ತುರುವೇಕೆರೆ ತಾಲ್ಲೂಕಿನ ಹಲವಾರು ಕೆರೆಗಳು ಕೋಡಿ ಬಿದ್ದ ಪರಿಣಾಮ ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಾತ್ರಿ ಸುರಿದ ಮಳೆಗೆ ಮನೆ ಗೋಡೆ ಕುಸಿದಿರುವ ಘಟನೆಯೂ ವರದಿಯಾಗಿದೆ.
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿ ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮನವರ ವಾಸದ ಮನೆಯ ಒಂದು ಭಾಗದ ಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದಿದೆ. ಅದೃಷ್ಠವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಧವಸ, ಧಾನ್ಯ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ.

ತುರುವೇಕೆರೆ ಪಟ್ಟಣದ 13 ನೇ ವಾರ್ಡ್ ನಲ್ಲಿರಾಜಕಾಲುವೆ ಮುಚ್ಚಿರುವುದರಿಂದ ಮಳೆ ನೀರು ಇಲ್ಲಿನ ವೆಂಕಟೇಶ್, ಕೆಂಪೇಗೌಡ, ಶೈಲಮ್ಮ, ಮರಿಯಪ್ಪ ಸೇರಿದಂತೆ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯ ದಿನ ನಿತ್ಯದ ಪರಿಕರಗಳೆಲ್ಲ ಹಾನಿಯಾಗಿವೆ.
ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯ ಅಂಜನ್ ಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ತೆದಾರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ರಾಜಕಾಲುವೆಯ ಒತ್ತುವರಿ ತೆರವು ಮಾಡಿಸಿ, ಕಾಲುವೆ ನೀರು ಸರಾಗವಾಗಿ ಹೋಗುವಂತೆ ಮಾಡಿಸಿದರು.
ಮನೆಯೊಳಗೆ ನೀರು ನುಗ್ಗಿ ತೊಂದರೆಯಾಗಿರುವ ಅಲ್ಲದೇ ಮನೆಯೊಳಗಿನ ನೆಲದಿಂದಲೇ ನೀರು ಜಿನುಗುತ್ತಿರುವ ಮನೆಗಳಲ್ಲಿ ವಾಸವಿರುವ ನಾಲ್ಕೖದು ಮನೆಗಳವರಿಗೆ ಶಾಲಾ ಕೊಠಡಿಯಲ್ಲಿ ತಾತ್ಕಾಲಿಕ ವಾಸಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಅವರೆಲ್ಲರಿಗೂ ಊಟೋಪಚಾರದ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ ಎಂದು ತಹಸೀಲ್ದಾರ್ ಅಹಮದ್ ತಿಳಿಸಿದ್ದಾರೆ.

ತಾಲ್ಲೂಕಿನ ಕೊಂಡಜ್ಜಿ ಕ್ರಾಸ್, ಸೊಪ್ಪನಹಳ್ಳಿ ಮಧ್ಯೆ ಕೊಂಡಜ್ಜಿ ಹಳ್ಳ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿರುವುದರಿಂದ ದಂಡಿನಶಿವರ ಪೊಲೀಸರು ಮತ್ತು ಕೊಂಡಜ್ಜಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬ್ಯಾರಿಕೇಡ್ ಹಾಕಿಸಿ ರಸ್ತೆ ಬಂದ್ ಮಾಡಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಇದೇ ಜಾಗದಲ್ಲಿ ಹಳ್ಳದಾಟುವಾಗ ಕಾರು ಕೊಚ್ಚಿ ಹೋಗಿ ಚಾಲಕ ಸಾವನ್ನಪ್ಪಿದ್ದರು. ಆದ ಕಾರಣ ಗೋರಾಘಟ್ಟ-ಕಲ್ಲೂರ್ ಕ್ರಾಸ್ ಭಾಗದ ಬಸ್ ಸೇರಿದಂತೆ ಇನ್ನಿತರ ವಾಹನಗಳ ಸಂಚಾರ ನಿಷೇಧಿಸಲಾಗಿದೆಂದು ತಿಳಿದುಬಂದಿದೆ.
ಮಲ್ಲಾಘಟ್ಟ ಕೆರೆ ಕೋಡಿ ನೀರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಪೊಲೀಸರು ಇಲ್ಲಿನ ರಸ್ತೆ ನಿರ್ಭಂದಿಸಿ ಬ್ಯಾರಿಕೇಡ್ ಹಾಕಿದ್ದಾರೆ. ಸಾರಿಗೇಹಳ್ಳಿ ಕೆರೆ ಕೋಡಿಯಲ್ಲಿ ನೀರು ಹೆಚ್ಚಾಗಿ ರಸ್ತೆ ಮೇಲೆ ಹರಿಯುತ್ತಿದೆ.

ತುರುವೇಕೆರೆ ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಮುನಿಯೂರು ಗದ್ದೆ ಬಯಲಿನವರೆವಿಗೂ ನೀರು ಆವರಿಸಿಕೊಂಡು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಶಿಂಷಾ ನದಿ ರಸ್ತೆ ಸೇತುವೆ ಎರಡೂ ಕಡೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ತಾಲ್ಲೂಕಿನ ಜಡೆಯ ಕೆರೆ ತುಂಬಿದ್ದು ಬುಧವಾರ ರಾತ್ರಿ ಕೆರೆ ಏರಿ ಮಧ್ಯೆ ಬಿರುಕು ಉಂಟಾಗಿ ಇಡೀ ಕೆರೆಯೇ ಒಡೆದು ಹೋಗುವ ಸ್ಥಿತಿಯಲ್ಲಿದ್ದಾಗ ಗ್ರಾಮಸ್ಥರು ಹೇಮಾವತಿ ನಾಲಾ ಎಂಜಿಯರ್ ಗೆ ಮಾಹಿತಿ ತಿಳಿಸಿ ಜೆಸಿಬಿ ಮೂಲಕ ಕೋಡಿ ಒಡೆಸಿ ನೀರನ್ನು ಹೊರಗೆ ಬಿಡಿಸಿದರೆಂದು ತಿಳಿದುಬಂದಿದೆ.
ವರದಿ – ಎಸ್. ನಾಗಭೂಷಣ್