ಸುಮಾರು 1.2 ಕಿ.ಮೀ ಉದ್ದದ, 23.53 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಗೆ ಅಧಿಕಾರಿಗಳು ತಿಳಿಸಿದಂತೆ ಸೋಮವಾರದಿಂದಲೇ(ಡಿ.16) ಚಾಲನೆ ಸಿಕ್ಕಿದೆ. 18 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶನಿವಾರ ವಸಂತ ಮಂಟಪದಲ್ಲಿ ನಡೆದ ಅಂಬಲಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತ ಸಾರ್ವಜನಿಕ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಅದರಂತೆ ಜೆಸಿಬಿಗಳು ಕಾರ್ಯಾಚರಣೆ ಆರಂಭಿಸಿದೆ.

ಈಗಾಗಲೇ ಅಂಬಲಪಾಡಿ ಜಂಕ್ಷನ್ ಎರಡು ಬದಿಯಲ್ಲಿ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿರ್ಬಂಧಿಸಿದ್ದಾರೆ. ಆದರೆ, ಸಾರ್ವಜನಿಕರು ಬದಲಿ ವ್ಯವಸ್ಥೆ ಬಗ್ಗೆ ಗೊಂದಲದಲ್ಲಿದ್ದು, ಅಂಬಲಪಾಡಿ ಹಾಗೂ ಬ್ರಹ್ಮಗಿರಿ ಸಂಪರ್ಕಿಸುವ ಬದಲಿ ವ್ಯವಸ್ಥೆ ಬಗ್ಗೆ ಯಾವುದೇ ಸೂಚನೆಗಳನ್ನು ನೀಡದ ಕಾರಣ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
ಬ್ರಹ್ಮಗಿರಿಯಿಂದ ಅಂಬಲಪಾಡಿ ಕ್ರಾಸ್ ಆಗುವ ಬದಲಿ ವ್ಯವಸ್ಥೆಯ ಬಗ್ಗೆ ಯಾವುದೇ ಸೂಚನೆಗಳನ್ನು ನೀಡದ ಕಾರಣ ಬೆಳಿಗ್ಗೆ ಮತ್ತು ಸಂಜೆ ಸಮಯ ವಾಹನದಟ್ಟಣೆ ಹೆಚ್ಚಾಗಿ ಸವಾರರಿಗೆ ತೀವ್ರ ತೊಂದರೆಯಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಉಡುಪಿ ನಗರದ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ ಅವ್ಯವಸ್ಥೆಯಿಂದ ಬೇಸತ್ತಿರುವಾಗಲೇ ಜನತೆ ಮತ್ತೊಂದು ಮೇಲ್ಸೇತುವೆ ಕಾಮಗಾರಿಯನ್ನು ಸಹಿಸಿಕೊಳ್ಳಬೇಕಾಗಿದೆ. ಅದರ ಜೊತೆಯಲ್ಲೆ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಹ ನಿಧಾನಗತಿಯಲ್ಲಿ ಸಾಗುತ್ತಿದೆ. ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇತುವೆ ಕಾಮಗಾರಿ ಬೇಡಿಕೆ ಹಲವು ವರ್ಷಗಳಿಂದ ಇದ್ದವು. ಇಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು ಈ ಸಮಸ್ಯೆಗೆ ಪೂರ್ಣವಿರಾಮ ಹಾಕಲು ಮೇಲ್ಸೇತುವೆ ಮಾಡಬೇಕು ಎಂಬ ಕೂಗು ಕೇಳಿ ಬಂದಿದ್ದವು. ಇದಕ್ಕೆ ಪೂರಕವಾಗಿ ಹೆದ್ದಾರಿ ಇಲಾಖೆ ಯೋಜನೆಯನ್ನು ಸಿದ್ಧಪಡಿಸಿತ್ತು.

ಇಂದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಈದಿನ ಡಾಟ್ ಕಾಮ್ ಜೊತೆ ಮಾತನಾಡಿದ ಉಡುಪಿ ನಗರ ಸಭೆಯ ಸದಸ್ಯ ರಮೇಶ್ ಕಾಂಚನ್, “ಈಗಾಗಲೇ ಕರಾವಳಿ ಭಾಗದ ಕುಂದಾಪುರ, ಕೋಟ, ಬ್ರಹ್ಮಾವರ, ಉಡುಪಿ ಬೈಪಾಸ್ ನಲ್ಲಿ ನಿರ್ಮಿಸಲ್ಪಟ್ಟ ಅಂಡರ್ ಪಾಸ್, ಓವರ್ ಪಾಸ್ ಅವೈಜ್ಞಾನಿಕವಾಗಿದ್ದು, ಉಡುಪಿ ಕರಾವಳಿ ಭಾಗದ ಜನರು ರಾಷ್ಟ್ರೀಯ ಹೆದ್ದಾರಿ ಅಸಮರ್ಪಕ ಕಾಮಗಾರಿಯ ಬಗ್ಗೆ ರೋಸಿ ಹೋಗಿದ್ದಾರೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ಸರ್ವಿಸ್ ರಸ್ತೆಯ ಎರಡು ಭಾಗದಲ್ಲಿ ಮಳೆ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಬಹಳ ತೊಂದರೆಗಳು ಉಂಟಾಗುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಈಗಾಗಲೇ ಮಲ್ಪೆ- ಮೊಣಕಾಳ್ಮೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಕುಂಠಿತವಾಗಿದ್ದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಓಡಾಡುವ ವಾಹನಗಳು ಅಂಬಲಪಾಡಿ -ಕಿದಿಯೂರು ರಸ್ತೆಯಿಂದ ಓಡಾಡುತ್ತಿರುವುದು ಕೂಡ ಗೊತ್ತಿರುವ ವಿಷಯ ಆಗಿದೆ. ಈ ಮಧ್ಯೆ ತರಾತುರಿಯಲ್ಲಿ ರಾತೋರಾತ್ರಿ ಅಂಬಲಪಾಡಿ ಜಂಕ್ಷನ್ ನಲ್ಲಿ ಅಂಡರ್ ಪಾಸ್ ಕಾಮಗಾರಿಯನ್ನು ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೆ, ಕಾಮಗಾರಿಯ ಮಾಹಿತಿ ಫಲಕ ಹಾಕದೆ ಕಾಮಗಾರಿ ಪ್ರಾರಂಭಿಸಿರುವುದು ಬಹಳಷ್ಟು ಗೊಂದಲಕ್ಕೆ ಕಾರಣವಾಗಿದೆ” ಎಂದು ಹೇಳಿದರು.

ಸಂಚಾರ ವ್ಯವಸ್ಥೆಯ ಸರಿಯಾದ ಯೋಜನೆಗಳಿಲ್ಲದೆ ಒಳಚರಂಡಿ, ಸರ್ವಿಸ್ ರಸ್ತೆಗಳ ವ್ಯವಸ್ಥೆಗಳಿಲ್ಲದೆ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸಿದ್ದು ಸರಿಯಾದ ಕ್ರಮವಲ್ಲ ಎಂದು ಹೇಳಿದರು. ಹಾಗೆಯೇ ಸಂಸದರಾದ ಶ್ರೀನಿವಾಸ ಪೂಜಾರಿ ಹಾಗೂ ಶಾಸಕರಾದ ಯಶ್ ಪಾಲ್ ಸುವರ್ಣರವರು ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರಲ್ಲಿ ಚರ್ಚಿಸಿದಾಗ ಸಮಸ್ಯೆ ಬಗೆಹರಿಸುವ ಬಗ್ಗೆ ಆಶ್ವಾಸನೆ ಕೊಟ್ಟಿರುವ ನಿಟ್ಟಿನಲ್ಲಿ ಸಂಸದರು, ಶಾಸಕರು ಮಧ್ಯಪ್ರವೇಶಿಸಿ ಜನರಲ್ಲಿ ಉಂಟಾಗಿರುವ ಗೊಂದಲಕ್ಕೆ ತೆರೆ ಎಳೆಯಬೇಕೆಂದು ತಿಳಿಸಿದರು.

ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕಿರಣ್ ಕುಮಾರ್ ಉದ್ಯಾವರ ಮಾತನಾಡಿ, “ಈಗಾಗಲೇ ಹಲವಾರು ಸಮಸ್ಯೆಗಳನ್ನು ಎದುರಿಸಿ ಅಂಬಲಪಾಡಿ ಹತ್ತಿರ ರಾಷ್ಟ್ರೀಯ ಹೆದ್ದಾರಿಯ ಕೆಲಸವು ಪ್ರಾರಂಭ ಗೊಂಡಿದೆ. ಅಲ್ಲದೆ ಈ ಕೆಲಸವು ಸಂಪೂರ್ಣ ಗೊಳ್ಳಲು ಸರಿ ಸುಮಾರು ಎರಡು ವರ್ಷ ತಗುಲಬಹುದುದು ಎಂದು ಅಂದಾಜಿಸಲಾಗಿದೆ. ಈಗಾಗಲೇ ಹೆದ್ದಾರಿಯಲ್ಲಿ ವಾಹನ ದಟ್ಟನೆ ಜಾಸ್ತಿಯಾಗಿದೆ. ಮುಂಬರುವ ಏಪ್ರಿಲ್ – ಮೇ ತಿಂಗಳಿನಲ್ಲಿ ಇನ್ನೂ ಜಾಸ್ತಿ ಆಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಕೆಲಸವು ಶುರುವಾಗಿದ್ದರಿಂದ ವಾಹನ ಗಳು ಕಿನ್ನಿಮುಲ್ಕಿ ಯಿಂದ ಮುಂದೆ ಬರುವಾಗ ರಾಷ್ಟ್ರೀಯ ಹೆದ್ದಾರಿ ಪಥ ಬದಲಾಯಿಸಿ ಸರ್ವಿಸ್ ರಸ್ತೆಗೆ ಹೋಗಲು ಅನುವು ಮಾಡಿ ಕೊಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ವಾಹನ ಗಳು ಹಾಗೂ ಕಿದಿಯೂರ್, ಅಂಬಲಪಾಡಿ ಯಿಂದ ಬರುವ ವಾಹನಗಳು ಕೂಡಾ ಸರ್ವಿಸ್ ರಸ್ತೆಯನ್ನೇ ಬಳಸಬೇಕಾಗಿದೆ. ಮುಂದೆ ಕರಾವಳಿಯಿಂದ ಮಂಗಲೋರ್ ಕಡೆಗೆ ಹೋಗುವ ವಾಹನಗಳು ಹಾಗೂ ಉಡುಪಿ ನಗರದ ವಾಹನಗಳು ಇನ್ನೊಂದು ಬದಿಯ ಸರ್ವಿಸ್ ರಸ್ತೆಯನ್ನು ಅವಲಂಬಿಸಬೇಕಾಗಿದೆ.

ಕಿನ್ನಿ ಮುಲ್ಕಿಯಿಂದ ಕರಾವಳಿ ಜಂಕ್ಷನ್ ವರೆಗೆ ಹೆದ್ದಾರಿಯ ಎರಡೂ ಕಡೆ. ಇರುವ ಸರ್ವಿಸ್ ರಸ್ತೆಯಲ್ಲಿ ಯಾವುದೇ ದ್ವಿ ಚಕ್ರ, ತ್ರಿ ಚಕ್ರ, ನಾಲ್ಕು ಚಕ್ರ ಹಾಗೂ ಇನ್ನಿತರ ಘನ ಹಾಗೂ ಮಧ್ಯಮ ಗಾತ್ರದ ಯಾವುದೇ ವಾಹನವನ್ನು ನಿಲ್ಲಿಸದ ಹಾಗೆ ಕ್ರಮ ಕೈ ಗೊಳ್ಳಬೇಕು. ಇದರಿಂದ ಮುಂದಕ್ಕೆ ರಸ್ತೆ ಯಲ್ಲಿ ಬ್ಲಾಕ್ ಆಗದೇ ಆಂಬುಲೆನ್ಸ್, ಶಾಲಾ ವಾಹನ, ಅಲ್ಲದೆ ಇನ್ನಿತರ ಅಗತ್ಯ ವಸ್ತುಗಳ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ನಮ್ಮ ವಿನಂತಿ ಏನೆಂದೆರೆ ಸರ್ವಿಸ್ ರಸ್ತೆಯಲ್ಲಿ ಯಾವುದೇ. ವಾಹನ ನಿಲ್ಲಿಸದ ಹಾಗೆ ನೋಡಿಕೊಳ್ಳಲು ಹೆಚ್ಚುವರಿ ಯಾಗಿ ಪೊಲೀಸ್ ಸಿಬ್ಬಂದಿ ಯನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕಾಗಿ ಉಡುಪಿ ಜಿಲ್ಲಾಧಿಕಾರಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಕಿರಣ್ ಕುಮಾರ್ ವಿನಂತಿ ಮಾಡಿದ್ದಾರೆ.

