ತುರುವೇಕೆರೆ ತಾಲೂಕಿನ ದೊಂಬರನಹಳ್ಳಿಯ ಗ್ರಾಮದೇವತೆ ಮುತ್ತಿನಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿ ಬಲಿ ಹಾಗೂ ಗಾವು ಸಿಗಿತ ಮಾಡದಂತೆ ಸಾರ್ವಜನಿಕರು ಮಾಡಿಕೊಂಡ ಮನವಿಯ ಮೇರೆಗೆ ಗ್ರಾಮದಲ್ಲಿ ಪೋಲಿಸರ ಸರ್ಪಗಾವಲು ಹಾಕಲಾಗಿದೆ ಎಂದು ತಹಸೀಲ್ದಾರ್ ಎನ್.ಎ.ಕುಂಇ ಅಹಮದ್ ತಿಳಿಸಿದ್ದಾರೆ.
ಧಾರ್ಮಿಕ ಸ್ಥಳಗಳಲ್ಲಿ ಪ್ರಾಣಿಬಲಿ ನಿಷೇದ ಕಾಯ್ದೆ ಅಡಿ ಜಾತ್ರೆಯ ಆಯೋಜಕರಿಗೆ ಮತ್ತು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿರುವ ತಹಸೀಲ್ದಾರ್ ರವರು ಗ್ರಾಮದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕೋಣನ ಬಲಿ ಮತ್ತು ಕುರಿ ಅಥವಾ ಮೇಕೆಯ ಕತ್ತನ್ನು ಬಾಯಿಯಿಂದ ಸಿಗಿಯುವ (ಗಾವು) ಕ್ರಮವು ಕಾನೂನು ಬಾಹಿರವಾಗಿರುವುದರಿಂದ ಈ ಮೌಢ್ಯಾಚರಣೆ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ಜಾತ್ರಾ ಮಹೋತ್ಸವವು ಏ 22 ರಿಂದ 24 ರ ವರೆಗೆ ನಡೆಯಲಿದೆ.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯ ನಾಗೊಂಡನಹಳ್ಳಿ ಗ್ರಾಮದ ಎಚ್.ಸಿ.ಮುರುಳಿ ಎಂಬುವವರು ತುಮಕೂರು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ದೊಂಬರನಹಳ್ಳಿಯಲ್ಲಿ ನಡೆಯುವ ಮೌಢ್ಯಾಚರಣೆ ಬಗ್ಗೆ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಮತ್ತು ಪೋಲಿಸ್ ವರಿಷ್ಠಾಧಿಕಾರಿಗಳು ಸ್ಥಳೀಯ ಪೋಲಿಸರು ಮತ್ತು ತಹಸೀಲ್ದಾರ್ ರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ತಹಸೀಲ್ದಾರ್ ಎನ್. ಎ.ಕುಂಇ ಅಹಮದ್ ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಮಕ್ಕಳು ಸಹ ಭಾಗವಹಿಸುವರಿದ್ದಾರೆ. ಅವರಿಗೆ ಪ್ರಾಣಿ ಹಿಂಸೆ ಸಹಿಸುವುದು ಅಸಾಧ್ಯ. ಅಲ್ಲದೇ ದೇವರ ಮುಂದೆ ಪ್ರಾಣಿಬಲಿ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಯಾವುದೇ ಕಾರಣಕ್ಕೂ ಪ್ರಾಣಿವಧೆ ಮಾಡಬಾರದೆಂದು ಆದೇಶಿಸಿದ್ದಾರೆ. ಕೆಲವು ವರ್ಷಗಳ ಕೆಳಗೆ ಸಾಕಷ್ಟು ಪೋಲಿಸ್ ಬಂದೋಬಸ್ತ್ ಏರ್ಪಡಿಸಿದ್ದರೂ ಸಹ ಜನಪ್ರತಿನಿಧಿಗಳಿಂದ ಒತ್ತಡ ತಂದು ಪೋಲಿಸರ ಸಮ್ಮುಖವೇ ಪ್ರಾಣಿಬಲಿ ಮಾಡಲಾಗಿದೆ ಎಂದೂ ಸಹ ದೂರುದಾರರು ದೂರಿದ್ದಾರೆ. ಹಾಗಾಗಿ ಈ ಬಾರಿ ಸಿಪಿಐ ಲೋಹಿತ್, ಎಸೈ ಗಳಾದ ಸಂಗಮೇಶ್ ಮೇಟಿ, ಮೂರ್ತಿ ಯವರ ನೇತೃತ್ವದಲ್ಲಿ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಿ ಪ್ರಾಣಿಬಲಿ ಆಗದಂತೆ ತಡೆಯಲಾಗುವುದು ಎಂದು ತಹಸೀಲ್ದಾರ್ ಎನ್.ಎ. ಕುಂಇ ಅಹಮದ್ ತಿಳಿಸಿದ್ದಾರೆ.