ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಟಾಟಾ ಏಸಿ ನಡುವೆ ಡಿಕ್ಕಿ ಸಂಭವಿಸಿದೆ. ಅದೃಷ್ಠವಶಾತ್ ಭಾರಿ ಅನಾಹುತ ತಪ್ಪಿದೆ.
ಬೆಳಗ್ಗೆ 6 ಗಂಟೆಯ ವೇಳೆಗೆ ತಿಪಟೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಮತ್ತು ತಿಪಟೂರು ಕಡೆಯಿಂದ ಪಟ್ಟಣಕ್ಕೆ ಬರುತ್ತಿದ್ದ ಹಾಲಿನ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಹಾಲಿನ ವಾಹನ ತುರ್ತು ಸೇವೆಗಾಗಿ ವೇಗವಾಗಿ ಬರುತ್ತಿತ್ತು. ಅತ್ತ ಕೆ ಎಸ್ ಆರ್ ಟಿ ಸಿ ಬಸ್ ದಬ್ಬೇಘಟ್ಟ ರಸ್ತೆಯ ವೃತ್ತದಲ್ಲಿ ಬೆಂಗಳೂರು ಮಾರ್ಗದತ್ತ ಮುಖ ಮಾಡುತ್ತಿತ್ತು. ಆ ವೇಳೆ ಅಪಘಾತ ಸಂಭವಿಸಿದೆ.
ಬಸ್ ಮತ್ತು ಟಾಟಾ ಏಸಿ ನಡುವೆ ನಡೆದ ಡಿಕ್ಕಿಯ ರಭಸಕ್ಕೆ ಟಾಟಾ ಏಸಿ ರಸ್ತೆಯ ಪಕ್ಕದಲ್ಲಿಟ್ಟಿದ್ದ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಏರಿ ರಾಘವೇಂದ್ರ ಭವನದ ಬಾಗಿಲಿನ ಮುಂದೆ ನಿಂತಿದೆ. ವಾಸ್ತವವಾಗಿ ಪ್ರತಿದಿನ ಹೋಟೆಲ್ ಮುಂಭಾಗ ಹತ್ತಾರು ಮಂದಿ ಕಾಫಿ ತಿಂಡಿಗಾಗಿ ನಿಂತಿರುತ್ತಿದ್ದರು. ಅದೃಷ್ಠವಶಾತ್ ಇಂದು ಯಾರೂ ನಿಂತಿರಲಿಲ್ಲ ಎಂದು ತಿಳಿದುಬಂದಿದೆ. ಆದರೆ ಟಾಟಾ ಏಸಿ ಚಾಲಕನ ಕಾಲು ಮುರಿದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಿಪಟೂರು ಮಾರ್ಗ, ದಬ್ಬೇಘಟ್ಟ ಸರ್ಕಲ್ ನಲ್ಲಿ ಹೆಚ್ಚು ಜನ ಸಂದಣಿ ಮತ್ತು ವಾಹನ ಸಂಚಾರ ಇದೆ. ರಾಘವೇಂದ್ರ ಭವನದ ಆವರಣದಲ್ಲಿ ಪಾದಚಾರಿಗಳು ಮತ್ತು ವಾಹನಗಳಿಗೆಂದು ನಿಲ್ಧಾಣ ಮಾಡಲಾಗಿದೆ. ಅದಕ್ಕಾಗಿ ಕಬ್ಬಿಣದ ಬೇಲಿಗಳನ್ನೂ ನಿರ್ಮಿಸಲಾಗಿದೆ. ಅದರೆ ಹಲವಾರು ಮಂದಿ ದ್ವಿಚಕ್ರವಾಹನಗಳು, ಕಾರು, ಇನ್ನಿತರೆ ದೊಡ್ಡ ಗಾತ್ರದ ವಾಹನಗಳನ್ನು ಅಲ್ಲದೇ ಹಲವಾರು ಮಾರಾಟಗಾರರು ತಮ್ಮ ವಾಹನಗಳನ್ನು ರಸ್ತೆಯ ಪಕ್ಕದಲ್ಲೇ ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ದಬ್ಬೇಘಟ್ಟ ವೃತ್ತದಿಂದ ಬೆಂಗಳೂರು ರಸ್ತೆಗೆ ತೆರಳುವ ವಾಹನಗಳನ್ನು ತಿರುಗಿಸಲು ತೊಂದರೆಯಾಗುತ್ತಿದೆ. ಇದರಿಂದಾಗಿ ದಿನೇ ದಿನೇ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಇದನ್ನು ತಪ್ಪಿಸುವ ಸಲುವಾಗಿ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಕಟ್ಟಾಜ್ಞೆ ಹೊರಡಿಸಬೇಕಿದೆ. ಆಗಷ್ಠೇ ಅಪಘಾತಗಳು ನಿಯಂತ್ರಣಕ್ಕೆ ಬರುತ್ತವೆ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ. ಈ ಅಪಘಾತ ಪ್ರಕರಣದಲ್ಲಿ ಎರಡೂ ವಾಹನಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.