ಉಡುಪಿ ನಗರದ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಬೈಕ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ, ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಾಹಿತಿ ತಿಳಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ, ತನ್ನ ಜೀಪಿನಲ್ಲಿಯೇ ಗಾಯಾಳುಗಳನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸುವ ಮೂಲಕ ಬೈಕ್ ಸವಾರರನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ಬೈಕ್ ಚಲಾಯಿಸುತ್ತಿದ್ದ ನಿಖಿಲ್ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರೆ, ಸಹ ಸವಾರ ಸಂದೀಪ್‌ಗೆ ಪ್ರಜ್ಞೆ ಮರಳಿದೆ. ಈ ಇಬ್ಬರೂ ಪಡುಬಿದ್ರೆ ನಿವಾಸಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವಿರುದ್ಧ ದಿಕ್ಕಿನಲ್ಲೇ ಜೀಪ್ ಚಲಾವಣೆ
ಗಂಭೀರವಾಗಿ ಗಾಯಗೊಂಡ ಬೈಕ್ ಸವಾರರನ್ನು ತಮ್ಮ ಜೀಪಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ವಿಶು ಶೆಟ್ಟಿ ಅವರು ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಿಂದಲೇ ವಾಹನ ಚಲಾಯಿಸಬೇಕಾಯಿತು.
ಅಬ್ಕೋ ಸ್ಟೀಲ್‌ನಿಂದ ಹೈಟೆಕ್ ಆಸ್ಪತ್ರೆಗೆ ಬರಬೇಕಾದರೆ ಸುಮಾರು 1 ಕಿ.ಮೀ.ದೂರದ ಬಲಾಯಿಪಾದೆಗೆ ಹೋಗಿಯೇ ವಾಹನವನ್ನು ತಿರುಗಿಸಿಕೊಂಡು ಬರಬೇಕಾದ ಪರಿಸ್ಥಿತಿಯಿದೆ. ಆದರೆ ಜೀವ ಉಳಿಸುವ ಈ ಗೋಲ್ಡನ್ ಹವರ್‌ನಲ್ಲಿ ಈ ರಿಸ್ಕ್ ತೆಗೆದುಕೊಳ್ಳಲು ಇಚ್ಚಿಸದ ವಿಶು ಶೆಟ್ಟಿ ಅವರು, ವಿರುದ್ಧ ದಿಕ್ಕಿನಲ್ಲಿಯೇ ಹೆಡ್‌ಲೈಟ್ ಹಾಕಿ ವಾಹನ ಚಲಾಯಿಸಿ ಗಾಯಾಳುಗಳ ಪ್ರಾಣ ರಕ್ಷಣೆ ಮಾಡುವ ಅಪಾಯಕಾರಿ ಪ್ರಯತ್ನ ನಡೆಸಿದ್ದಾರೆ.
ಸಾಮಾನ್ಯವಾಗಿ ರಕ್ತ ಸುರಿಯುತ್ತಿದ್ದರೆ ಗಾಯಾಳುಗಳ ನೆರವಿಗೆ ಖಾಸಗಿ ವಾಹನಗಳು ನೆರವಿಗೆ ಬರುವುದು ಕಡಿಮೆ. ಆದರೆ ವಿಶು ಶೆಟ್ಟಿ ಅವರು ಇದನ್ನು ಲೆಕ್ಕಿಸದೆ ನೈಜ ಅಪತ್ಭಾಂಧವನಾಗಿ ಮಾನವೀಯತೆ ಮೆರೆದಿರುವುದು ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಪ್ರಕರಣದ ಬಗ್ಗೆ ಉಡುಪಿ ಸಂಚಾರಿ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
