ಉಡುಪಿ | ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ರೂ. ವಂಚನೆ; ಆರೋಪ

Date:

Advertisements

ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಗುಜರಿ ಟೆಂಡರ್‌ನಲ್ಲಿ ಸುಮಾರು 14 ಕೋಟಿ ರೂ. ಅವ್ಯವಹಾರ ನಡೆದಿದೆ. ಅವ್ಯವಹಾರದ ಹಿಂದೆ ದೊಡ್ಡ ಜಾಲವೇ ಇದೆ. ಇದರಲ್ಲಿ, ಹಿಂದಿನ ಬಿಜೆಪಿ ಸರ್ಕಾರ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ಕೈವಾಡವಿದೆ ಎಂದು ರೈತರು ಹಾಗೂ ಸಾಮಾಜಿಕ ಕಾರ್ಯಕರ್ತರು ಆರೋಪಿಸಿದ್ದಾರೆ.

ಇತ್ತೀಚೆಗೆ ಕಾರ್ಖಾನೆಯ ವಾರ್ಷಿಕ ಮಹಾಸಭೆಯ ವೇಳೆ ರೈತರು ಸಭೆಗೆ ಹಾಜರಾಗದಂತೆ ತಡೆಯುವ ನಿಟ್ಟಿನಲ್ಲಿ ಕಾರ್ಖಾನೆಯ ಪ್ರಸ್ತುತ ಅಧ್ಯಕ್ಷರು ಬಾಡಿಗೆ ಗೂಂಡಾಗಳನ್ನು ಇಟ್ಟಿಕೊಂಡಿದ್ದಾರೆ. ಅವರ ಭ್ರಷ್ಠಾಚಾರವನ್ನು ಪ್ರಶ್ನಿಸಬಾರದು ಎಂಬ ಉದ್ದೇಶದಿಂದ ಗೂಂಡಾಗಳನ್ನು ಇಟ್ಟುಕೊಂಡು ದುಂಡಾವರ್ತನೆ ತೂರುತ್ತಿದ್ದಾರೆ. ಭ್ರಷ್ಟಾಚಾರದ ಮೂಲಕ ಜಿಲ್ಲೆಯ ರೈತ ಸಮುದಾಯಕ್ಕೆ ಅವಮಾನ ಮಾಡಲಾಗುತ್ತಿದೆ ಎಂದು ಈ ಹಿಂದೆಯೇ ಕಾಂಗ್ರೆಸ್‌ ಮುಖಂಡರು ಆರೋಪಿಸಿದ್ದರು.

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ ಸಾಲ ನೀಡುವ ಮತ್ತು ಕಾರ್ಖಾನೆಯ ಕಾರ್ಮಿಕರಿಗೆ ವೇತನ ನೀಡುವ ಉದ್ದೇಶದಿಂದ 12 ಕೋಟಿ ರೂ. ಬಿಡುಗಡೆ ಮಾಡಿದ್ದರು. ಬಳಿಕ ಆಪರೇಷನ್ ಕಮಲದ ಮೂಲಕ ಬಂದ ಬಿಜೆಪಿ ಸರ್ಕಾರವು ಕಾರ್ಖಾನೆಯ ಪುನಶ್ಚೇತನಕ್ಕೆ ಅಥವಾ ರೈತರ ಏಳಿಗೆಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಕಾರ್ಖಾನೆಯನ್ನು ಮಾರಾಟ ಮಾಡಿ ಹಣ ಮಾಡುವ ಹುನ್ನಾರ ಹೆಣೆದಿತ್ತು. ಅದರಂತೆ ಗುಜರಿ ಮಾರಾಟದ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಭ್ರಷ್ಠಾಚಾರ ಮಾಡಿರುವುದು ಕಂಡುಬಂದಿದೆ. ಈ ಭ್ರಷ್ಠಾಚಾರದ ಹಿಂದೆ ದೊಡ್ಡ ಜಾಲವೇ ಇದ್ದು, ಬೃಹತ್ ಮಟ್ಟದ ಹೋರಾಟ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

