ವಿದ್ಯುತ್ ತಂತಿ ಕಡಿದು ಬಿದ್ದು ಇಬ್ಬರು ಆಟೋ ರಿಕ್ಷಾ ಚಾಲಕರು ಸಾವನ್ನಪ್ಪಿರುವ ಘಟನೆ ಮಂಗಳೂರು ನಗರದ ರೊಸಾರಿಯೋ ಬಳಿ ಬುಧವಾರ ರಾತ್ರಿ ನಡೆದಿದ್ದು ಗುರುವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮೃತರನ್ನು ಹಾಸನದ ಅಲ್ಲೂರು ನಿವಾಸಿ ರಾಜು ಮತ್ತು ಪುತ್ತೂರಿನ ರಾಮಕುಂಜ ನಿವಾಸಿ ದೇವರಾಜ್ ಗೌಡ ಎಂದು ಗುರುತಿಸಲಾಗಿದೆ.
ಇಬ್ಬರೂ ಕೂಡಾ ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಕಾಂಪೌಂಡ್ ಬಿದ್ದು ನಾಲ್ವರು ಮೃತ್ಯು: ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ
ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಜೋರಾಗಿ ಮಳೆ ಸುರಿಯುತ್ತಿದ್ದಾಗ ಪಕ್ಕದ ವಿದ್ಯುತ್ ಕಂಬದಿಂದ ಒಂದು ತಂತಿ ಕೆಳಗೆ ಬಿದ್ದಿದೆ.
ಈ ವೇಳೆ ರಾಜು ತನ್ನ ಕೊಠಡಿಯಿಂದ ಹೊರಬಂದಿದ್ದು ಅವರಿಗೆ ತಂತಿ ತಗುಲಿ ವಿದ್ಯುತ್ ಶಾಕ್ ಹೊಡೆದಿದೆ. ರಾಜು ಕೂಗು ಕೇಳಿ ದೇವರಾಜ್ ತಕ್ಷಣವೇ ಹೊರಬಂದು ಗೋಣಿ ಚೀಲದ ಮೂಲಕ ಆತನನ್ನು ರಕ್ಷಿಸುವ ಯತ್ನ ಮಾಡಿದ್ದಾರೆ. ಆದರೆ ಇಬ್ಬರೂ ಸಾವನ್ನಪ್ಪಿದ್ದಾರೆ.