ಬದಲಿ ಮಾರ್ಗದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮದ ಅಂಬಲಪಾಡಿ ಜಂಕ್ಷನ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಸ್ತೆಯಲ್ಲಿ ದಿನಾಂಕ:16-12-2024 ರಂದು ರಸ್ತೆ ಕಾಮಗಾರಿ ಪ್ರಾರಂಭವಾಗಿರುತ್ತದೆ. ಇದರಿಂದಾಗಿ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡೆತಡೆಗಳು ಉಂಟಾಗುತ್ತಿದ್ದು, ಈ ಬಗ್ಗೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ವಾಹನದ ಸಂಚಾರಕ್ಕೆ ಬದಲಿ ವ್ಯವಸ್ಥೆ ಕುರಿತು ಆದೇಶ ಹೊರಡಿಸುವಂತೆ ಉಲ್ಲೇಖದ ಪತ್ರದಲ್ಲಿ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.
ಸದರಿಯವರ ಕೋರಿಕೆಯನ್ವಯ ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ಕಲಂ 221(ಎX2) & (5) ರಸ್ತೆಯ, ಅಂಬಲಪಾಡಿ ಜಂಕ್ಷನ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವವರೆಗೂ ಎಲ್ಲಾ ವಾಹನಗಳಿಗೆ ಬದಲಿಮಾರ್ಗದಲ್ಲಿ ಸಂಚಾರ ವ್ಯವಸ್ಥೆ ಕಲ್ಪಿಸುವುದು ಅಗತ್ಯವೆಂದು ಮನಗಂಡು ಬದಲಿ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿ, ಜಿಲ್ಲಾಡಳಿತ ಆದೇಶ ಹೊರಡಿಸಿದೆ.
- ಸ್ವಾಗತ ಗೋಪುರದಿಂದ-ಅಂಬಲಪಾಡಿ-ಕರಾವಳಿ ಜಂಕ್ಷನ್ ವರೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ(One Way) ಎಲ್ಲ ವಾಹನಗಳು ಸಂಚರಿಸುವುದು.
- ಕರಾವಳಿಯಿಂದ ಅಂಬಲಪಾಡಿ-ಸ್ವಾಗತ ಗೋಪುರದ ಕಡೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲ ವಾಹನಗಳು ಸಂಚರಿಸುವುದು.
- ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ-ಕಿದಿಯೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ- ಕಾಂಗ್ರೆಸ್ ಭವನ-ಅಗ್ನಿಶಾಮಕ ದಳದ ಕಡೆಯಿಂದ ಸ್ವಾಗತ ಗೋಪುರದವರೆಗೆ ಬಂದು ನಂತರ ಸರ್ವೀಸ್ ರಸ್ತೆಯಿಂದ ಅಂಬಲಪಾಡಿ ಕಡೆಗೆ ಹೋಗುವುದು.
- ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ಕರಾವಳಿ ಕಡೆಗೆ ಹೋಗುವ ಎಲ್ಲ ವಾಹನಗಳು ಬ್ರಹ್ಮಗಿರಿ: ಕಡೆಯಿಂದ ಪೊಲೀಸ್ ಅಧೀಕ್ಷಕರ ಕಛೇರಿ ರಸ್ತೆಯಿಂದಾಗಿ ಬನ್ನಂಜೆ ಕಡೆಗೆ ಹೋಗುವುದು.
ಒಟ್ಟಿನಲ್ಲಿ 23.53 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಅಂಬಲಪಾಡಿ ಮೇಲ್ಸೇತುವೆ ಮುಂದಿನ 18 ತಿಂಗಳೊಳಗೆ ಮುಗಿದು ಜನ ಸಾಮಾನ್ಯರಿಗೆ ಅನುಕೂಲ ಕಲ್ಪಿಸುತ್ತದೆಯೇ ಎಂದು ಕಾದುನೋಡಬೇಕಾಗಿದೆ.
ಒಂದು ವೇಳೆ ಮುಗಿಯದೇ ಇದ್ದಲ್ಲಿ ಸಂತೆಕಟ್ಟೆ ಪ್ಲೈಓವರ್ ಮತ್ತು ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಜೊತೆ ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸೇರ್ಪಡೆಗೊಳ್ಳುವುದರಲ್ಲಿ ಸಂದೇಹವಿಲ್ಲ.