Advertisements

ಆಡಳಿತ ಮಂಡಳಿಯಿಂದಲೇ ವಂಚನೆ

ದಿನಾಂಕ: 21.12.2021ರಂದು 41 ಜನ ಸದಸ್ಯರು ಸೇರಿ 10 ಜನ ಸದಸ್ಯರ ಆಡಳಿತ ಮಂಡಳಿಯನ್ನು ಅವಿರೋಧ ಆಯ್ಕೆ ಮಾಡಿದ್ದರು. ಆ ಆಡಳಿತ ಮಂಡಳಿಯು ಸಕ್ಕರೆ ಕಾರ್ಖಾನೆಯ ಪುನಶ್ಚೇತನ ಮಾಡುವ ಭರವಸೆಯನ್ನು ನೀಡಿತ್ತು. ಆದರೆ, ಅದೇ ಆಡಳಿತ ಮಂಡಳಿ ಕಾರ್ಖಾನೆಯ ತಳಪಾಯದ ಕಲ್ಲನ್ನು ಕಿತ್ತು ಮಾರಾಟ ಮಾಡಿರುವುದು ವಿಪರ್ಯಾಸ.

ಅಲ್ಲದೆ, ಕಾರ್ಖಾನೆಯ ಜಾಗದಲ್ಲಿರುವ ಬೆಲೆಬಾಳುವ ಮರಗಳನ್ನು ಕಡಿದು ಮಾರಾಟ ಮಾಡಲು ಟೆಂಡರ್ ಕರೆಯಲಾಗಿತ್ತು. ತಾಂತ್ರಿಕ ಕಾರಣಗಳಿಂದ ಟೆಂಡರ್‌ ಕಾರ್ಯಗತವಾಗಿಲ್ಲ. ತದನಂತರ ಕಾರ್ಖಾನೆಯ ಗುಜರಿ ಮಾರಾಟದ ಪ್ರಕ್ರಿಯೆಯನ್ನು ಶಾಸನಬದ್ಧವಾಗಿ ಇ-ಪ್ರಾಕ್ಯುರ್‌ಮೆಂಟ್ ಟೆಂಡರ್ ಮುಖೇನ ಮಾಡಬೇಕಿತ್ತು. ಅಥವಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾದ ಸೆಂಟ್ರಲ್ ಸ್ಕ್ಯಾಪ್ ಬೋರ್ಡ್ ಮುಖಾಂತರ ವಿಲೇವಾರಿ ಮಾಡಬೇಕಾಗಿತ್ತು. ಆದರೆ, ಸದರಿ ಆಡಳಿತ ಮಂಡಳಿಯವರು ಕಾನೂನುಗಳನ್ನು ಗಾಳಿಗೆ ತೂರಿ, ಸ್ವೇಚ್ಛಾಚಾರವಾಗಿ ಯಾವುದೇ ಸಂಬಂಧಪಟ್ಟ ಇಲಾಖೆಯ ಅನುಮೋಧನೆ ಪಡೆಯದೇ 4 ಜನರ ತಾಂತ್ರಿಕ ಸಮಿತಿಯನ್ನು ರಚಿಸಿಕೊಂಡು ಅವರಿಗೆ ಬೇಕಾದಂತೆ ಟೆಂಡರ್‌ ಕರೆದಿದ್ದಾರೆ. ಟೆಂಡರ್‌ನಲ್ಲಿ ಅತಿಹೆಚ್ಚು ಬಿಡ್‌ ದರ ನಮೂದಿಸಿದ ನ್ಯೂ ರಾಯಲ್ ಟ್ರೇಡರ್ಸ್‌ ಅವರಿಗೆ ಅನುಕೂಲವಾಗುವಂತೆ ಮತ್ತು ಸಕ್ಕರೆ ಕಾರ್ಖಾನೆಗೆ ವಂಚನೆ ಮಾಡಲು ಪೂರ್ವ ನಿಯೋಜಿತವಾಗಿ ಗುಜರಿಯ ಅಂದಾಜು ಮೌಲ್ಯವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪಗಳಿವೆ.

