ತನ್ನ ಅನುಭವದಲ್ಲಿದ್ದ ಜಮೀನನ್ನು ಬೇರೆಯವರ ಹೆಸರಿಗೆ ಕಂದಾಯ ಇಲಾಖಾ ಅಧಿಕಾರಿಗಳು ದಾಖಲಾತಿ ಸೃಷ್ಠಿಸಿ ತನಗೆ ವಂಚಿಸಿದ್ದಾರೆಂದು ಆರೋಪಿಸಿ ತಾಲೂಕಿನ ದೊಡ್ಡಾಘಟ್ಟದ ರೈತ ವಿಕಲ ಚೇತನ ಜಯಕುಮಾರ್ (50) ಎಂಬುವವರು ತಾಲೂಕು ಕಚೇರಿಯ ಆವರಣದಲ್ಲೇ ವಿಷ ಸೇವಿಸಿರುವ ಘಟನೆ ವರದಿಯಾಗಿದೆ.
ಗುಬ್ಬಿ ತಾಲೂಕಿನ ದೊಡ್ಡಾಘಟ್ಟದ ನಿವಾಸಿ ಲಕ್ಕಪ್ಪ ಎಂಬುವವರ ಮಗ ಜಯಕುಮಾರ್ ಎಂಬುವವರು ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುತ್ತಿದ್ದರು. ತಮ್ಮ ಜೀವನೋಪಾಯಕ್ಕಾಗಿ ಅಮ್ಮಸಂದ್ರದಲ್ಲಿ ಸಣ್ಣ ಟೀ ಅಂಗಡಿಯನ್ನು ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆಂದು ಹೇಳಲಾಗಿದೆ.
ಈ ಮಧ್ಯೆ ತಮ್ಮ ತಂದೆಯವರ ಹೆಸರಿನಲ್ಲಿದ್ದ ಸುಮಾರು 1.02 ಗುಂಟೆ ಜಮೀನು ಮತ್ತು ೧೧ ಗುಂಟೆ ಜಮೀನನ್ನು ಅದೇ ಗ್ರಾಮದ ಕೃಷ್ಣಪ್ಪ ಮತ್ತು ಗಂಗಮ್ಮ ಎಂಬುವವರ ಹೆಸರಿಗೆ ಮಾಡಲಾಗಿದೆ ಎಂದು ಹೇಳಲಾಗಿದೆ. ಕಳೆದ ತಿಂಗಳ ತನಕವೂ ತಮ್ಮ ತಂದೆಯವರ ಹೆಸರಿನಲ್ಲಿ ಬರುತ್ತಿದ್ದ ದಾಖಲೆಗಳು ಇತ್ತೀಚೆಗೆ ಕೃಷ್ಣಪ್ಪ ಮತ್ತು ಗಂಗಮ್ಮ ಎಂಬುವವರ ಹೆಸರಿಗೆ ಮಾಡಲಾಗಿದೆ ಎಂದು ಸದರಿ ಜಯಕುಮಾರ್ ಗೆ ತಿಳಿದುಬಂದಿದೆ. ಈ ಸಂಬಂಧ ಜಯಕುಮಾರ್, ಕಂದಾಯ ಇಲಾಖಾ ಅಧಿಕಾರಿಗಳಿಗೆ ತಕರಾರು ಅರ್ಜಿಯನ್ನೂ ಸಹ ನೀಡಿದ್ದಾರೆ, ಅಲ್ಲದೇ ನ್ಯಾಯಾಲಯದ ಮೊರೆಯನ್ನೂ ಸಹ ಹೊಕ್ಕಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ತಾಲೂಕು ಕಛೇರಿಗೆ ಬಂದಿದ್ದ ಜಯಕುಮಾರ್ ತಮ್ಮ ಜಮೀನಿಗೆ ಸಂಬಂಧಿಸಿದಂತೆ ಪಹಣಿ ತೆಗೆದುಕೊಂಡ ವೇಳೆ ತಮ್ಮ ಅನುಭವದಲ್ಲಿರುವ ಮತ್ತು ತಮ್ಮ ತಂದೆಯ ಹೆಸರಿನಲ್ಲಿದ್ದ ಜಮೀನು ಅದೇ ಗ್ರಾಮದ ಕೃಷ್ಣಪ್ಪ ಮತ್ತು ಗಂಗಮ್ಮ ಎಂಬುವವರ ಹೆಸರಿಗೆ ಆಗಿರುವುದನ್ನು ಕಂಡು ಹೌಹಾರಿದ್ದಾರೆ. ಅಲ್ಲಿಯೇ ಇದ್ದ ಕಂದಾಯ ಇಲಾಖಾ ಅಧಿಕಾರಿ ಲೋಕೇಶ್ ಎಂಬುವವರನ್ನು ಕೇಳಲಾಗಿ ಈ ಸ್ವತ್ತು ಕೃಷ್ಣಪ್ಪ ಮತ್ತು ಗಂಗಮ್ಮ ನವರ ಹೆಸರಿಗೆ ಆಗಿ ಹೋಗಿದೆ. ಈಗೇನೂ ಮಾಡಲು ಸಾಧ್ಯವಿಲ್ಲ. ಸಿವಿಲ್ ನ್ಯಾಯಾಲಯಕ್ಕೆ ಹೋಗಿ ಇತ್ಯರ್ಥಪಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಜಯಕುಮಾರ್ ತಮ್ಮೊಂದಿಗೆ ತಂದಿದ್ದ ವಿಷವನ್ನು ಕಛೇರಿಯ ಆವರಣದಲ್ಲೇ ಕುಡಿದರು ಎಂದು ಹೇಳಲಾಗಿದೆ.
ವಿಷ ಕುಡಿದ ಕೆಲವೇ ನಿಮಿಷಗಳಲ್ಲಿ ತಮ್ಮ ಗ್ರಾಮದ ಕುಮಾರಸ್ವಾಮಿ ಎನ್ನುವವರಿಗೆ ಕರೆ ಮಾಡಿ ತಮಗೆ ಜಮೀನಿನ ವಿಚಾರದಲ್ಲಿ ಅನ್ಯಾಯವಾಗಿದೆ. ಹಾಗಾಗಿ ತಾವು ವಿಷ ಕುಡಿಯುತ್ತಿರುವುದಾಗಿ ಹೇಳಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಮಾರಸ್ವಾಮಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಬೇರೆ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದಾರೆ.
ತುಮಕೂರಿನಲ್ಲಿ ಜಿಲ್ಲಾಧಿಕಾರಿಗಳ ಸಭೆಗೆ ತೆರಳಿದ್ದ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ರವರು ವಿಷಯ ತಿಳಿದ ಕೂಡಲೇ ಕಂದಾಯ ಇಲಾಖಾಧಿಕಾರಿಗಳಾದ ಶಿವಕುಮಾರ್ ಮತ್ತು ಮಲ್ಲಿಕಾರ್ಜುನ್ ರವರನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸಿ ವಾಸ್ತವಾಂಶವನ್ನು ಸಂಗ್ರಹಿಸಿದ್ದಾರೆ.
ಸದ್ಯ ರೈತ ಜಯಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ.
ವರದಿ – ಎಸ್. ನಾಗಭೂಷಣ್ ತುರುವೇಕೆರೆ
