತರಗತಿಯಲ್ಲಿ 12 ಮತ್ತು 10ನೇ ತರಗತಿಯಲ್ಲಿ 17ಮಂದಿ ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಪಾಠಪ್ರವಚನ ಮಾಡಲೆಂದು ನಾಲ್ವರು ಶಿಕ್ಷಕರಿದ್ದಾರೆ. ಹೀಗಾಗಿ ಕನಿಷ್ಠ ಹಾಜರಾತಿಯೂ ಇಲ್ಲದ ಕಾರಣ ಶಾಲೆಯನ್ನು ಬಂದ್ ಮಾಡಲು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಬಂದಿದೆ.
ಗುರುವಾರ ಮಧ್ಯಾಹ್ನ ಪೋಷಕರ ಸಭೆ ಕರೆದಿದ್ದ ಬಿಇಒ ಸೋಮಶೇಖರ್ ಅವರು ಮಾತನಾಡಿ, “ಶಾಲೆಯಲ್ಲಿ ಹಾಜರಾತಿ ಕೊರತೆಯಿರುವ ಕಾರಣಕ್ಕೆ ವಿಧಿಯಿಲ್ಲದೇ ಶಾಲೆಯನ್ನು ಮುಚ್ಚಬೇಕಾಗಿದೆ. ಇಲ್ಲಿಯ ವಿದ್ಯಾರ್ಥಿಗಳನ್ನು ಸಮೀಪದ ಶಾಲೆಗಳಿಗೆ ಸೇರಿಸಿ” ಎಂದು ಪೋಷಕರಲ್ಲಿ ಮನವಿ ಮಾಡಿಕೊಂಡರು.
ಇದರಿಂದ ಆಕ್ರೋಶಗೊಂಡ ಪೋಷಕರು, “ಏಕಾಏಕಿ ಶಾಲೆಯನ್ನು ಮುಚ್ಚಿದರೆ ಮಕ್ಕಳ ಗತಿ ಏನು?. ಈಗಾಗಲೇ ಅರ್ಧ ವರ್ಷ ಕಳೆದಿದೆ. ಇನ್ನು ಮರ‍್ನಾಲ್ಕು ತಿಂಗಳಲ್ಲಿ ವಾರ್ಷಿಕ ಪರೀಕ್ಷೆಯೂ ಬರಲಿದೆ. ಈಗ ಏಕಾಏಕಿ ಶಾಲೆಯನ್ನು ಮುಚ್ಚಿದರೆ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ” ಎಂದು ಸಿಡಿಮಿಡಿಗೊಂಡರು.
“ಈ ಶಾಲೆಯ ಮುಖ್ಯೋಪಧ್ಯಾಯರಿಗೆ ಈ ಶೈಕ್ಷಣಿಕ ವರ್ಷದಿಂದಲೇ ಶಾಲೆಯ ಹಾಜರಾತಿ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಮುಖ್ಯಶಿಕ್ಷಕರು ಪೋಷಕರ ಗಮನಕ್ಕೆ ತಾರದಿರುವುದು ಅಕ್ಷಮ್ಯ. ಸಾಕಷ್ಟು ಬಾರಿ ಎಚ್ಚರಿಕೆ ಮತ್ತು ಸೂಚನೆ ನೀಡಿದ್ದರೂ ಕೂಡಾ ಬೇಜವಾಬ್ದಾರಿತನ ತೋರಿದ್ದಾರೆ. ಇಲಾಖಾ ನಿಯಮದ ಪ್ರಕಾರ ಈ ಶಾಲೆಯನ್ನು ಮುಚ್ಚಿ ಸಮೀಪದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದು ಬಿಟ್ಟರೆ ನಬೇರೆ ದಾರಿಯೇ ಇಲ್ಲ” ಎಂದು ಬಿಇಒ ಸೋಮಶೇಖರ್ ಹೇಳಿದರು.
“ಇಲ್ಲಿಯ ಮುಖ್ಯ ಶಿಕ್ಷಕರು ಶಾಲೆಯಲ್ಲಿ ಪ್ರತಿ ತರಗತಿಯಲ್ಲಿ 25 ಮಂದಿ ಮಕ್ಕಳಿದ್ದಾರೆಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ ವಾಸ್ತವಾಂಶ ತನಿಖೆಯ ವೇಳೆ ಮುಖ್ಯ ಶಿಕ್ಷಕರು ಸುಳ್ಳು ಮಾಹಿತಿ ನೀಡಿರುವುದು ಬೆಳಕಿಗೆ ಬಂದಿದೆ” ಎಂದು ಸಭೆಗೆ ಬಿಇಒ ಸೋಮಶೇಖರ್ ತಿಳಿಸಿದರು.
