ಈಜಾಡಲು ಕಾಗಿಣಾ ನದಿಗೆ ಇಳಿದಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೇಡಂ ತಾಲೂಕಿನ ಕುಕ್ಕುಂದಾ ಗ್ರಾಮದ ಬಳಿ ನಡೆದಿದೆ.
ಅಬ್ದುಲ್ ರೆಹಮಾನ್ (17) ಹಾಗೂ ಮೊಹಮ್ಮದ್ ಕೈಫ್ (16) ಮೃತ ಬಾಲಕರು ಎಂದು ಗುರುತಿಸಲಾಗಿದೆ.
ಈಜಾಡಲು ನದಿಗೆ ಇಳಿದಿದ್ದ ಅಬ್ದುಲ್ ರೆಹಮಾನ್ ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದಾಗ ಆತನ ರಕ್ಷಣೆಗೆ ನೀರಿಗೆ ಹಾರಿದ ಮೊಹಮ್ಮದ್ ಕೈಫ್ ಸಹ ನೀರಿನಲ್ಲಿ ಮುಳುಗಿದ್ದಾನೆ. ನೀರಿನಲ್ಲಿ ಮುಳುಗಿದ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಮೀನುಗಾರರು ಬಾಲಕರ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.