ಕಾಡುಕೋಣ ದಾಳಿಯಿಂದ ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಹೋಬಳಿ ಸಮೀಪ ಖಾಂಡ್ಯದ ಬಿದರೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ಮುತ್ತೋಡಿ ಅಭಯಾರಣ್ಯದ ಅಂಚಿನಲ್ಲಿರುವ ಬಿದರೆ ಗ್ರಾಮದ ತೋಟವೊಂದರಲ್ಲಿ ಕೂಲಿ ಕಾರ್ಮಿಕರು ಕೆಲಸ ಮಾಡುವಾಗ ಏಕಾಏಕಿ ಕಾಡುಕೋಣ ಮಧ್ಯಾಹ್ನ 12:30ರ ವೇಳೆಯಲ್ಲಿ ದಾಳಿ ನಡೆಸಿದೆ.
ಅಸ್ಸಾಂ ಮೂಲದ ಓರ್ವ ವ್ಯಕ್ತಿ ಹಾಗೂ ಸ್ಥಳೀಯ ನಿವಾಸಿ ರವಿ ಪೂಜಾರಿ (60) ವ್ಯಕ್ತಿಯ ಮೇಲೆ ಕಾಡುಕೋಣ ದಾಳಿ ಮಾಡಿದೆ. ದಾಳಿ ಮಾಡಿದ ವೇಳೆ ಕಾರ್ಮಿಕರು ಓಡಿಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ದಾಳಿಯಿಂದ ಇಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಮುತ್ತೊಡಿ ಅರಣ್ಯ ಇಲಾಖೆಯ ರೇಂಜರ್ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
ಅಸ್ಸಾಂ ಮೂಲದ ವ್ಯಕ್ತಿ ಹಾಗೂ ರವಿ ಪೂಜಾರಿಯವರು ಬಾಳೆಹೊನ್ನೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಪಡೆದಿದ್ದಾರೆ. ಅಸ್ಸಾಂ ಮೂಲದವರು ಪ್ರಥಮ ಚಿಕಿತ್ಸೆ ಪಡೆದು ರಾತ್ರಿ ಮನೆಗೆ ಮರಳಿದ್ದಾರೆ. ಗಂಭೀರ ಗಾಯವಾಗಿರುವ ರವಿ ಪೂಜಾರಿ ಅವರು ಹೆಚ್ಚಿನ ಚಿಕಿತ್ಸೆ ಪಡೆಯಲು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಲಯ ಅರಣ್ಯ ಇಲಾಖೆ ಅಧಿಕಾರಿ ಈ ದಿನ.ಕಾಮ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಾಲು-ಸಾಲು ರಜೆ ಹಿನ್ನೆಲೆ: ಮುಳ್ಳಯ್ಯನಗಿರಿಯಲ್ಲಿ ಭಾರೀ ಟ್ರಾಫಿಕ್ ಜಾಮ್!
ಕಾಡುಕೋಣ ದಾಳಿ ಮಾಡಿರುವುದರಿಂದ ಸರ್ಕಾರದಿಂದ ಸಿಗುವ ಪರಿಹಾರವನ್ನು ನೀಡಲು ಶ್ರಮಿಸುವುದಾಗಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಇದೇ ವೇಳೆ ಭರವಸೆ ನೀಡಿದ್ದಾರೆ.