ಆಡಳಿತ ಮಂಡಳಿ ಹಾಗೂ ತಾಂತ್ರಿಕ ಸಮಿತಿಯವರು ಜಂಟಿಯಾಗಿ ನಡೆಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಟೆಂಡರ್ ಕಂಡೀಷನ್‌ನಲ್ಲಿ ಜಿಎಸ್‌ಟಿ ಹೊರತುಪಡಿಸಿ ಟೆಂಡರ್ ದರ ನಮೂದಿಸುವಂತೆ ತಿಳಿಸಲಾಗಿತ್ತು. ಆದರೆ, ಟೆಂಡರ್ ಪಡೆದ ಗುತ್ತಿಗೆದಾರರು ಕಾರ್ಖಾನೆಯೊಂದಿಗೆ ಒಪ್ಪಂದ ಕರಾರು ಪತ್ರವನ್ನು ನಿಗಧಿಪಡಿಸಿದ ಅವಧಿಯೊಳಗೆ ಮಾಡಿಕೊಳ್ಳದೇ ಅವಧಿ ಮೀರಿದ ನಂತರ ಟೆಂಡರ್ ಒಪ್ಪಂದ ಕರಾರುಪತ್ರ ಮಾಡಿಕೊಳ್ಳುವಾಗ ಜಿಎಸ್‌ಟಿಯನ್ನು ಟೆಂಡರ್ ದರದೊಂದಿಗೆ ಸೇರಿಸಿ ಟೆಂಡರ್ ಕಂಡೀಷನ್‌ಗೆ ವ್ಯತಿರಿಕ್ತವಾಗಿ ಒಪ್ಪಂದ ಪತ್ರ ಮಾಡಿಕೊಂಡಿರುವುದು ಕಂಡುಬಂದಿರುತ್ತದೆ ಎಂದು ಹೇಳಲಾಗಿದೆ.

