ದಲಿತ ಸಮುದಾಯದ ಹೋರಾಟಕ್ಕೆ ಮಣಿದಿರುವ ತುಮಕೂರು ಜಿಲ್ಲೆಯ ತುರುವೇಕೆರೆಯ ಅಧಿಕಾರಿಗಳು, ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಒತ್ತುವರಿ ಜಾಗವನ್ನು ಕಬಳಿಸಿ ಕಟ್ಟಿದ್ದ ಕಟ್ಟಡವನ್ನು ವಶಕ್ಕೆ ಪಡೆದುಕೊಂಡು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಪಟ್ಟಣ ಪಂಚಾಯಿತಿಯ ವಿರುದ್ಧ ಸುಮಾರು ಮೂರ್ನಾಲ್ಕು ವರ್ಷಗಳಿಂದ ಕಟ್ಟಡ ತೆರವಿಗೆ ನಡೆಯುತ್ತಿದ್ದ ಹೋರಾಟಕ್ಕೆ ಸುಖಾಂತ್ಯ ಕಂಡಿದೆ.
ಅಕ್ರಮ ತರವಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಛಲವಾದಿ ಮಹಾಸಭಾ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಪಟ್ಟಣ ಪಂಚಾಯಿತಿಯ ಮುಂಭಾಗ ಎರಡು ದಿನಗಳ ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಕಟ್ಟಡ ತೆರವಿಗೆ ಮೀನಮೇಷ ಎಣಿಸುತ್ತಿದ್ದ ಕಾರಣ ಮುಖ್ಯ ಅಧಿಕಾರಿಗಳ ನಡೆಖಂಡಿಸಿ ಧರಣಿಯನ್ನು ಕೈಗೊಳ್ಳಲಾಗಿತ್ತು.

ಇದು ಕೈ ಮೀರಿ ಹೋಗುವ ಹೊತ್ತಿಗೆ ರಾಜ್ಯಮಟ್ಟದ ಸುದ್ದಿಯಾಗುವ ಹಿನ್ನೆಲೆ ಹೊಂದಿದ್ದ ಈ ಪ್ರತಿಭಟನೆಯನ್ನು ಕೈ ಬಿಡುವಂತೆ ತಾಲೂಕು ದಂಡಾಧಿಕಾರಿ ಎ ಎನ್ ಕುಂಞಿ ಅಹಮದ್ ರವರು ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನವನ್ನು ಸುಮಾರು ಎರಡರಿಂದ ಮೂರು ಬಾರಿ ಮಾಡಿದರೂ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ ಎಂಬ ಸಂದೇಶವನ್ನು ನೀಡಿದ್ದರು ಮತ್ತು ಒತ್ತುವರಿ ಕಟ್ಟಡ ಜಾಗವನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ತಹಶೀಲ್ದಾರ್ ಅವರೇ ಹೊರುವುದಾದರೆ ಕೈಬಿಡುತ್ತೇವೆ ಎಂದು ಬೇಡಿಕೆ ಇಟ್ಟಿದ್ದರು.
ಕೊನೆಗೂ ಕಟ್ಟಡವನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಹೊತ್ತ ತಹಶೀಲ್ದಾರ್ ಕುಂಞಿ ಅಹಮದ್ ಅವರು ಕಾನೂನಾತ್ಮಕವಾಗಿ ಬರುವ ಅಡೆತಡೆಗಳನ್ನೆಲ್ಲ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಧಿಕಾರಿಗಳ ಹಾಗೂ ವಕೀಲರ ಚರ್ಚಿಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದರು.
ಬೆಳಗಿನ ಜಾವ ನಾಲ್ಕು ಗಂಟೆಯ ಸಮಯದಲ್ಲಿ ಬಿಗಿ ಬಂದೋಬಸ್ತ್‌ನೊಂದಿಗೆ ಕೆಎಸ್‌ಆರ್‌ಪಿ ತುಕಡಿ,ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ತಾಲೂಕು ಆಡಳಿತದ ಸಿಬ್ಬಂದಿ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರ್ ಗಳು, ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರೊಂದಿಗೆ ಕಾರ್ಯಾಚರಣೆಗೆ ನಡೆಸಲು ಮುಂದಾದಾಗ, ಅಕ್ರಮವಾಗಿ ಕಟ್ಟಿದ್ದ ಕಟ್ಟಡದ ಮಾಲೀಕರ ಬೆಂಬಲಿಗರು ತಡೆಯುವ ವಿಫಲ ಪ್ರಯತ್ನವನ್ನು ಮಾಡಿದ್ದರು.
ಇದ್ಯಾವುದನ್ನು ಲೆಕ್ಕಿಸದ ತಹಶೀಲ್ದಾರ್ ಎ ಎನ್ ಅಹಮದ್‌ರವರು ಕೊನೆಗೂ ಕಟ್ಟಡದ ಮೆಟ್ಟಿಲನ್ನು ಒಡೆಸುವಲ್ಲಿ ಯಶಸ್ವಿಯಾದರು. ಈ ಕಾರ್ಯಾಚರಣೆಗೆ ಇಬ್ಬರು ಡಿ ವೈ ಎಸ್ ಪಿ ಮೂರರಿಂದ ನಾಲ್ಕು ಜನ ಸರ್ಕಲ್ ಇನ್ಸ್ಪೆಕ್ಟರ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮುಖ್ಯಪೇದೆ ಗಳು ಮತ್ತು ಪೇದೆಗಳನ್ನು ಬಳಸಿಕೊಂಡಿದ್ದರು. ಕಟ್ಟಡವನ್ನು ಎಲೆಕ್ಟ್ರಿಕ್ ಕಟ್ಟರ್‌ನಿಂದ ಕಟ್ ಮಾಡಿ ಜೆಸಿಬಿ ಯಂತ್ರದ ಮೂಲಕ ಕೆಡವಿದರು.
ಅಂಬೇಡ್ಕರ್ ಭವನ ಜಾಗದಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ಸ್ವಯಂ ಜವಾಬ್ದಾರಿಯನ್ನು ಹೊತ್ತ ತಹಶೀಲ್ದಾರ್ ಅವರನ್ನು ಸಂಘಟನೆಯ ಹೋರಾಟಗಾರರು ಅಭಿನಂದನೆ ಸಲ್ಲಿಸಿದ್ದಾರೆ.
ಹಣಬಲ ಅಧಿಕಾರದ ಬಲ ಒಂದೆಡೆಯಾದರೆ, ಅದರ ಎದುರು ಸಂಘಟನೆಯ ಬಲ ಹೊತ್ತು ನ್ಯಾಯಪರ ನಿಂತ ಸಂಘಟನಾಕಾರರು ಕೊನೆಗೂ ಜಯ ಪಡೆದಿದ್ದಾರೆ
ವರದಿ : ಸುರೇಶ್ ಬಾಬು ಎಂ, ತುರುವೇಕೆರೆ
