ಕೌಟುಂಬಿಕ ಸಮಸ್ಯೆಯಿಂದಾಗಿ ತುಂಬಿ ಹರಿಯುತ್ತಿದ್ದ ದೇವಣಗಾಂವ ಸೇತುವೆ ಮೇಲಿನಿಂದ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಲು ನದಿಗೆ ಧುಮುಕಿದ್ದ ಆಕೆ ಪತಿ ಸೇರಿ ಸಂಬಂಧಿಕರೊಬ್ಬರು ನೀರು ಪಾಲಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಅಫಜಲಪುರ ಮತ್ತು ಆಲಮೇಲ ತಾಲೂಕಿನ ನಡುವೆ ಇರುವ ಭೀಮಾ ನದಿಯ ದೇವಣಗಾಂವ ಸೇತುವೆ ಮೇಲಿಂದ ಮಂಗಳವಾರ ಸಂಜೆ ಲಕ್ಷ್ಮಿ (28) ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯ ರಕ್ಷಣೆಗಾಗಿ ನದಿಗೆ ಧುಮುಕಿದ್ದ ಪತಿ ಶಿವಕುಮಾರ (36) ಹಾಗೂ ಸಹೋದರ ಸಂಬಂಧಿ ರಾಜು ಅಂಕಲಗಿ (39) ನೀರಿನ ರಭಸಕ್ಕೆ ಸಿಕ್ಕಿ ದಡಕ್ಕೆ ಬರಲು ಸಾಧ್ಯವಾಗದೆ ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಇಬ್ಬರೂ ನಾಪತ್ತೆಯಾಗಿದ್ದರು.
ಮಹಿಳೆಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆಂದು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಸೊನ್ನ ಬ್ಯಾರೇಜ್ ಹೊರ ಹರಿವು ಗೇಟ್ ಬಂದ್ ಮಾಡಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಕತ್ತಲಾಗಿರುವುದರಿಂದ ಮಂಗಳವಾರ ರಾತ್ರಿ ಕಾರ್ಯಾಚರಣೆ ಕೈಬಿಟ್ಟು ಬುಧವಾರ ಬೆಳಗಿನ ಜಾವ ಪುನಃ ಕಾರ್ಯಾಚರಣೆ ಆರಂಭಿಸಿದಾಗ ಬೆಳಿಗ್ಗೆ 6.30 ಗಂಟೆ ಸುಮಾರಿಗೆ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.
ಮೃತ ದೇಹ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತಪಟ್ಟ ರಾಜಶೇಖರ ಮತ್ತು ಶಿವಕುಮಾರ ಇಬ್ಬರು ನೀರಿನಲ್ಲಿ ಮುಳುಗುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ರಾಜು ಅಂಕಲಗಿ ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ, ಶಿವಕುಮಾರ ಗುಡ್ಡಡಗಿ ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ನಿವಾಸಿಯಾಗಿದ್ದಾರೆ. ಮೃತ ಶಿವಕುಮಾರ ಅವರಿಗೆ ಇಬ್ಬರು ಜನ ಗಂಡು ಮಕ್ಕಳು, ರಾಜುಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗು ಇರುವುದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹೊಂದಾಣಿಕೆ ರಾಜಕಾರಣ ಮತ್ತು ಪಾದಯಾತ್ರೆ ಪಾಲಿಟಿಕ್ಸ್
ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತನಿಖೆ ಮಂದುವರಿದಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಭೇಟಿ ನೀಡಿ ಕುಟುಂಬಸ್ಥರು ಹಾಗೂ ಪೊಲೀಸರಿಂದ ಪ್ರಾಥಮಿಕ ಮಾಹಿತಿ ಪಡೆದರು.