ದಲಿತ ಸಂಘಟನೆಗಳು ಹಾಗೂ ಇತರ ಸಮಾನ ಮನಸ್ಕ ಸಂಘನೆಗಳ ನೇತೃತ್ವದಲ್ಲಿ ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರ 133ನೇ ಜನ್ಮ ದಿನಾಚರಣೆ ಪ್ರಯುಕ್ತ ಶಕ್ತಿಶಾಲಿ ಭಾರತಕ್ಕಾಗಿ ಭೀಮ ಸಂವಿಧಾನ ಮಹಾನಾಯಕ ಜೈ ಭೀಮ್ ರ್ಯಾಲಿಯನ್ನು ಏ.14ರಂದು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಹಬಾಳ್ವೆ ಉಡುಪಿ ಅಧ್ಯಕ್ಷ ಹಾಗೂ ಹಿರಿಯ ಚಿಂತಕ ಪ್ರೊ.ಫಣಿರಾಜ್ ತಿಳಿಸಿದರು.
ಉಡುಪಿಯಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೈಂದೂರಿನಿಂದ ಹೊರಡುವ ರ್ಯಾಲಿಯು ಕುಂದಾಪುರ, ಬ್ರಹ್ಮಾವರ, ಹೆಬ್ರಿ, ಕಾರ್ಕಳ, ಕಾಪು ಮಾರ್ಗವಾಗಿ ಉಡುಪಿಯಲ್ಲಿ ಸಮಾಪ್ತಿಗೊಳ್ಳಲಿದೆ. ಬೆಳಗ್ಗೆ 9ಗಂಟೆಗೆ ರ್ಯಾಲಿಗೆ ಬೈಂದೂರು ಶ್ರೀಸೇನೇಶ್ವರ ದೇವಸ್ಥಾನದ ಎದುರು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಚಾಲನೆ ನೀಡಲಿದ್ದಾರೆ ಎಂದರು.
ಪೂರ್ವಾಹ್ನ 11ಗಂಟೆಗೆ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಡೆಯುವ ಪ್ಯಾಲಿಯಲ್ಲಿ ಪ್ರಗತಿಪರ ಚಿಂತಕ ಪ್ರೊ. ಫಣಿರಾಜ್, ಮಧ್ಯಾಹ್ನ 12ಗಂಟೆಗೆ ಬ್ರಹ್ಮಾವರ ಅಂಬೇಡ್ಕರ್ ವೃತ್ತದಲ್ಲಿ ಕುಂದಾಪುರ ಸಹಬಾಳ್ವೆಯ ರಾಮಕೃಷ್ಣ ಹೇರ್ಳೆ, ಮಧ್ಯಾಹ್ನ 1:30ಕ್ಕೆ ಹೆಬ್ರಿ ಬಸ್ ನಿಲ್ದಾಣದಲ್ಲಿ ದಸಂಸ ಮುಖಂಡ ಟಿ.ಮಂಜು ನಾಥ ಗಿಳಿಯಾರು, 3ಗಂಟೆಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ಪತ್ರಕರ್ತ ಶಶಿಧರ ಹೆಮ್ಮಾಡಿ, ಸಂಜೆ 5ಗಂಟೆಗೆ ಕಾಪು ಬಸ್ ನಿಲ್ದಾಣದಲ್ಲಿ ಉಪನ್ಯಾಸಕ ಜಯ ಪ್ರಕಾಶ್ ಶೆಟ್ಟಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.
ಸಂಜೆ 6:30ಕ್ಕೆ ಉಡುಪಿ ಹುತಾತ್ಮರ ಚೌಕಿ ಬಳಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಎಚ್.ಎಸ್.ಅನುಪಮ ಸಮಾರೋಪ ಭಾಷಣ ಮಾಡ ಲಿರುವರು. ಮುಖ್ಯ ಅತಿಥಿಗಳಾಗಿ ಎದ್ದೇಳು ಕರ್ನಾಟಕ ಸಂಚಾಲಕ ಕೆ.ಎಲ್. ಅಶೋಕ್, ಗೌರಿ ಬೆಂಗಳೂರು, ಫಾ.ವಿಲಿಯಂ ಮಾರ್ಟಿಸ್ ಮೊದಲಾದವರು ಭಾಗವಹಿಸಲಿರುವರು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡರಾದ ಸುಂದರ್ ಮಾಸ್ಟರ್, ಟಿ. ಮಂಜುನಾಥ ಗಿಳಿಯಾರು, ವಾಸುದೇವ ಮೂದೂರು, ಶ್ಯಾಂ ಸುಂದರ್ ತೆಕ್ಕಟ್ಟೆ ಮಂಜುನಾಥ ಬಾಳ್ಳುದ್ರು, ಸಿಐಟಿಯು ಮುಖಂಡ ಬಾಲಕೃಷ್ಣ ಶೆಟ್ಟಿ ಸಲಾವುದ್ದೀನ್, ಇದ್ರೀಸ್ ಹೂಡೆ ಉಪಸ್ಥಿತರಿದ್ದರು.
