ಕಳೆದ 2 ವರ್ಷಗಳ ಹಿಂದೆ ಮಾನಸಿಕ ಅಸ್ವಸ್ಥ ಬಿಹಾರದ ಮಹಿಳೆ ತನ್ನ ಕುಟುಂಬ ತೊರೆದಿದ್ದು ಬೀದಿಪಾಲಾಗಿ ಇದೀಗ ಮರಳಿ ಕುಟುಂಬಕ್ಕೆ ಸೇರಿದಾಗ ಕುಟುಂಬದ ಸಂತೋಷದ ಆಕ್ರಂದನ ಮುಗಿಲು ಮುಟಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಕಳೆದ ವರ್ಷ ಉಡುಪಿ ನಗರದ ಬೀದಿಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮಕ್ಕೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸಿ ತನ್ನ ಊರಾದ ಬಿಹಾರದ ಮಾಹಿತಿ ನೀಡಿ ಕುಟುಂಬ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ರಮಾದೇವಿ ಆಶ್ರಮದ ಚಿಕಿತ್ಸೆಯ ಜೊತೆಗೆ ದೈನಂದಿನ ಚಟುವಟಿಕೆಗಳಾದ ಯೋಗ ಧ್ಯಾನ ಕೃಷಿ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ, ಆಪ್ತ ಸಮಾಲೋಚನೆಗೆ ಸ್ಪಂದಿಸಿ ಸಹಜ ಸ್ಥಿತಿಗೆ ಬಂದು ತನ್ನ ಕುಟುಂಬದ ವಿಳಾಸ ಹಿನ್ನೆಲೆಯ ವಿವರಗಳನ್ನು ನೀಡಿದ್ದರು. ಈ ಮಾಹಿತಿಯ ಮೇರೆಗೆ ಮುಂಬೈನ ಶ್ರದ್ಧಾ ಪುನರ್ವಸತಿ ಕೇಂದ್ರ ಕುಟುಂಬಕ್ಕೆ ಹಸ್ತಾಂತರಿಸುವಲ್ಲಿ ಯಶಸ್ವಿಯಾದರು. ರಮಾದೇವಿಯನ್ನು ಕುಟುಂಬ ಸೇರಿಸುವ ಸಮಯ ಮಕ್ಕಳು ಹಾಗೂ ಕುಟುಂಬಸ್ಥರು ಭಾವೊದ್ವೇಗದಿಂದ ವಿಸ್ಮಿತರಾಗಿ ಸಂತೋಷದಿಂದ ಕೂಗಿ ಪ್ರೀತಿಯಿಂದ ಆಲಂಗಿಸಿದ ದೃಶ್ಯ ನಿಜವಾಗಿಯೂ ಬಹಳ ಭಾವುಕತೆಯಿಂದ ಕೂಡಿತ್ತು. ಆರೈಕೆ ಹಾಗೂ ಸಲಹಿದ ಆಶ್ರಮದ ಮುಖ್ಯಸ್ಥರಾದ ಡಾ. ಉದಯ್ ಕುಮಾರ್ ದಂಪತಿಗಳು ಹಾಗೂ ಆಶ್ರಮದ ಸಿಬ್ಬಂದಿಗಳಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ಬೀದಿಯಲ್ಲಿ ತಿರುಗಾಡುವ ಮನೋರೋಗಿಗಳನ್ನು ನಿರ್ಲಕ್ಷ ಮಾಡದೇ ಸ್ಪಂದಿಸಿದಲ್ಲಿ ಅಂತಹ ಅಸಹಾಯಕರು ಪುನರ್ಜನ್ಮ ಪಡೆದು ಕುಟುಂಬ ಸೇರುತ್ತಾರೆ. ನಾನು ಉಡುಪಿಯಲ್ಲಿ ರಕ್ಷಿಸಲ್ಪಟ್ಟ ನೂರಾರು ಮನೋರೋಗಿಗಳಿಗೆ ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮ ಹಾಗೂ ಸ್ನೇಹಾಲಯ ಪುನರ್ಜನ್ಮ ನೀಡಿ ಕುಟುಂಬ ಸೇರಿದ ಘಟನೆ ಹಿಂದೆ ಬಹಳಷ್ಟು ನಡೆದಿದೆ. ಹಿರಿಯ ಅಧಿಕಾರಿಗಳು ಇಂತಹ ಮನನೊಂದವರ ರಕ್ಷಣೆಗೆ ಸ್ಪಂದಿಸಬೇಕು. ಕೆಲವು ಬಾರಿ 5 ನಿಮಿಷದ ಕಾನೂನು ಪ್ರಕ್ರಿಯೆಗೆ 5 ದಿನ ಕಾಯಬೇಕಾದ ಸಂದರ್ಭ ಬಂದಿದೆ. ಜಿಲ್ಲಾಡಳಿತದ ವರ್ತನೆ ಹಲವು ಬಾರಿ ನೋವು ತಂದಿದೆ. ಇಂತಹ ಮಾನವೀಯ ಕೆಲಸಗಳಿಗೆ ಸರಕಾರಿ ಅಧಿಕಾರಿಗಳು ಸ್ಪಂದಿಸಿದಲ್ಲಿ ಸಮಾಜವೂ ಕೈ ಜೋಡಿಸುತ್ತದೆ ಎಂದು ಹೇಳಿದರು.
