ಸಿಡಿಲಿನ ಆರ್ಭಟಕ್ಕೆ ತುರುವೇಕೆರೆ ತಾಲೂಕಿನ ರಾಮಸಾಗರದಲ್ಲಿ ಕುರಿಗಳು ಮತ್ತು ಮೇಕೆಗಳು ಬಲಿಯಾಗಿರುವ ಘಟನೆ ವರದಿಯಾಗಿದೆ.
ಗ್ರಾಮದ ರೈತರಾದ ವರದರಾಜು, ಲಕ್ಕಣ್ಣ, ಗೋವಿಂದರಾಜು ಮತ್ತು ಜಯಲಕ್ಷ್ಮಮ್ಮ ಅವರುಗಳಿಗೆ ಸೇರಿದ ಸುಮಾರು 3 ಲಕ್ಷಕ್ಕೂ ಹೆಚ್ಚು ಮೌಲ್ಯದ 17 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿವೆ.
ಬುಧವಾರ ಸಾಯಂಕಾಲ 5 ಗಂಟೆಯ ವೇಳೆ ಗುಡುಗು ಸಹಿತ ಮಳೆ ಪ್ರಾರಂಭವಾಯಿತು. ಬೆಟ್ಟದ ತಪ್ಪಲಿನಲ್ಲಿ ಮೇಯುತ್ತಿದ್ದ ಕುರಿ ಮತ್ತು ಮೇಕೆಗಳಿಗೆ ಇದ್ದಕ್ಕಿದ್ದಂತೆಯೇ ಸಿಡಿಲು ಬಡಿದ ಪರಿಣಾಮ ಕುರಿ ಮತ್ತು ಮೇಕೆಗಳು ಸ್ಥಳದಲ್ಲೇ ಸಾವನ್ನಪ್ಪಿದವು. ಕುರಿ ಕಾಯುತ್ತಿದ್ದ ರೈತರು ಸನಿಹದಲ್ಲೇ ಇದ್ದರೂ ಸಹ ಅದೃಷ್ಠವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ.
ಸಿಡಿಲು ಬಡಿದು ಕುರಿ, ಮೇಕೆಗಳು ಅಸುನೀಗಿರುವ ವಿಚಾರವನ್ನು ರೈತರು ಪಶುಸಂಗೋಪನಾ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಂಜೆಯಾಗಿರುವ ಕಾರಣ ಗುರುವಾರ ಬೆಳಗ್ಗೆ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಾಲ್ಲೂಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ್ಣಸಿದ್ದಯ್ಯ ತಿಳಿಸಿದ್ದಾರೆ.
ಪರಿಹಾರಕ್ಕೆ ಆಗ್ರಹ – ರಾಮಸಾಗರ ಗ್ರಾಮದ ಭೋವಿ ಸಮಾಜಕ್ಕೆ ಸೇರಿದ ಈ ನಾಲ್ವರ ಜೀವನೋಪಾಯಕ್ಕೆ ಕಾರಣವಾಗಿದ್ದ ಕುರಿ ಮತ್ತು ಮೇಕೆಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿರುವ ಹಿನ್ನೆಲೆಯಲ್ಲಿ ಬಡವರಾಗಿರುವ ಇವರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಪಂಚಾಯ್ತಿಯ ಮಾಜಿ ಸದಸ್ಯ ಎನ್.ಆರ್.ಜಯರಾಮ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವರದಿ – ಎಸ್. ನಾಗಭೂಷಣ್