ಟೆಂಡರ್ ಕಂಡೀಷನ್ ಪ್ರಕಾರ ಅತೀ ಹೆಚ್ಚು ಬಿಡ್ ಸಲ್ಲಿಸಿದ ಗುತ್ತಿಗೆದಾರ ಮೆ. ನ್ಯೂ ರಾಯಲ್ ಟ್ರೇಡರ್ಸ್ ರವರು ಗುಜರಿ ಎತ್ತುವಳಿ ಪ್ರಾರಂಭ ಮಾಡುವ ಮೊದಲು ಮುಂಗಡ ಠೇವಣಿಯಾಗಿ 5 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿಯನ್ನು ರಾಷ್ಟ್ರೀಕೃತ ಬ್ಯಾಂಕಿನಿಂದ ಪಡೆದು ಕಾರ್ಖಾನೆಗೆ ಸಲ್ಲಿಸಬೇಕಾಗಿತ್ತು. ಆದರೆ, ಆಡಳಿತ ಮಂಡಳಿಯವರು ಹಾಗೂ ತಾಂತ್ರಿಕ ಸಮಿತಿಯವರು ಜಂಟಿಯಾಗಿ ಟೆಂಡರ್ ಕಂಡೀಷನ್‌ಗೆ ವಿರುದ್ಧವಾಗಿ ಟೆಂಡರ್‌ ಪಡೆದ ಗುತ್ತಿಗೆದಾರರಿಗೆ 5 ಕೋಟಿ ರೂಪಾಯಿಗಳ ಬ್ಯಾಂಕ್ ಗ್ಯಾರಂಟಿಯನ್ನು ಕೈ ಬಿಡಲಾಗಿರುವುದು ಮಹಾ ವಂಚನೆಯ ಮುಂದುವರಿದ ಭಾಗವಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ದಿನಾಂಕ 27.01.2022ರಿಂದ ಅತೀ ಹೆಚ್ಚು ದರ ಸಲ್ಲಿಸಿದ ಗುತ್ತಿಗೆದಾರರಾದ ನ್ಯೂ ರಾಯಲ್ ಟ್ರೇಡರ್ಸ್ ಚನ್ನೈರವರು ಗುಜರಿ ಎತ್ತುವಳಿಯನ್ನು ಪ್ರಾರಂಭಿಸಿದ್ದಾರೆ. ಹಂತ ಹಂತವಾಗಿ ಗುತ್ತಿಗೆದಾರರಿಗೆ ಮುಂಗಡ ಠೇವಣಿ ಹಣವನ್ನು ಪಡೆಯದೇ ಗುಜರಿ ಎತ್ತುವಳಿಗೆ ಅವಕಾಶ ಮಾಡಿಕೊಟ್ಟಿರುವುದು ಆಡಳಿತ ಮಂಡಳಿ, ತಾಂತ್ರಿಕ ಸಮಿತಿ ಮತ್ತು ಗುತ್ತಿಗೆದಾರ ನ್ಯೂ ರಾಯಲ್ ಟ್ರೇಡರ್ಸ್ ಒಗ್ಗೂಡಿ ಭ್ರಷ್ಟಾಚಾರ ನಡೆಸಿರುವುದು ಮೇಲ್ನೋಟಕ್ಕೆ ಕಾಣಸಿಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ-ಬ್ರಹ್ಮಾವರದ ಸ್ಥಿರ ಮತ್ತು ಚರ ಸ್ವತ್ತುಗಳ ರಕ್ಷಣೆಗಾಗಿ ನೇಮಿಸಿಕೊಂಡ ಕಾರ್ಖಾನೆಯ ಸಿಬ್ಬಂದಿ ವರ್ಗ, ಕಾರ್ಖಾನೆಯ ಆಡಳಿತವನ್ನು ನೋಡಿಕೊಳ್ಳುವ ಆಡಳಿತ ಮಂಡಳಿ ಮತ್ತು ಮಾರ್ಗದರ್ಶನ ನೀಡಲು ನೇಮಿಸಿಕೊಂಡಂತಹ ತಾಂತ್ರಿಕ ಸಮಿತಿ ಮತ್ತು ಅತೀ ಹೆಚ್ಚು ಬಿಡ್‌ಅನ್ನು ನಮೂದಿಸಿ ಟೆಂಡರ್ ಪಡೆದ ನ್ಯೂ ರಾಯಲ್ ಟ್ರೇಡರ್ಸ್‌ – ಇವರುಗಳು ಜಂಟಿಯಾಗಿ ಸಕ್ಕರೆ ಕಾರ್ಖಾನೆಗೆ 14 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವಂಚನೆ ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಜಿಎಸ್‌ಟಿ ರೂಪದಲ್ಲಿ ಪಾವತಿಸಬೇಕಾಗಿದ್ದ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಿರುವುದು ಕಡತಗಳನ್ನು ಪರಿಶೀಲಿಸಿದಾಗ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. 50 ಸಾವಿರ ರೂಪಾಯಿಗಳ ಮೇಲ್ಪಟ್ಟ ಯಾವುದೇ ಸರಕು ಸಾಮಾಗ್ರಿಗಳನ್ನು ಮಾರಾಟ ಮಾಡುವಾಗ ಇ-ವೇ ಬಿಲ್, ವೇ ಬ್ರಿಜ್ ರಶೀದಿ, ಇನ್ವಾಯ್, ಗೇಟ್ ಪಾಸ್ ಇವುಗಳನ್ನು ಮಾರಾಟ ಮಾಡುವ ಸಂಸ್ಥೆ ಖಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ಆದರೆ,ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

WhatsApp Image 2023 10 10 at 12.15.26 PM

ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರು ಮಾಹಿತಿ ಹಕ್ಕಿನಡಿಯಲ್ಲಿ ನೀಡಿದ ದಾಖಲೆ ಪ್ರಕಾರ, ಗುಜರಿ ಮಾರಾಟದ 46 ಲೋಡ್, (11,74,618 ಕೆ.ಜಿ) ಮತ್ತು ಟೆಂಡರ್‌ನಲ್ಲಿ ನಮೂದಿಸಿದ ದರ 82/ಕೆ.ಜಿ. ರೂಪಾಯಿಗಳಂತೆ ಒಟ್ಟಾರೆ ಮಾರಾಟದ ಮೊತ್ತ 9,63,18,676 ರೂಪಾಯಿಗಳು. ಇದರಲ್ಲಿ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತ 1,73,37,362 ರೂಪಾಯಿಗಳೆಂದು ತಿಳಿದುಬಂದಿದೆ.

