ಪ್ರಯಾಗರಾಜ್ನಲ್ಲಿ ನಡೆಯುತ್ತಿರಿವ ಮಹಾ ಕುಂಭಮೇಳಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದ ವಾಹನ ಗುಜರಾತ್ ರಾಜ್ಯದ ಪುರ್ಬಂದರ್ ಸಮೀಪ ಟಿಪ್ಪರ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಪಟ್ಟಣದ ಐಯಲ್ ಮಿಲ್ ಮಾಲೀಕ ವಿಶ್ವನಾಥ ಅವಜಿ(55) ಹಾಗೂ ಪಿಗ್ನಿ ಏಜೆಂಟರ್ ಮಲ್ಲಿಕಾರ್ಜುನ್ ಸದ್ದಲಗಿ(40) ಮೃತಪಟ್ಟವರು.
ಚಾಲಕ ಸಮೇತ ವಾಹನದಲ್ಲಿ ಒಟ್ಟು 17 ಮಂದಿ ಪ್ರಯಾಣಿಸುತ್ತಿದ್ದರು. ಮೂವರ ಸ್ಥತಿ ಗಂಭೀರವಾಗಿದೆ, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳಿಗೆ ಪುರ್ಬಂದರ್ ಸರ್ಕಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕನು ನಿದ್ದೆಯ ಮಂಪಿನಲ್ಲಿದ್ದಾಗ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಅಪಘಾತದ ಘಟನೆಯಿಂದ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ.
ಸಂಸದ ರಮೇಶ ಜಿಗಣಗಿ ಗುಜರಾತ್ ರಾಜ್ಯದ ಸಂಸದರೊಂದಿಗೆ ಮಾತನಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ಸಹಾಯ ಮಾಡಿದ್ದಾರೆ. ಗುಜರಾತ್ ನಿಂದ ಮೃತರ ಶರೀರವನ್ನು ಆ್ಯಂಬುಲೆನ್ಸ್ ಗಳಲ್ಲಿ ತರಲಾಗುತ್ತಿದ್ದು, 25 ಗಂಟೆಗಳ ನಂತರ ಚಡಚಣ ತಲುಪಲಿದೆ ಎಂದು ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಮೃತರಿಗೆ ಸಂಸದ ರಮೇಶ್ ಜಿಗಜಣಗಿ, ವಿಠಲ ಕಟಕದೊಂಡ, ಡಾ. ಗೋಪಾಲ ಕಾರಜೊಳ ಸಂತಾಪ ವ್ಯಕ್ತಪಡಿಸಿದ್ದಾರೆ.