ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಎಂಬ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಹಲ್ಲೆಗೊಳಗಾಗಿರುವ ಓರ್ವ ಸಂತ್ರಸ್ತ ಯುವಕನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರುಗಳು ಕಟಕೋಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಹಲ್ಲೆ ಮಾಡಿದವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಹಲ್ಲೆಗೊಳಗಾಗಿರುವ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ. ಎರಡೂ ಸಮುದಾಯದ ಮಂದಿ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಿಸಿದ್ದಾರೆ.
ಈರಣ್ಣ ವಿಠಲ ನಾಯ್ಕರ (18) ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ (19) ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಆಗಸ್ಟ್ 5ರಂದು ಈ ಹಲ್ಲೆ ಘಟನೆ ನಡೆದಿರುವುದಾಗಿ ತಿಳಿದು ಬಂದಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬಳಿಕ ಆ.11ರಂದು ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಲಿಂಗಾಯತ ಸಮಾಜದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ, ಪ್ರದೀಪ ಈರಣ್ಣ ಪಾಕನಟ್ಟಿ, ಮಹಾಂತೇಶ ಲಕ್ಷ್ಮಣ ಪಾಕನಟ್ಟಿ, ಸಚಿನ್ ದಾನಪ್ಪ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಂಗಪ್ಪ ನಿಂಗಪ್ಪ ಪಾಕನಟ್ಟಿ ಅವರ ವಿರುದ್ಧ ಕೊಲೆ ಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಕಟಕೋಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ಸಂಬಂಧ ವಿಠಲ ಲಕ್ಷ್ಮಣ ನಾಯ್ಕರ ಎನ್ನುವವರು ದೂರು ನೀಡಿದ್ದಾರೆ. ದೂರಿನಲ್ಲಿ, “ಆರೋಪಿಗಳು ಹಾಗೂ ನಮ್ಮ ಜಮೀನು ಅಕ್ಕಪಕ್ಕದಲ್ಲಿವೆ. ಜಮೀನಿಗೆ ಹೋಗಲು ದಾರಿ ಏಕೆ ಬಿಡುವುದಿಲ್ಲ ಎಂದು ಜಗಳ ತೆಗೆದು ಬಳಿಕ ಆರೋಪಿಗಳು ಯುವಕರನ್ನು ಮರಕ್ಕೆ ಕಟ್ಟಿ ಹೊಡೆದಿದ್ದಾರೆ. ಕುಡಗೋಲು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಅಲ್ಲದೇ, ಕೀಳು ಪದ ಬಳಸಿ ಜಾತಿ ನಿಂದನೆ ಮಾಡಿದ್ದಾರೆ’ ಎಂದು ಉಲ್ಲೇಖಿಸಿದ್ದಾರೆ.
ಈ ದೂರಿಗೆ ಪ್ರತಿ ದೂರು ನೀಡಿರುವ ಲಿಂಗಾಯತ ಸಮುದಾಯದ ರಮೇಶ್ ಲಕ್ಷ್ಮಣ್ ಪಾಕನಟ್ಟಿ ಎಂಬುವವರು, “ಈ ಘಟನೆ ಜಮೀನು ವಿವಾದಕ್ಕೆ ಸಂಬಂಧಿಸಿಲ್ಲ. ಈ ಇಬ್ಬರೂ ಯುವಕರು ನನ್ನ 14 ವರ್ಷದ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದರು. ಆಕೆ ಶಾಲೆಗೆ ಹೋಗುವಾಗ ಬರುವಾಗ ಬೈಕ್ ಮೂಲಕ ಬೆನ್ನಟ್ಟಿ ಬರುತ್ತಿದ್ದರು. ಪ್ರೀತಿಸುವಂತೆ ಕಾಡಿಸುತ್ತಿದ್ದರು. ಮೊಬೈಲ್ ನಂಬರ್ ಕೊಡು, ಇಲ್ಲದಿದ್ದರೆ ಸುಮ್ಮನೇ ಬಿಡುವುದಿಲ್ಲವೆಂದು ಬೆದರಿಕೆ ಹಾಕುತ್ತಿದ್ದರು” ಎಂದು ದೂರಿನಲ್ಲಿ ಉಲ್ಲೇಖ ಮಾಡಿರುವುದಾಗಿ ತಿಳಿದುಬಂದಿದೆ.
ಎರಡೂ ಕಡೆಯ ದೂರನ್ನು ಸ್ವೀಕರಿಸಿರುವ ಕಟಕೋಳ ಪೊಲೀಸರು, ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