ಉಡುಪಿ ಜಿಲ್ಲಾ ರೈತ ಸಂಘ ಕಲೆ ಹಾಕಿದ ಮಾಹಿತಿ ಪ್ರಕಾರ, 85 ಲೋಡು (22,66,061 ಕೆ.ಜಿ) ಮತ್ತು ಟೆಂಡರ್‌ನಲ್ಲಿ ನಮೂದಿಸಿದ ದರ 82/ಕೆ.ಜಿ ರೂಪಾಯಿಗಳಂತೆ ಒಟ್ಟಾರೆ ಮಾರಾಟದ ಮೊತ್ತ: 18,58,17,002 ರೂಪಾಯಿಗಳು. ಹಾಗೂ ಸರ್ಕಾರಕ್ಕೆ ಪಾವತಿಸಬೇಕಾದ ಜಿಎಸ್‌ಟಿ ಮೊತ್ತ: 3,34,47,060 ರೂಪಾಯಿಗಳೆಂದು ತಿಳಿದುಬಂದಿರುತ್ತದೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಜಿಲ್ಲಾ ‌ಕಾಂಗ್ರೆಸ್ ಕಿಸನ್ ಘಟದ ಅಧ್ಯಕ್ಷ ಶಶಿಧರ್ ಶೆಟ್ಟಿ, “ಅಸ್ಕರ್ ಫರ್ನಾಂಡೀಸ್ ರವರ ಅವಿರತ ಪರಿಶ್ರಮದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಕೃಷಿ ಬೆಳೆಯುವ ರೈತರಿಗಾಗಿ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಿತ್ತು. ಉಜಿರೆಯಿಂದ ಬೈಂದೂರುವರೆಗೆ ಎಲ್ಲ ರೈತರು ಈ ಕಾರ್ಖಾನೆಗೆ ಸಕ್ಕರೆಗಾಗಿ ಕಬ್ಬು ಬೆಳೆದು ಕೊಡುತ್ತಿದ್ದರು. ಆದರೆ, ಕಳೆದ ಹಲವಾರು ವರ್ಷಗಳಿಂದ ಈ ಕಾರ್ಖಾನೆ ಮುಚ್ಚಿದೆ. ಕಳೆದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ರೈತರ ಬಾಕಿ ಪಾವತಿಗೆ 12 ಕೋಟಿ ಕೊಟ್ಟಿದ್ದರು. ಆದರೆ, ನಂತರ ಬಂದ ಬಿಜೆಪಿ ಸರ್ಕಾರದ ಯಡಿಯೂರಪ್ಪನವರು ಕೃಷಿ ಬಜೆಟ್ ಎಂದು ವಿಶೇಷ ಬಜೆಟ್ ಮಂಡಿಸಿದ್ದರು. ಆದರೆ, ಅದರಲ್ಲಿ ಉಡುಪಿ ಜಿಲ್ಲೆಯಲ್ಲಿ ರೈತರಿಗಾಗಿ ಏನೂ ಕೂಡ ನೀಡಲಿಲ್ಲ. ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಬದಲಾದ ನಂತರ ಹೊಸ ಪ್ರಾಜೆಕ್ಟ್‌ನ ತಯಾರಿಗಾಗಿ ನವೀಕರಣ ಗೊಳಿಸುವ ನೆಪದಲ್ಲಿ 21 ಕೋಟಿ ರೂಪಾಯಿಗೆ ಮಾರಿ, ಅದರಲ್ಲಿ 14 ಕೋಟಿಗಿಂತಲೂ ಹೆಚ್ಚು ಸರ್ಕಾರ ಮತ್ತು ರೈತರಿಗೆ ವಂಚನೆ ಮಾಡಲಾಗಿದೆ. ಗದ ಸಕ್ಕರೆ ಕಾರ್ಖಾನೆ ಇರುವ 100 ಎಕರೆ ಜಾಗ ರೈತರ ಆಸ್ತಿ, ಅದು ಉಡುಪಿ ಜಿಲ್ಲೆಯ ರೈತರಿಗೆ ಸಿಗಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿರಂತರ” ಎಂದು ಹೇಳಿದರು.

