ತುರುವೇಕೆರೆ ತಾಲೂಕಿನ ತೊರೆಮಾವಿನಹಳ್ಳಿ ಗೇಟ್ ನಿಂದ ಆನೇಕೆರೆಯವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯ ಉದ್ದಕ್ಕೂ ದೊಡ್ಡ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿವೆ. ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರೆ ಎಲ್ಲರಿಗೂ ಖುಷಿ. ಆದರೆ ಈ ಭಾಗದಲ್ಲಿ ಓಡಾಡುವ ಮಂದಿ ಜೀವವನ್ನು ಕೈಲಿ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನದ ಸವಾರರಂತೂ ಈ ರಸ್ತೆಯ ಗಡಿ ದಾಟಿದರೆ ಸಾವನ್ನೇ ಗೆದ್ದು ಬಂದವದಂತೆ ಸಂತಸಪಡುತ್ತಾರೆ.

ರಸ್ತೆ ಹಾಳಾಗಿರುವ ಸಂಬಂಧ ಸಾಕಷ್ಟು ಸಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಿಳಿಸಿದರೂ ಸಹ ಯಾವುದೇ ಪ್ರಯೋಜವಾಗಿಲ್ಲ. ರಾತ್ರಿ ವೇಳೆಯಂತೂ ಸಂಚರಿಸುವುದು ಅಸಾಧ್ಯದ ಮಾತಾಗಿದೆ. ಸಾಕಷ್ಟು ಅನಾಹುತಗಳು ಸಂಭವಿಸುತ್ತಲೇ ಇದೆ. ಆದರೂ ಸಹ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆಂದು ತೊರೆಮಾವಿನಹಳ್ಳಿಯ ನಿವಾಸಿ ಡಾ.ಚಂದ್ರಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಮಳೆಗಾಲ ಕಳೆದ ನಂತರವಾದರೂ ರಸ್ತೆಯನ್ನು ದುರಸ್ಥಿಪಡಿಸದಿದ್ದಲ್ಲಿ ತೊರೆಮಾವಿನಹಳ್ಳಿ, ತೊರೆಮಾವಿನಹಳ್ಳಿ ಮಾಳೆ, ಆನೇಕೆರೆಯ ಗ್ರಾಮಸ್ಥರೊಂದಿಗೆ ದಾರಿಯ ಮಧ್ಯೆ ಸಸಿಗಳನ್ನು ನೆಟ್ಟು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಡಾ.ಚಂದ್ರಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವರದಿ – ಎಸ್. ನಾಗಭೂಷಣ್