ಬಿಇಒ ಅವರ ಮಾತಿಗೆ ಸಿಡಿಮಿಡಿಗೊಂಡ ಪೋಷಕರು, “ಯಾವುದೇ ಕಾರಣಕ್ಕೂ ಈ ಶಾಲೆಯನ್ನು ಮುಚ್ಚಲು ಬಿಡುವುದಿಲ್ಲ. ಮೊದಲೇ ಶಿಕ್ಷಕರು ಹಾಜರಾತಿ ಕೊರತೆ ಬಗ್ಗೆ ನಮಗೆ ತಿಳಿಸಿದ್ದರೆ ಚಿಂತಿಸಬಹುದಿತ್ತು. ಆದರೆ ಈಗ ಏಕಾಏಕಿ ಶಾಲೆ ಮುಚ್ಚಿದರೆ ಇಲ್ಲಿ ಓದುತ್ತಿರುವ ಮಕ್ಕಳ ಗತಿ ಏನು” ಎಂದು ಏರುದನಿಯಲ್ಲಿ ಬಿಇಒ ಅವರನ್ನು ಪ್ರಶ್ನಿಸಿದರು.
ಈ ಶಾಲೆ ಸ್ಥಾಪನೆಗೆ ಬ್ಯಾಲಹಳ್ಳಿ ಸುತ್ತಮುತ್ತಲ ಜನರು ಜಮೀನನ್ನು ನೀಡಿದ್ದಾರೆ. ಈ ಶಾಲೆಗೆ ಹತ್ತಾರು ವರ್ಷಗಳ ಇತಿಹಾಸವಿದೆ. ಅರ್ಧವರ್ಷ ಮುಗಿದಿದೆ. ಈಗ ಮಕ್ಕಳನ್ನು ಬೇರೆ ಶಾಲೆಗೆ ಕಳಿಸಲು ಸಾಧ್ಯವೇ?. ಇಲ್ಲಿಗೆ ಬರುತ್ತಿರುವ ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದವರು. ಅಲ್ಲದೆ ಆರ್ಥಿಕವಾಗಿ ಸ್ಥಿತಿವಂತರಲ್ಲ. ಈಗಲೇ ಹಲವಾರು ಮಕ್ಕಳು ಮರ‍್ನಾಲ್ಕು ಕಿಲೋ ಮೀಟರ್ ದೂರದಿಂದ ಶಾಲೆಗೆ ನಡೆದುಕೊಂಡು ಬರುತ್ತಿದ್ದಾರೆ. ಈಗ ಬೇರೆ ಶಾಲೆ ಎಂದರೆ ಇನ್ನೂ ಐದಾರು ಕಿಲೋ ಮೀಟರ್ ದೂರ ಸಾಗಲು ಸಾಧ್ಯವೇ” ಎಂದು ವಡವನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಗ್ರಾಮದ ಮುಖಂಡ ರಾಮಣ್ಣ ಬಿಇಒ ಅವರನ್ನು ಕೇಳಿದರು.
“ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟವಾಡುತ್ತಿರುವ ಆಡಳಿತ ಮಂಡಲಿ ಸೂಕ್ತ ಕ್ರಮ ತೆಗೆದುಕೊಂಡು ಮಕ್ಕಳಿಗೆ ಇಲ್ಲೇ ವಿದ್ಯಾಭ್ಯಾಸ ಕೊಡಿಸಬೇಕು. ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಲು ಸಾಧ್ಯವಿಲ್ಲ. ಶಾಲೆಯನ್ನು ಈ ಶೈಕ್ಷಣಿಕ ವರ್ಷದವರೆಗೂ ಸುಗಮವಾಗಿ ನಡೆಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಆಗುವ ಬದಲಾವಣೆ ಅನುಸಾರ ನಡೆದುಕೊಳ್ಳೋಣ” ಎಂದು ಪೋಷಕರಾದ ಕುಮಾರಸ್ವಾಮಿ, ಕುಮಾರ್ ಸೇರಿದಂತೆ ಹಲವಾರು ಪೋಷಕರು ಮುಖ್ಯ ಶಿಕ್ಷಕ ಮಾಯಿಗಯ್ಯನವರಿಗೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಪೇಜಾವರ ಮಠಾದೀಶರ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಿ : ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ
ಇನ್ನು ಎರಡು ದಿನಗಳ ಒಳಗೆ ಆಡಳಿತ ಮಂಡಳಿಯವರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಶಿಕ್ಷಕ ಮಾಯಿಗಯ್ಯ ಸಭೆಗೆ ತಿಳಿಸಿದರು.
ಏಕಾಏಕಿ ಶಾಲೆಯನ್ನು ಮುಚ್ಚಿ ಮಕ್ಕಳಿಗೆ ಅನ್ಯಾಯವೆಸಗಿದರೆ ಶಾಲೆಗೆ ಬೀಗ ಜಡಿದು ಶಾಲೆಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ವಡವನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಗ್ರಾಮದ ಮುಖಂಡ ರಾಮಣ್ಣ ಎಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಶಿಕ್ಷಣ ಇಲಾಖೆಯ ಸಿದ್ದಪ್ಪ, ಸಿಆರ್‌ಸಿಗಳಾದ ಜಗನ್ನಾಥ್ ಮತ್ತು ಗಿರೀಶ್ ಇದ್ದರು.