“ಗುತ್ತಿಗೆ ಪಡೆದ ನ್ಯೂ ರಾಯಲ್ ಟ್ರೇಡರ್ಸ್ ಟೆಂಡರ್‌ನಲ್ಲಿ ಜಿಎಸ್‌ಟಿ ಹೊರತುಪಡಿಸಿ ಕೆ.ಜಿ.ಗೆ 82 ರೂಪಾಯಿಗಳ ದರವನ್ನು ನಮೂದಿಸಿದೆ. ಆದರೆ ನಾವು ಮಾಹಿತಿ ಪಡೆದು ಕಲೆ ಹಾಕಿದ ಪ್ರಕಾರ ಸಾಗಾಟದ ಇ-ವೇ ಬಿಲ್ ಮತ್ತು ಹೊಸದಾಗಿ ಇನ್ವಾಯ್ಸ್‌ಗಳನ್ನು ರಚಿಸಿ ಸರ್ಕಾರದ ಬೊಕ್ಕಸಕ್ಕೆ (ಜಿಎಸ್‌ಟಿ) ಮತ್ತು ಕಾರ್ಖಾನೆಗೆ ವಂಚನೆ ಮಾಡಲು ಟೆಂಡರ್‌ನಲ್ಲಿ ನಮೂದಿಸಿದ ದರಕ್ಕಿಂತ ಕಡಿಮೆ ಮೊತ್ತ ಕೆ.ಜಿ.ಗೆ 30 ರೂಪಾಯಿಗಳನ್ನು ನಮೂದಿಸಿ ಕಾರ್ಖಾನೆಯವರು ಪಾವತಿಸಿ ಜಿಎಸ್‌ಟಿ ಮೊತ್ತಕ್ಕೆ ಸರಿದೂಗಿಸುವ ವ್ಯರ್ಥ ಪ್ರಯತ್ನ ಮಾಡಿರುವುದು ಬ್ರಹ್ಮಾಂಡ ಭ್ರಷ್ಟಾಚಾರದ ಇನ್ನೊಂದು ಮುಖವಾಗಿದೆ” ಎಂದು ಅವರು ಆರೋಪಿಸಿದ್ದಾರೆ.

“ಈ ಎಲ್ಲ ಹಗರಣಗಳು ಉಡುಪಿ ಜಿಲ್ಲಾ ರೈತ ಸಂಘದ ಗಮನಕ್ಕೆ ಬಂದಾಗಿನಿಂದ ಬೇರೆ ಬೇರೆ ಮೂಲಗಳಿಂದ ಮಾಹಿತಿಗಳನ್ನು ಕಲೆಹಾಕಿ ಪೋಲೀಸ್ ಹಾಗೂ ಸಂಬಂಧಪಟ್ಟ ಎಲ್ಲ ಇಲಾಖೆಯ ಮುಖ್ಯಸ್ಥರಿಗೆ ದೂರು ಸಲ್ಲಿಸಿದ್ದೇವೆ. ಆದರೆ, ಇಲ್ಲಿಯ ತನಕ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ. ಹೀಗಾಗಿ, ವಂಚನೆ ಎಸಗಿರುವ ತಪ್ಪಿತಸ್ಥರನ್ನು ಬಂಧಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದರೊಂದಿಗೆ ಕಾರ್ಖಾನೆಗೆ ಹಾಗೂ ಸರ್ಕಾರಕ್ಕೆ ಉಂಟಾದ ನಷ್ಟವನ್ನು ತಪ್ಪಿತಸ್ಥರಿಂದ ವಸೂಲಿಮಾಡಬೇಕು ಎಂದುಜ ಒತ್ಥಾಯಿಸಿ ನಿರಂತರ ಪ್ರತಿಭಟನೆ ಮತ್ತು ಕಾನೂನು ರೀತಿಯ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ” ಎಂದು ಅವರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X