ಆಯುಧ ಪೂಜೆ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಮನೆಯ ಟ್ರ್ಯಾ ಕ್ಟರ್ ನ್ನು ತೊಳೆಯಲು ನೀರಿನ ಕಟ್ಟೆಗೆ ಇಳಿದಿದ್ದ ವ್ಯಕ್ತಿಯೋರ್ವ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತುರುವೇಕೆರೆ ಸಮೀಪದ ಸೊಪ್ಪಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸೊಪ್ಪನಹಳ್ಳಿ ಗ್ರಾಮದ ನಿವಾಸಿ ಮಂಜುನಾಥ್ (48) ಗುರುವಾರದಂದು ಆಯುಧ ಪೂಜೆಯ ನಿಮ್ಮಿತ್ತ ಮನೆಯ ಟ್ರ್ಯಾಕ್ಟರ್ ನ್ನು ಊರಿನ ಕಟ್ಟೆಯಲ್ಲಿ ತೊಳೆಯಲು ಹೋಗಿದ್ದಾರೆ. ಆ ವೇಳೆ ಮಂಜುನಾಥ್ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಅಕ್ಕಪಕ್ಕದ ರೈತರು ಕಂಡು ನೀರಿನೊಳಗೆ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನ ಫಲ ನೀಡದಿದ್ದರಿಂದ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ದಂಡಿನಶಿವರ ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿಗಳಿಂದ ಶವ ಹುಡುಕಾಟ ನಡೆಸಿದ್ದಾರೆ. ಸಂಜೆಯಾದ್ದರಿಂದ ಮತ್ತು ಸುಮಾರು 30 ಅಡಿ ಆಳ ಇದ್ದುದರಿಂದ ಪತ್ತೆ ಕಾರ್ಯ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಗ್ಗೆಯೂ ಅಗ್ನಿಶಾಮಕ ಸಿಬ್ಬಂದಿಗಳು ಬೋಟ್ ಸಹಾಯದಿಂದ ಸಂಜೆಯ ತನಕವೂ ಶವ ಶೋಧ ಕಾರ್ಯ ನಡೆಸಿದರೂ ಸಹ ಪ್ರಯೋಜನವಾಗಿರಲಿಲ್ಲ. ಶನಿವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಶವ ನೀರಿನ ಮೇಲೆ ತೇಲತೊಡಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಗಳ ಸಹಯದಿಂದ ಶವವನ್ನು ಹೊರ ತೆಗೆಯಲಾಯಿತು.
ಮೃತ ಮಂಜುನಾಥ್ ರವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಈ ವೇಳೆ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್, ದಂಡಿನಶಿವರ ಪಿ.ಎಸ್.ಐ ಕೆ.ವಿ.ಮೂರ್ತಿ, ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಶಶಿಧರ್, ತಾಲ್ಲೂಕು ಸಹಾಯಕ ಅಗ್ನಿ ಶಾಮಕ ಠಾಣಾಧಿಕಾರಿ ಚನ್ನಾಚಾರಿ ಮತ್ತು ಸಿಬ್ಬಂದಿಗಳು ಇದ್ದರು.
ವರದಿ -ನಾಗಭೂಷಣ್ ತುರುವೇಕೆರೆ